ಬಸ್ರೂರು: ವಿದ್ಯೆಯಿದ್ದವನಿಗೆ ಸಮಾಜ ಹೆಚ್ಚು ಮನ್ನಣೆ ಕೊಡುತ್ತದೆ. ವಯಸ್ಸು, ಅನುಭವ, ವಿದ್ಯೆಯಿಂದ ಹೆಚ್ಚು ಗೌರವ ಪ್ರಾಪ್ತವಾಗುತ್ತದೆ. ಸಂಪತ್ತು ಎಂದರೆ ವಿದ್ಯೆ. ಅದನ್ನು ಬಳಸಿಕೊಳ್ಳುವ ಬಗೆ ಗೊತ್ತಿದ್ದರೆ ಅದೇ ದೊಡ್ಡ ಸಂಪತ್ತು. ನಾವು ಕರ್ತವ್ಯ ಪ್ರಜ್ಞೆಯುಳ್ಳವರಾಗಿ, ದೇಶದ ಸಂಪತ್ತು ಆಗಿ, ಒಳ್ಳೆಯ ಚಿಂತನೆಗಳೊಂದಿಗೆ ಬದುಕಬೇಕು ಎಂದು ಉಡುಪಿಯ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಆಶೀರ್ವಚಿಸಿದರು.
ಅವರು ರವಿವಾರ ಬಸ್ರೂರಿನ ಶ್ರೀ ಶಾರದಾ ಕಾಲೇಜಿನಲ್ಲಿ ನಡೆದ ಮಾಜಿ ಶಾಸಕ, ಬಸೂÅರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಅವರ 89ನೇ ಜನುಮ ದಿನದ ಪ್ರಯುಕ್ತ ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ಕೃಷಿ ಪ್ರಶಸ್ತಿ ಪ್ರದಾನ ಹಾಗೂ ವಿದ್ಯಾರ್ಥಿಗಳಿಗೆ ದತ್ತಿ ನಿಧಿ ವಿತರಣ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಅಪ್ಪಣ್ಣ ಹೆಗ್ಡೆಯವರು ಈಗಲೂ ಸಮಾಜದ ಉದ್ದಾರಕ್ಕೆ, ಮಕ್ಕಳಿಗೆ ಶಿಕ್ಷಣದ ಮೂಲಕ ಅಷ್ಟೊಂದು ಕ್ರಿಯಾಶೀಲರಾಗಿ, ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಯುವಕರಿಗೆ ಮಾರ್ಗದರ್ಶಕರಾಗಿ ಬದುಕಿದ್ದಾರೆ. ಇವರು ಎಲ್ಲರಿಗೂ ಪ್ರೇರಣಾದಾಯಿಗಳು ಎಂದರು.
ಬಿ. ಅಪ್ಪಣ್ಣ ಹೆಗ್ಡೆ ಮಾತನಾಡಿ, ನಮಗೆಲ್ಲರಿಗೂ ಭಾರತೀಯ ಧರ್ಮ, ಸಂಸ್ಕೃತಿಯ ಬಗ್ಗೆ ವಿಶೇಷವಾದ ಗೌರವ ಇರಬೇಕು. ಸಾಮಾಜಿಕ ಸೇವೆ, ದೇವರ ಮೇಲಿನ ವಿಶ್ವಾಸವೇ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ ಎಂದ ಅವರು, ಆಸ್ಮಾ ಬಾನು ಅವರು ಕೃಷಿ ಕಾಯಕದ ಮೂಲಕ ಸಾರ್ಥಕ ಜೀವನದೊಂದಿಗೆ ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ ಎಂದು ಶ್ಲಾಘಿಸಿದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಅನುಪಮಾ ಎಸ್. ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಷ್ಠಾನದ ಅಧ್ಯಕ್ಷ ರಾಮಕಿಶನ್ ಹೆಗ್ಡೆ ಸ್ವಾಗತಿಸಿ, ಶಾರದಾ ಕಾಲೇಜಿನ ಪ್ರಾಂಶುಪಾಲೆ ಡಾ| ಚಂದ್ರಾವತಿ ಶೆಟ್ಟಿ ವಂದಿಸಿದರು. ಕೆ.ಸಿ. ರಾಜೇಶ್ ನಿರೂಪಿಸಿದರು.
ಪ್ರಶಸ್ತಿ ಪ್ರದಾನ
ಇದೇ ವೇಳೆ ದೇಶದ ಬೇರೆ ಬೇರೆ ರಾಜ್ಯಗಳಿಂದ ಅಳಿವಿನಂಚಿನಲ್ಲಿರುವ ಭತ್ತದ ಬೀಜ ಸಂಗ್ರಹಿಸುವ ವಿಶೇಷ ಕೆಲಸ ಮಾಡುತ್ತಿರುವ, ಈ ವರ್ಷ 840ಕ್ಕೂ ಹೆಚ್ಚಿನ ಭತ್ತದ ತಳಿಗಳನ್ನು ಸಂಗ್ರಹಿಸಿರುವ ಕೃಷಿ ಸಾಧಕಿ ಕಾರ್ಕಳದ ಆಸ್ಮಾ ಬಾನು ಅವರಿಗೆ ಬಿ. ಅಪ್ಪಣ್ಣ ಹೆಗ್ಡೆ ಕೃಷಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.