Advertisement

ಅಪರೂಪದ ಅಪ್ಪೆ ಮಾವಿಗೆ ಕಸಿ ಕಾಯಕಲ್ಪ

04:14 PM Oct 25, 2020 | Suhan S |

ಸಿದ್ದಾಪುರ: ಅಳಿದು ಹೋಗುತ್ತಿರುವ ಸಸ್ಯ ಸಂಪತ್ತನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾಡಿನಾದ್ಯಂತ ಆಸಕ್ತರು ಹಲವು ರೀತಿಯಲ್ಲಿ ಕಾಯಕಲ್ಪ ನಡೆಸುತ್ತಿದ್ದು ಅವುಗಳಲ್ಲಿ ಕಸಿ ಮಾಡುವ ಮೂಲಕ ಮೂಲ ಸಸ್ಯದ ಗುಣ ವಿಶೇಷಗಳನ್ನು ಉಳಿಸಿಕೊಳ್ಳುವ ಪ್ರಯತ್ನವೂ ಒಂದು.

Advertisement

ಎಲ್ಲೆಡೆ ಪ್ರಸಿದ್ಧವಾದ ತಾಲೂಕಿನ ಹೇರೂರು ಭಾಗದ ಅನಂತಭಟ್ಟನ ಅಪ್ಪೆ ಎನ್ನುವ ಮಾವಿನ ವೈಶಿಷ್ಟಯವನ್ನು ಕೇಳಿ ದೂರದ ದಕ್ಷಿಣ ಕನ್ನಡದಿಂದ ಹೆಸರಾಂತ ತೋಟಗಾರಿಕಾ ತಜ್ಞ ಕೋ.ಲ. ಕಾರಂತರು ( ಶಿವರಾಮ ಕಾರಂತರ ಅಣ್ಣ) ಸ್ವತಃ ಬಂದು ಅದಕ್ಕೆ ಕಸಿ ಮಾಡಿ ಇಂದಿಗೂ ಅದರ ಸಂತತಿ ಉಳಿಸಿರುವುದು ಐತಿಹಾಸಿಕ ಸಂಗತಿ. ಆ ನಿಟ್ಟಿನಲ್ಲಿ ವಡ್ಡನಗದ್ದೆ ಗಣಪತಿ ಹೆಗಡೆಯವರ ಪ್ರಯತ್ನವೂ ಶ್ಲಾಘನೀಯವಾದದ್ದೇ. ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಕಾಡಿನ ಬೀಜಗಳ ಸಂಗ್ರಹ, ಅವುಗಳ ನಾಟಿ, ಔಷಧೀಯ ಸಸ್ಯಗಳ ಸಂಗ್ರಹ, ಅವುಗಳ ಪಾಲನೆ ಮುಂತಾಗಿ ತಮ್ಮ ಬಹುತೇಕ ಸಮಯವನ್ನು ಈ ನಿಟ್ಟಿನಲ್ಲಿ ಮೀಸಲಿಡುತ್ತ ಬಂದಿರುವ ಗಣಪತಿ ಹೆಗಡೆ ಆಸಕ್ತಿಯಿಂದ ಕರಗತಮಾಡಿಕೊಂಡ ಕಸಿ ಕಟ್ಟುವ ವಿಧಾನವನ್ನು ವಿನೂತನ ರೀತಿಯಲ್ಲಿ ಮುಂದುವರೆಸಿಕೊಂಡು ಬಂದಿದ್ದಾರೆ.

ಭಾರತೀ ಸಂಪದ ಹಾಗೂ ಬಹುಕಾಲದಿಂದ ಅವರ ಕಾರ್ಯಗಳಿಗೆ ಬೆಂಬಲವಾಗಿರುವ ಪ್ರಯೋಗ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಸ್ಥಳೀಯ ಅರಣ್ಯ ಇಲಾಖೆ ಸಹಕಾರದಲ್ಲಿ ಕೈಗೊಂಡ ಕಾರ್ಯ. ವಿನಾಶದಂಚಿನಲ್ಲಿರುವ ಕಣಸೆ ಅಪ್ಪೆ ಎಂದು ಸ್ಥಳಿಯರು ಕರೆಯುವ ಅಪ್ಪೆ ಮಾವಿನ ತಳಿಯೊಂದನ್ನು ಕಸಿ ಕಟ್ಟಿ ಅದನ್ನು ಉಳಿಸಿಕೊಳ್ಳಲು ಮುಂದಾದ ಗಣಪತಿ ಹೆಗಡೆ ಅದಕ್ಕೆ ಅರಣ್ಯ ಇಲಾಖೆಯ ಸಹಕಾರ ಕೋರಿದರು.

ಗಡಿಭಾಗ ಸಾಗರ ತಾಲೂಕಿನ ಕಣಸೆ ಗ್ರಾಮದಲ್ಲಿನ ರುಚಿ, ಸುವಾಸನೆಗಳಿಂದ ಪ್ರಸಿದ್ಧವಾದ ಈಗ ಶಿಥಿಲವಾಗುತ್ತಿರುವ ಸುಮಾರು 300 ವರ್ಷಗಳಿಗೂ ಹೆಚ್ಚು ವಯಸ್ಸಾಗಿರಬಹುದಾದ ಅಪ್ಪೆ ಮಾವಿನ ಮರದ ಆಯ್ದ ಸಣ್ಣ ಗೆಲ್ಲುಗಳಿಗೆ ಅರಣ್ಯ ಇಲಾಖೆ ನರ್ಸರಿಯಲ್ಲಿ ಬೆಳೆಸಿದ ಕಾಡು ಮಾವಿನ ಮರದಸಸಿಯ ಜೊತೆ ಮೂರು ತಿಂಗಳ ಹಿಂದೆ ಕಸಿ ಕಟ್ಟಿದರು. ಆಗಿನ ಸೆಕ್ಷನ್‌ ಫಾರೆಸ್ಟರ್‌ ಮಂಜುನಾಥ ಸ್ವಾಮಿ ಹಾಗೂ ಇನ್ನಿತರರು ಸಹಕರಿಸಿದ್ದರು.

