Advertisement

ಪುರಸಭೆಯ ಅವ್ಯವಹಾರ ತನಿಖೆಗೆ ಆಗ್ರಹಿಸಿ ಮನವಿ

02:43 PM Apr 01, 2022 | Team Udayavani |

ಭಾಲ್ಕಿ: ಪುರಸಭೆ ಕಚೇರಿಯಲ್ಲಿ ಸಮರ್ಪಕ ಸಭೆ ನಡೆಯದಿರುವುದು, ನೂತನ ಕಟ್ಟಡದಲ್ಲಿ ಶಿಷ್ಟಾಚಾರ ಪಾಲಿಸದೇ ಕಚೇರಿ ಪ್ರವೇಶ ಮಾಡಿರುವುದು ಸೇರಿ ಇಲ್ಲಿನ ವ್ಯಾಪ್ತಿಯಲ್ಲಿ ಜಾರಿಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಪುರಸಭೆ ಸದಸ್ಯರು ಪಟ್ಟಣದಲ್ಲಿ ಬುಧವಾರ ಧರಣಿ ಸತ್ಯಾಗ್ರಹ ನಡೆಸಿದರು.

Advertisement

ಜಿಲ್ಲಾಧಿಕಾರಿಗಳು ಸಭೆ ನಡೆಸಲಿರುವ ವಿಷಯ ತಿಳಿದ ಪುರಸಭೆ ಸದಸ್ಯರಾದ ರೌಫ್‌ ಪಟೇಲ್‌ ಮತ್ತು ಪಾಂಡುರಂಗ ಕನಸೆ ಅವರು ಪಟ್ಟಣದ ಪುರಸಭೆ ಕಚೇರಿ ಎದುರು ಟೆಂಟ್‌ ಹಾಕಿ ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರ್‌ ಭಾವಚಿತ್ರ ಇಟ್ಟು ಧರಣಿ ಆರಂಭಿಸಿದರು.

ಎಂಟು ತಿಂಗಳು ಕಳೆದರೂ ಇದುವರೆಗೂ ಸಾಮಾನ್ಯ ಸಭೆ ನಡುವಳಿಕೆ ಕೊಟ್ಟಿಲ್ಲ. ನಡುವಳಿ ಕೆಯಲ್ಲಿ ಚರ್ಚಿಸಲಾದ ವಿಷಯಗಳು ಕಾರ್ಯರೂಪಕ್ಕೆ ಬಂದಿಲ್ಲ. ಜುಲೈ 22, 2021ರ ನಂತರ ಒಂದು ಸಾಮಾನ್ಯ ಸಭೆ ಜರುಗಿಲ್ಲ. ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಾಣಗೊಂಡ ಸುಮಾರು 400 ಮನೆಗಳು ಅರ್ಹರಿಗೆ ಮುಟ್ಟುತ್ತಿಲ್ಲ. ನಗರೋತ್ಥಾನ ಯೋಜನೆಯಡಿ ನಡೆದ ಕಾಮಗಾರಿಗಳು, 24/7 ಕುಡಿವ ನೀರಿನ ಕಾಮಗಾರಿ ಕಳಪೆ ಮಟ್ಟದಲ್ಲಿ ನಡೆದಿವೆ. ವಾಜಪೇಯಿ ವಸತಿ ಯೋಜನೆಯಡಿ ಮಂಜೂರಾದ 57 ಮನೆಗಳ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆಪಾದಿಸಿದರು.

ಸರಕಾರಿ ಕಟ್ಟಡಗಳ ನಿರ್ಮಾಣ ಸಂದರ್ಭದಲ್ಲಿ ಹಳೇ ಕಟ್ಟಡದ ಕಲ್ಲು, ಮಣ್ಣು ದುರ್ಬಳಕೆ ಮಾಡಿಕೊಳ್ಳಲಾಗಿದೆ. 2019-20, 21-22ನೇ ಸಾಲಿನ ವರೆಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಪುರಸಭೆ ಬಂದಿರುವ ಯೋಜನೆಗಳ ಮಾಹಿತಿ ಕೂಡ ಸಮರ್ಪಕವಾಗಿ ಕೊಡುತ್ತಿಲ್ಲ. ಬೀದಿದೀಪ ಅಳವಡಿಕೆಯಲ್ಲಿ ಅವ್ಯವಹಾರ ನಡೆದಿದ್ದು, 2015-16ನೇ ಸಾಲಿನ 14ನೇ ಹಣಕಾಸು ಯೋಜನೆಯಡಿ ಮಂಜೂರಾದ ಕಾಮಗಾರಿಗಳ ವಿವರ ನೀಡುತ್ತಿಲ್ಲ. ಇದುವರೆಗೂ ಸ್ಥಾಯಿ ಸಮಿತಿ ರಚಿಸಿಲ್ಲ ಎಂದು ಆರೋಪಿಸಿ ಧರಣಿ ನಡೆಸಿದ್ದರು.

ಧರಣಿ ವಿಷಯ ತಿಳಿದ ಜಿಲ್ಲಾಧಿಕಾರಿಗಳು ಕೊನೆಯ ಹಂತದಲ್ಲಿ ಪುರಸಭೆಯಲ್ಲಿ ಸಭೆ ನಡೆಸುವುದನ್ನು ಮೊಟಕುಗೊಳಿಸಿದರು. ಬಳಿಕ ಬಸವಕಲ್ಯಾಣ ಸಹಾಯಕ ಆಯುಕ್ತರು ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿ ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಧರಣಿ ಹಿಂಪಡೆದರು.

Advertisement

ಪುರಸಭೆ ಸದಸ್ಯರಾದ ಪ್ರವೀಣ ಸವರೆ, ಭಾಗ್ಯಶ್ರೀ ಸಂತೋಷ, ಅಂಬಿಕಾ ಕುಂದೆ, ಬಿಬಿಶೇಣ ಬಿರಾದಾರ್‌ ಮನವಿ ಪತ್ರಕ್ಕೆ ಸಹಿ ಹಾಕಿದರು. ಗೋವಿಂದರಾವ ಬಿರಾದಾರ್‌, ಸಂಗಮೇಶ ಭೂರೆ, ವಿನೋದ ಕಾರಾಮುಂಗೆ, ಮಲ್ಲಿಕಾರ್ಜುನ ನೇಳಗೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next