ಬೆಂಗಳೂರು: ದಕ್ಷಿಣ ಭಾರತದಲ್ಲಿ ಅಪ್ಪೆ ಮಿಡಿ ಮಾವಿಗೆ ಕರ್ನಾಟಕ ಜನಪ್ರಿಯತೆ ಪಡೆದಿದೆ. ಅಪ್ಪೆ ಮಿಡಿಗೆ ದೊಡ್ಡ ಮಟ್ಟದ ಮಾರುಕಟ್ಟೆ ಸೃಷ್ಟಿಸುವ ನಿಟ್ಟಿನಲ್ಲಿ ಹೆಸರುಘಟ್ಟದ ಭಾರತೀಯ ತೋಟ ಗಾರಿಕಾ ಸಂಶೋಧನಾ ಸಂಸ್ಥೆ ಹೆಜ್ಜೆಯಿರಿಸಿದ್ದು ಇದೇ ಮೊದಲ ಬಾರಿಗೆ “ಅಪ್ಪೆಮಿಡಿ’ ಮಾವು ಮೇಳ ಆಯೋಜಿಸಲು ಮುಂದಾಗಿದೆ.
ಒಂದೇ ಸೂರಿನಡಿ ಮಲೆನಾಡು ಭಾಗದಲ್ಲಿ ಸಿಗುವ ನೂರಕ್ಕೂ ಅಧಿಕ ಅಪ್ಪೆ ಮಿಡಿ ಮಾವಿನ ತಳಿಗಳು ದೊರೆಯಲಿವೆ. ಏ. 12, 13ರಂದು ಹೆಸರುಘಟ್ಟದಲ್ಲಿ ಮೇಳ ನಡೆಯಲಿದ್ದು, ಅಪ್ಪೆಮಿಡಿ ಬೆಳೆಗಾರರ ಮತ್ತು ಉದ್ಯಮಿಗಳ ಸೇತುವೆ ಆಗಲಿದೆ. ರಾಜ್ಯದಲ್ಲಿ ಸುಮಾರು 250ಕ್ಕೂ ಅಧಿಕ ಅಪ್ಪೆ ಮಿಡಿಗಳ ತಳಿಗಳಿವೆ. ಆದರೆ ಮೇಳದಲ್ಲಿ 100ಕ್ಕೂ ಅಧಿಕ ಬಗೆಯ ಅಪ್ಪೆಮಿಡಿ ಮಾವುಗಳ ಪ್ರದರ್ಶನ ಮತ್ತು ಮಾರಾಟ ಇರಲಿವೆ ಎಂದು ತೋಟಗಾರಿಕಾ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಲೆನಾಡು ಭಾಗದಲ್ಲಿ ಅಪ್ಪೆ ಮಿಡಿ ಉದ್ಯಮ ವನ್ನಾಗಿ ಸ್ವೀಕರಿಸಿದವರಿದ್ದಾರೆ. ಸಾಗರ, ಶಿರಸಿ, ಶಿಕಾರಿಪುರ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ಅಪ್ಪೆ ಮಿಡಿ ಮಾವಿನ ಉಪ್ಪಿನ ಕಾಯಿ ತಯಾರಕರಿ ದ್ದಾರೆ ಅವರು ಕೂಡ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಪ್ಪೆ ಮಿಡಿಯಿಂದ ತಯಾರಿಸಲಾಗುವ ಖಾದ್ಯಗಳ ಪ್ರದರ್ಶನವೂ ಇರಲಿದೆ. ಮಲೆನಾಡು ಭಾಗದ ಅಪ್ಪೆಮಿಡಿ ಬೆಳೆವ ರೈತರು ಮೇಳದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಬೇಡಿಕೆಯಷ್ಟು ಅಪ್ಪೆ ಮಿಡಿ ಪೂರೈಕೆ ಆಗುತ್ತಿಲ್ಲ: ಅಪ್ಪೆಮಿಡಿ ಮಾವಿನ ಕಾಯಿಯಿಂದ ತಯಾರಿಸಿದ ಉಪ್ಪಿನಕಾಯಿಗಳು ಸೊಗಸಾದ ಪಾಕಶಾಲೆಯ ಅನುಭವ ನೀಡುತ್ತದೆ. ಅಪ್ಪೆ ಮಿಡಿ ಮಾರುಕಟ್ಟೆ ಯಲ್ಲಿ ಬೇಡಿಕೆ ಹತ್ತನೇ ಒಂದು ಭಾಗದಷ್ಟು ಮಾತ್ರ ಪೂರೈಕೆಯಾಗುತ್ತಿದೆ. ಬೇಡಿಕೆ ಮತ್ತು ಲಭ್ಯತೆ ಆಧಾರದ ಮೇಲೆ ಅಪ್ಪೆ ಮಿಡಿ ಮಾವಿನ ಬೆಲೆ ಕ್ವಿಂಟಲ್‌ಗಳ ಮೇಲೆ ನಿಗದಿಯಾಗುತ್ತದೆ ಎಂದು ಹೆಸರುಘಟ್ಟದ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಹಣ್ಣುಗಳ ವಿಭಾಗದ ಪ್ರಧಾನ ವಿಜ್ಞಾನಿ ಎಂ.