ಕೋಲಾರ: ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಲು ಸಿಎಂಗೆ ಶಿಫಾರಸು ಮಾಡುವಂತೆ ಕೋರಿ ಶಾಸಕ ಕೆ.ಶ್ರೀನಿವಾಸಗೌಡಗೆ ಸಾಮಾಜಿಕ ಕಾರ್ಯಕರ್ತ ಗೌರಿಪೇಟೆ ಕೆ.ಎನ್.ರವೀಂದ್ರನಾಥ್ ಮನವಿ ನೀಡಿದರು.
ಜಿಲ್ಲೆಯು ಯಾವುದೇ ನದಿ-ನಾಲೆಗಳಿಲ್ಲದೆ ಬರಪೀಡಿತ ಪ್ರದೇಶವಾಗಿದ್ದು, ನೀರಿನ ಸಮಸ್ಯೆಯಿಂದಾಗಿ ಇಲ್ಲಿನ ಜನರು ಫ್ಲೋರೋಸಿಸ್, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು, ಚರ್ಮ ರೋಗ, ಕಣ್ಣಿನ ತೊಂದರೆ ಮುಂತಾದ ಕಾಯಿಲೆಗಳಿಂದ ನರಕಯಾತನೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಕೋಲಾರವು ಜಿಲ್ಲಾ ಕೇಂದ್ರವಾಗಿದ್ದರೂ ಸುಸಜ್ಜಿತ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲದ ಕಾರಣ, ಇಂತಹ ರೋಗಗಳಿಗೆ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಭಾಗದ ಶೇ.90 ಜನರು ಹಣಕಾಸಿನಲ್ಲಿ ಸ್ಥಿತಿವಂತರಲ್ಲದ ಕಾರಣ, ಖಾಸಗಿ ಆಸ್ಪತ್ರೆಗಳಿಗೆ ಹೋಗಿ, ಹಣ ಕೊಟ್ಟು ಚಿಕಿತ್ಸೆ ಪಡೆ ಯುವ ಸ್ಥಿತಿಯಲ್ಲಿ ಇರುವುದಿಲ್ಲ ಎಂದು ವಿವರಿಸಿದರು. ಕೋಲಾರವು ಜಿಲ್ಲಾ ಕೇಂದ್ರ ಭಾಗದಲ್ಲಿ ಇದ್ದು, ಇದಕ್ಕೆ ಸಂಬಂಧಿಸಿದಂತೆ ತಾಲೂಕು ಕೇಂದ್ರಗಳಿಂದ 20-30 ಕಿ.ಮೀ ದೂರದಲ್ಲಿ ಇರುವುದರ ಜೊತೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತದೆ. ಇದು ಅನಿವಾರ್ಯ ಸಂದರ್ಭಗಳಲ್ಲಿ ರೋಗಿಗಳನ್ನು ಬೆಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಸಾಗಿಸಲು ಅನುಕೂಲವಾಗಿದೆ. ಎಲ್ಲಾ ತಾಲೂಕಿನವರು, ಇಲ್ಲಿಗೆ ಬರಲು ಉತ್ತಮ ರಸ್ತೆಯ ಅನುಕೂಲವಿದ್ದು, ಸಮಯವನ್ನು ಉಳಿಸುತ್ತದೆ ಎಂದು ಹೇಳಿದರು.
ಪ್ರತಿ ಜಿಲ್ಲಾ ಕೇಂದ್ರಕ್ಕೆ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಒದಗಿಸಬೇಕು ಎಂಬುವುದು ತಮ್ಮಕೇಂದ್ರ ಸರ್ಕಾರದ ನಿಲುವು ಮತ್ತು ಕರ್ನಾಟಕ ರಾಜ್ಸರ್ಕಾರದ ನಿಲುವು ಸಹ ಆಗಿದೆ. ಆದ್ದರಿಂದಕೋಲಾರಕ್ಕೆ ಒಂದು ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಸರ್ಕಾರಿ ವ್ಯದ್ಯಕೀಯ ಕಾಲೇಜನ್ನು ಮಂಜೂರು ಮಾಡಬೇಕೆಂದು ವಿವರಿಸಿದರು.
ಅತಿಥಿ ಉಪನ್ಯಾಸಕ ಲಕ್ಷ್ಮೀನಾರಾಯಣ್, ಲಕ್ಷ್ಮೀದೇವಿ, ನಾಗರಾಜ್, ಆಲ್ಪರ್ಟ್, ಮಂಜುಳಮ್ಮ, ಗೌರಿಪೇಟೆಯ ಎಂ.ಎನ್.ಮೂರ್ತಿ, ಮಲ್ಲಗಾನಹಳ್ಳಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.