ಗುರುಮಠಕಲ್: ಪರೀಕ್ಷೆಗಳು ಹತ್ತಿರ ಬರುತ್ತಿದ್ದು, ಸರಿಯಾಗಿ ಪಾಠ ಬೋಧನೆ ನಡೆಯುತ್ತಿಲ್ಲ. ಇದರಿಂದ ನಿರಂತರ ಪಾಠ ಬೋಧನೆಗೆ ಉಪನ್ಯಾಸಕರು ಒತ್ತು ನೀಡುವಂತೆ ಕ್ರಮಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರಾಚಾರ್ಯರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪ್ರಾಚಾರ್ಯ ಮೋನಪ್ಪ ಗಚ್ಚಿಮನಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, 11 ಉಪನ್ಯಾಸಕರು ಮತ್ತು 38 ಜನ ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಬಿ.ಎಸ್ಸಿ, ಬಿ.ಕಾಂ ಮತ್ತು ಬಿ.ಎ ಕೋರ್ಸ್‌ಗಳಿವೆ. ಇಲ್ಲಿಯವರೆಗೆ ಪಾಠ ಬೋಧನೆ ನಡೆದಿಲ್ಲ. ಪರೀಕ್ಷೆಗಳು ಸಮೀಪಿಸುತ್ತಿದ್ದು, ನಾವು ಹೇಗೆ ಪರೀಕ್ಷೆ ಬರೆಯಬೇಕು. ಇದರಿಂದ ನಮ್ಮ ವಿದ್ಯಾಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದರು.
ನಿಯೋಜಿತ ಉಪನ್ಯಾಸಕರು ಬೆಳಗ್ಗೆ ಬಂದು ಹಾಜರಿ ಪುಸ್ತಕದಲ್ಲಿ ಸಹಿ ಮಾಡಿ ಪಾಠ ಬೋಧಿಸದೇ ತೆರಳುತ್ತಾರೆ. ಇದ್ದ ಅತಿಥಿ ಉಪನ್ಯಾಸಕರು ವಿವಿಧ ಬೇಡಿಕೆಗೆ ಆಗ್ರಹಿಸಿ ತರಗತಿ ಬಹಿಷ್ಕರಿಸಿ ಮುಷ್ಕರದಲ್ಲಿ ತೊಡಗಿದ್ದಾರೆ. ಇದರಿಂದ ಪಾಠ ಬೋಧನೆಗೆ ಎಲ್ಲರೂ ಗೈರಾಗುತ್ತಿದ್ದಾರೆ. ಹೀಗಾಗಿ ನಾವು ಶಿಕ್ಷಣದಿಂದ ವಂಚಿತಗೊಳ್ಳುತ್ತಿದ್ದೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಪ್ರಾಚಾರ್ಯ ಮೋನಪ್ಪ ಗಚ್ಚಿಮನಿ ಮನವಿ ಸ್ವೀಕರಿಸಿ ಮಾತನಾಡಿ, ಪಾಠ ಬೋಧನೆ ಮಾಡುವಂತೆ ಉಪನ್ಯಾಸಕರಿಗೆ ಸೂಚಿಸಲಾಗುವುದು ಮತ್ತು ಮೇಲಾಧಿಕಾರಿಗಳಿಗೆ ತಿಳಿಸುವುದಾಗಿ ಭರವಸೆ ನೀಡಿದರು.
ಈ ವೇಳೆ ಶಿವಕುಮಾರ್ ಚವ್ಹಾಣ, ನಾಗೇಶ, ಸುರೇಶ, ಗೋವಿಂದ, ಶಂಕರ, ನರೇಶ, ಶ್ರೀನಿವಾಸ, ರಾಮಪ್ಪ, ರವಿ, ದೇವಪ್ಪ, ಸುಜಾತ, ಅಂಬಿಕಾ, ಸಿದ್ದಮ್ಮ, ನವೀತ, ಅಕ್ಕಮಹಾದೇವಿ, ಗೀತಾ, ಅಂಜಮ್ಮ, ಅನಿತಾ ಸೇರಿದಂತೆ ಇತರರಿದ್ದರು.