ಶಂಕರ್ ಹೇಳುತ್ತಾರೆ. ಅಪ್ಪೆಮಿಡಿ ಮಾವನ್ನು ವಿಶೇಷವಾಗಿ ಶಿರಸಿ, ಸಾಗರ, ಸಿದ್ದಾಪುರ, ತೀರ್ಥಹಳ್ಳಿ, ಹೊಸನಗರ, ಕುಮಟಾ, ಹೊನ್ನಾವರ, ಸಕಲೇಶಪುರ, ಕೊಡಗು ಮತ್ತು ಚಿಕ್ಕಮಗಳೂರುಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಬೆಳೆಯಲಾಗುತ್ತದೆ ಎನ್ನುತ್ತಾರೆ ಅವರು.
ಐದು ತಳಿಗಳ ಸಂಶೋಧನೆ: ಹೆಸರುಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಕೂಡ ಅಪ್ಪೆಮಿಡಿ ಮಾವಿನ ಐದು ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿದೆ. ಬಾಳೆಕೊಪ್ಪ , ಸೂಡೂರು ಅಪ್ಪೆಮಿಡಿ ತಳಿಗಳು ಇದರಲ್ಲಿ ಸೇರಿದೆ. ಅವುಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ ಎಂದು ತೋಟಗಾರಿಕಾ ಸಂಶೋಧನಾ ಸಂಸ್ಥೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಹೊಸ ತಳಿಗಳು ಭೂಮಿಗೆ ನಾಟಿ ಮಾಡಿದ 4-5 ವರ್ಷಗಳಲ್ಲಿ ಫಸಲು ಬಿಡಲಿವೆ. ಆರಂಭದಲ್ಲಿ ನಾಲ್ಕರಿಂದ ಐದು ಕೆ.ಜಿ.ಅಪ್ಪೆ ಮಿಡಿ ಮಾವು ದೊರೆಯಲಿವೆ. ನಂತರ ವರ್ಷ ಕಳೆದಂತೆ ಫಸಲಿನ ಪ್ರಮಾಣ ಅಧಿಕವಾಗಿರಲಿದೆ. ಸೀಮಿತ ಸಂಖ್ಯೆಯಲ್ಲಿ ಈ ತಳಿಯ ಸಸಿಗಳಿದ್ದು ಮೊದಲು ನೋಂದಣಿ ಮಾಡಿಕೊಂಡವರಿಗೆ ಖರೀದಿಯಲ್ಲಿ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.
ಅಪ್ಪೆಮಿಡಿ ಮಾವಿನಲ್ಲಿ 250ಕ್ಕೂ ಅಧಿಕ ತಳಿಗಳಿವೆ. ಅವುಗಳನ್ನು ಸಂಗ್ರಹಿಸಿ ಸಂರಕ್ಷಿಸುವ ಕೆಲಸ ನಡೆದಿದೆ. ಕರ್ನಾಟಕ, ಗೋವಾ, ತಮಿಳುನಾಡು ಮತ್ತು ಕೇರಳದಲ್ಲಿ ದೊಡ್ಡ ಮಾರುಕಟ್ಟೆ ಇದೆ. ಅಪ್ಪೆ ಮಿಡಿ ಮಾವಿನ ತಳಿ ಅಪಾಯದಲ್ಲಿದ್ದು, ಆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಇದೆ ಮೊದಲ ಬಾರಿಗೆ ಅಪ್ಪೆಮಿಡಿ ಮಾವಿನ ಮೇಳ ಆಯೋಜಿಸಲಾಗಿದೆ.
●ಶಂಕರ್, ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಹಣ್ಣುಗಳ ವಿಭಾಗದ ಪ್ರಧಾನ ವಿಜ್ಞಾನಿ
●ದೇವೇಶ ಸೂರಗುಪ್ಪ