ಹಳೆಯ ಮರದ ಉದ್ದನೆಯ ರೆಂಬೆಗಳ ತುದಿಯಲ್ಲಿನ ಗೆಲ್ಲುಗಳಿಗೆ ಪ್ರಯಾಸಪಟ್ಟು 16  ಕಾಡುಮಾವಿನ ಸಸಿ ಜೊತೆ ಕಸಿ ಕಟ್ಟಿದ್ದು ನಂತರದಲ್ಲಿ ಪರೀಕ್ಷಿಸಿದಾಗ ಅವೆಲ್ಲ ಯಶಸ್ವಿಯಾಗಿವೆ. ನಂತರದಲ್ಲಿ ಶನಿವಾರ ಅರಣ್ಯ ಇಲಾಖೆ ಸೆಕ್ಷನ್‌ ಫಾರೆಸ್ಟರ್‌ ಮಂಜುನಾಥ ಚಿಕ್ಕಣ್ಣನವರ್‌, ಗಾರ್ಡ್‌ ಅಶೋಕ ರಾಥೋಡ್‌ ಹಾಗೂ ರಾಜು ದ್ಯಾಮಣ್ಣನವರ್‌ ಮತ್ತು ಪ್ರಯೋಗ ಸ್ವಯಂ ಸೇವಾ ಸಂಸ್ಥೆಯ ಗಂಗಾಧರ ಕೊಳಗಿಯವರ ಜೊತೆಗೂಡಿ ಆ ಕಸಿ ಗೆಲ್ಲುಗಳನ್ನು ರೆಂಬೆಗಳಿಂದ ಕತ್ತರಿಸಿ ಸುರಕ್ಷಿತವಾಗಿ ಮರದಿಂದ ಇಳಿಸಿ, ಅರಣ್ಯ ಇಲಾಖೆಗೆ ನೀಡಲಾಯಿತು. ಮೇಲ್ನೋಟಕ್ಕೆ ಇದು ಸುಲಭವಾಗಿ ಕಂಡರೂ ಕೊಂಚ ವ್ಯತ್ಯಾಸವಾದರೂ ಕಟ್ಟಿದ ಕಸಿಯೇ ವ್ಯರ್ಥವಾಗುವ ಸಾಧ್ಯತೆಯೇ ಹೆಚ್ಚಿರುತ್ತದೆ. ತಾಳ್ಮೆ, ನೈಪುಣ್ಯತೆ, ಆಸಕ್ತಿಯ ಫಲವಾಗಿ ಕಟ್ಟಿದ ಎಲ್ಲ ಕಸಿಯೂ ಯಶಸ್ವಿಯಾಗಿದೆ.

Advertisement

ಒಂದು ವಿಶಿಷ್ಠ ತಳಿ ಮತ್ತು ಅಳಿದು ಹೋಗುತ್ತಿರುವ ಕಣಸೆ ಅಪ್ಪೆ ಮಾವಿನ ಸಂತತಿ ಉಳಿಸಿಕೊಳ್ಳುವ ದೃಷ್ಟಿಯಿಂದ ಕಣಸೆ ಅಪ್ಪೆಮಾವಿನ ಮರಕ್ಕೆ ಕಸಿ ಕಟ್ಟಿ ಅದರ ಸಸಿಗಳನ್ನು ಬೆಳೆಸುವ ನಿರ್ಧಾರ ಮಾಡಿದೆ. ಅದಕ್ಕೆ ಇಲ್ಲಿನ ಅರಣ್ಯ ಇಲಾಖೆ ಸಿಬ್ಬಂದಿ, ಮೊದಲಿನಿಂದ ನನ್ನ ಚಟುವಟಿಕೆಗಳಿಗೆ ಸಹಕರಿಸುತ್ತ ಬಂದ ಗಂಗಾಧರ ಕೊಳಗಿ ಅವರ ಸಹಕಾರ ಹೆಚ್ಚಿನದು. ಈ ಕಸಿ ಗಿಡಗಳನ್ನು ಅರಣ್ಯ ಇಲಾಖೆ ನರ್ಸರಿಯ ಉಸ್ತುವಾರಿಗೆ ನೀಡಲಾಗುತ್ತಿದೆ. ಗಣಪತಿ ಹೆಗಡೆ, ವಡ್ಡಿನಗದ್ದೆ

ವಿನಾಶದ ಅಂಚಿನಲ್ಲಿರುವ ಸಸ್ಯಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಶ್ಲಾಘನೀಯವಾದದ್ದು. ಇಂಥ ಕಾರ್ಯಗಳಿಗೆ ಅರಣ್ಯ ಇಲಾಖೆ ಯಾವತ್ತೂ ಸಹಕರಿಸುತ್ತದೆ. ಈ ರೀತಿಯ ಚಟುವಟಿಕೆ ನಿರಂತರವಾಗಿರಬೇಕು. ಗಣಪತಿ ಹೆಗಡೆ ಹಾಗೂ ಪ್ರಯೋಗ ಸಂಸ್ಥೆಗೆ ಅಭಿನಂದನೆಗಳು. ಮಂಜುನಾಥ ಚಿಕ್ಕಣ್ಣನವರ್‌, ಸೆಕ್ಷನ್‌ ಫಾರೆಸ್ಟರ್‌

 

Advertisement

Udayavani is now on Telegram. Click here to join our channel and stay updated with the latest news.

Next