Advertisement

ಪುನರ್ವಸತಿ-ಕಾಳಜಿ ಕೇಂದ್ರ ಪ್ರಾರಂಭಕ್ಕೆ ಮನವಿ

10:10 AM Oct 19, 2021 | Team Udayavani |

ಚಿಂಚೋಳಿ: ತಾಲೂಕಿನ ಗಡಿಕೇಶ್ವಾರ ಮತ್ತು ಸುತ್ತಲಿನ ಗ್ರಾಮಗಳಲ್ಲಿ ಕಳೆದ 6 ವರ್ಷಗಳಿಂದ ಭೂಮಿಯಿಂದ ಭಾರಿ ಶಬ್ದ ಉಂಟಾಗಿ ನಂತರ ಭೂಮಿ ಕಂಪಿಸುತ್ತಿರುವುದರಿಂದ ಗ್ರಾಮಸ್ಥರು ಭಯದಲ್ಲೇ ಜೀವನ ಸಾಗಿಸುತ್ತಿದ್ದಾರೆ.

Advertisement

ಗಡಿಕೇಶ್ವಾರ ಸುತ್ತಲಿನ ಗ್ರಾಮಗಳಲ್ಲಿ ಪುನರ್ವಸತಿ ಕೇಂದ್ರಗಳು ಮತ್ತು ಕಾಳಜಿ ಕೇಂದ್ರ ಪ್ರಾರಂಭಿಸಬೇಕೆಂಬ ಜನರ ಬೇಡಿಕೆ ಹೆಚ್ಚಾಗಿದೆ. ಗಡಿಕೇಶ್ವಾರದಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಉಂಟಾಗುತ್ತಿರುವ ಭೂಮಿ ಕಂಪನದಿಂದ ಭಯದಲ್ಲೇ ಕಾಲ ಕಳೆಯುತ್ತಿರುವ ಜನರಿಗೆ ಗಡಿಕೇಶ್ವಾರ ಗ್ರಾಮದಲ್ಲಿ ಕಾಳಜಿ ಕೇಂದ್ರ ಮತ್ತು ಮಹಿಳೆಯರಿಗೆ-ಪುರುಷರಿಗೆ ಪ್ರತ್ಯೇಕವಾಗಿ ಪುನರ್ವಸತಿ ಕೇಂದ್ರಗಳನ್ನು ಕಳೆದ ಎರಡು ದಿನಗಳಿಂದ ಪ್ರಾರಂಭಿಸಲಾಗಿದೆ.

ಅ. 12ರಂದು ರಾತ್ರಿ 9:58ಕ್ಕೆ ರಿಕ್ಟರ್‌ ಮಾಪನದಲ್ಲಿ 4.1 ತೀವ್ರತೆ ದಾಖಲಾಗಿರುವುದರಿಂದ ಗಾಬರಿಯಿಂದ ಕೆಲವರು ತಮ್ಮ ಸಾಮಾನುಗಳನ್ನು ವಾಹನಗಳಲ್ಲಿ ತುಂಬಿಕೊಂಡು ಸಂಬಂಧಿಕರ ಮನೆಗಳಿಗೆ ಹೋಗಿದ್ದಾರೆ.

ಗಡಿಕೇಶ್ವಾರ, ಹೊಸಳ್ಳಿ, ತೇಗಲತಿಪ್ಪಿ, ಹಲಚೇರ, ಕೊರವಿ, ರಾಮನಗರ ತಾಂಡಾ, ಕುಪನೂರ, ಬಂಟನಳ್ಳಿ,ಬೆನಕನಳ್ಳಿ, ರುದನೂರ, ಭೂತಪುರ, ಚಿಂತಪಳ್ಳಿ, ರಾಯಕೋಡ, ಕೆರೋಳಿ, ಹೊಡೆಬೀರನಳ್ಳಿ, ಕುಡಹಳ್ಳಿ,ನಾವದಗಿ, ಕೊಡದೂರ, ರಾಜಾಪುರ ಗ್ರಾಮಗಳಲ್ಲಿ ಆಗಾಗ ಭೂ ಕಂಪನ ಆಗುತ್ತಿರುವುದರಿಂದ ನಮ್ಮ ಗ್ರಾಮದಲ್ಲಿಯೂ ಜನರು ಭೀತಿಯಿಂದ ಕಾಲ ಕಳೆಯುವಂತಾಗಿದೆ. ಎಲ್ಲ ಗ್ರಾಮಗಳು ಕೇವಲ ಎರಡ್ಮೂರು ಕಿಮೀ ಅಂತರದಲ್ಲಿವೆ. ನಮ್ಮಲ್ಲಿಯೂ ಕಾಳಜಿ ಕೇಂದ್ರ-ಪುನರ್ವಸತಿ ಕೇಂದ್ರಗಳನ್ನು ಪ್ರಾರಂಭಿಸಬೇಕೆಂದು ಕಂದಾಯ ಸಚಿವ ಆರ್‌.ಅಶೋಕ ಅವರಿಗೆ ಮನವಿಪತ್ರ ನೀಡುವಂತೆ ತಹಶೀಲ್ದಾರ್‌ಗೆ ನೀಡಲಾಗಿದೆ ಎಂದು ಪಿಕಾರ್ಡ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಸುರೇಶ ಪಾಟೀಲ ರಾಯಕೋಡ ತಿಳಿಸಿದ್ದಾರೆ.

ಗಡಿಕೇಶ್ವಾರ ಗ್ರಾಮದ ಸುತ್ತಲಿನ 40 ಗ್ರಾಮಗಳಲ್ಲಿ ಕೆಲವು ಹಳೆಯ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿವೆ. ಕಂಪನದಿಂದ ಈಗಾಗಲೇ 5 ಮನೆಗಳು ಕುಸಿದು ಬಿದ್ದಿವೆ. ಜನರ ಪ್ರಾಣರಕ್ಷಣೆ ಮಾಡಲು ಪುನರ್ವಸತಿ ಕೇಂದ್ರ ಮತ್ತು ಕಾಳಜಿ ಕೇಂದ್ರ ಪ್ರಾರಂಭಿಸಬೇಕೆಂಬ ಬೇಡಿಕೆ ಇಲ್ಲಿನ ಗ್ರಾಮಸ್ಥರದ್ದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next