Advertisement

ಸನ್ನತಿ ಬೌದ್ದ ತಾಣ ಅಭಿವೃದ್ದಿಗೆ ಮನವಿ

03:10 PM Dec 17, 2021 | Team Udayavani |

ವಾಡಿ: ಸಮೀಪದ ಸನ್ನತಿ ಭೀಮಾನದಿ ದಂಡೆಯ ಕನಗನಹಳ್ಳಿ ಪ್ರದೇಶದಲ್ಲಿ ದೊರೆತಿರುವ 3ನೇ ಶತಮಾನಕ್ಕೆ ಸೇರಿದ ಮೌರ್ಯ ಸಾಮ್ರಾಜ್ಯದ ದೊರೆ ಸಾಮ್ರಾಟ್‌ ಅಶೋಕನ ಇತಿಹಾಸ ಸಾರುವ ಹಾಗೂ ಐತಿಹಾಸಿಕ ಬೌದ್ಧ ಸ್ತೂಪ ತಾಣ ಅಭಿವೃದ್ಧಿಗೆ ಕೇಂದ್ರ ಪ್ರಾಚ್ಯವಸ್ತು ಇಲಾಖೆ ನಿರ್ಲಕ್ಷ್ಯ ವಹಿಸಿದ್ದು, ಕೂಡಲೇ ಅಭಿವೃದ್ಧಿಗೆ ಮುಂದಾಗಬೇಕು ಎಂದು ದಲಿತ ಮುಖಂಡರು ಸಂಸದ ಡಾ| ಉಮೇಶ ಜಾಧವಗೆ ಮನವಿ ಸಲ್ಲಿಸಿದರು.

Advertisement

ಸನ್ನತಿ ಹೊರ ವಲಯದ ಕನಗನಹಳ್ಳಿ ಜಮೀನೊಂದರಲ್ಲಿ ದೊರೆತ ಬೌದ್ಧ ಇತಿಹಾಸದ ಕುರುಹಿನ ಜಾಡು ಹಿಡಿದು 1994ರಲ್ಲಿ ಉತ್ಖನನ ನಡೆಸಲಾಗಿದೆ. ಬೃಹತ್‌ ಬೌದ್ಧ ಸ್ತೂಪ, ಬುದ್ಧ ವಿಹಾರ ಕಟ್ಟಡ, ಸಾವಿರಾರು ಬದ್ಧನ ಮೂರ್ತಿಗಳು, ಬುದ್ಧನ ಜಾತಕ ಕಥೆ ಹೇಳುವ ಶಿಲ್ಪಕಲೆಗಳು, ಸಾಮ್ರಾಟ್‌ ಅಶೋಕ ಚಕ್ರವರ್ತಿಯ ಬೌದ್ಧ ಧರ್ಮ ಪ್ರಚಾರದ ಮಹತ್ವ ಹೇಳುವ ಶಾಸನಗಳು ಪತ್ತೆಯಾಗಿವೆ. ಕಳೆದ 20 ವರ್ಷಗಳಿಂದ ಈ ಪ್ರದೇಶ ಅಭಿವೃದ್ಧಿ ಕಾಣದೇ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಅಭಿವೃದ್ಧಿಪಡಿಸಬೇಕಾದ ಕೇಂದ್ರ ಪ್ರಾಚ್ಯವಸ್ತು ಇಲಾಖೆ ನಿಷ್ಕಾಳಜಿ ಪ್ರದರ್ಶಿಸಿದೆ ಎಂದು ಸಂಸದರ ಗಮನಕ್ಕೆ ತರಲಾಯಿತು. ನಿರ್ಮಿಸಲಾದವಸ್ತುಸಂಗ್ರಹಾಲಯ ಕಟ್ಟಡ ಬಳಕೆಗೆ ಮುಕ್ತವಾಗಿಲ್ಲ. ಬೌದ್ಧ ತಾಣದ ಪ್ರದೇಶದಲ್ಲಿ ಮುಳ್ಳುಕಂಟಿ ಬೆಳೆದು ಅವ್ಯವಸ್ಥೆಯ ಆಗರವಾಗಿದೆ. ಸನ್ನತಿ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಮೂಲಸೌಲಭ್ಯ ಒದಗಿಸಿಲ್ಲ ಎಂದು ತಿಳಿಸಿದರು.

ಪ್ರಪಂಚದ ಗಮನ ಸೆಳೆದಿರುವ ಸನ್ನತಿ ಬೌದ್ಧ ಸ್ತೂಪ ತಾಣಕ್ಕೆ ನಿತ್ಯವೂ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಪ್ರವಾಸಿ ಗರು ಆಗಮಿಸುತ್ತಾರೆ. ಲೇಖಕರು, ಸಂಶೋಧಕರು, ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು, ವಿದೇಶದ ಬೌದ್ಧ ಸನ್ಯಾಸಿಗಳು ಈ ಸ್ಥಳದ ಮಹತ್ವ ಅರಿಯಲು ಬರುತ್ತಾರೆ. ಆದರೆ ಇಲ್ಲಿ ಯಾವುದೇ ಸೌಲಭ್ಯಗಳಿಲ್ಲದ ಕಾರಣ ನಿರ್ಲಕ್ಷಿತ ತಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಆದ್ದರಿಂದ ಕೂಡಲೇ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಸನ್ನತಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಸದರಲ್ಲಿ ಕೋರಿದರಲ್ಲದೇ, ನಿರ್ಲಕ್ಷ್ಯ ಮುಂದುವರಿದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಇಂಟರ್‌ ನ್ಯಾಷನಲ್‌ ಬುದ್ಧಿಸ್ಟ್‌ ಯೂತ್‌ ಆರ್ಗನೈಸೇಷನ್‌ ಮುಖಂಡ, ವಾಡಿಯ ಡಾ| ಬಿ.ಆರ್‌. ಅಂಬೇಡ್ಕರ್‌ ತರುಣ ಸಂಘದ ಅಧ್ಯಕ್ಷ ಸಂದೀಪ ಕಟ್ಟಿ, ದಲಿತ ಮುಖಂಡ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರ, ಬೌದ್ಧ ಉಪಾಸಕರಾದ ರಣಧೀರ ಹೊಸಮನಿ, ಸಿದ್ಧು ದಿಕ್ಸಂಗಿ , ಜೈಭೀಮ ಹೊನಗುಂಟಾ, ರಜನಿಕಾಂತ ಕೊಂಬೆನೂರ, ಮಲ್ಲಿನಾಥ ಕಿವುಡೆ, ಸುನೀಲ ಚವನೂರ, ಸುಕ್ಕಪ್ಪ ಕೊಲ್ಲೂರ, ಯಲ್ಲಪ್ಪ ಕಟ್ಟಿಮನಿ ನಿಯೋಗದಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next