ನವದೆಹಲಿ: ಆಪ್ ಮುಖಂಡ, ಪಾಲಿಕೆ ಸದಸ್ಯ ತಾಹೀರ್ ಹುಸೇನ್ ನನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾತನತುಗೊಳಿಸಲಾಗಿದೆ. ಹುಸೇನ್ ಅವರು ತಮ್ಮ ವಿರುದ್ಧದ ಆರೋಪಗಳಿಂದ ಮುಕ್ತರಾಗುವವರೆಗೂ ಅವರನ್ನು ಅಮಾನತು ಮಾಡಲಾಗಿದೆ ಎಂದು ಆಮ್ ಆದ್ಮಿ ಪಕ್ಷ ತಿಳಿಸಿದೆ ಎಂದು ವರದಿಯಾಗಿದೆ.
ದೆಹಲಿ ಹಿಂಸಾಚಾರಕ್ಕೆ ಬಲಿಯಾದ ಗುಪ್ತಚರ ದಳದ ಅಧಿಕಾರಿ ಅಂಕಿತ್ ಶರ್ಮಾ ಮೇಲೆ ಹಲ್ಲೆ ನಡೆಸಿದ್ದು ಆಮ್ ಆದ್ಮಿ ಪಕ್ಷದ ನಾಯಕರು ಎಂದು ಅವರ ತಂದೆ ರೋಹಿತ್ ಶರ್ಮಾ ಆರೋಪಿಸಿದ್ದರು. ಇದಕ್ಕೆ ಪುಷ್ಠಿ ನೀಡುವಂತೆ ಆಪ್ ಕೌನ್ಸಿಲರ್ ತಾಹೀರ್ ಹುಸೇನ್ ಮನೆ ಮೇಲಿನ ಟೆರೇಸ್ ನಲ್ಲಿ ಪೆಟ್ರೋಲ್ ಬಾಂಬ್ ಹಾಗೂ ಕಲ್ಲುಗಳು ಪತ್ತೆಯಾಗಿದ್ದವು. ಆದ್ದರಿಂದ ಹುಸೇನ್ ಮೇಲೆ ದಯಾಳ್ ಪುರ ಪೊಲೀಸ್ ಠಾಣೆಯಲ್ಲಿ 302 ಸೆಕ್ಷನ್ ನಡಿ ಎಫ್ ಐ ಆರ್ ದಾಖಾಲಾಗಿತ್ತು. ಮಾತ್ರವಲ್ಲದೆ ಖಜೂರಿ ಖಾಸ್ ಪ್ರದೇಶದಲ್ಲಿರುವ ಅವರ ಕಾರ್ಖಾನೆಗೆ ಬೀಗ ಜಡಿಯಲಾಗಿತ್ತು.
“ಅಂಕಿತ್ ಶರ್ಮಾ ಅವರ ತಂದೆಯ ದೂರಿನ ಮೇರೆಗೆ ನಾವು ಕೊಲೆ ಮತ್ತು ಅಪಹರಣ ಪ್ರಕರಣವನ್ನು ದಾಖಲಿಸಿದ್ದೇವೆ. ಎಫ್ ಐ ಆರ್‌ನಲ್ಲಿ ಹುಸೇನ್ ಅವರನ್ನು ಶರ್ಮಾ ಅವರ ತಂದೆ ಹೆಸರಿಸಿದ್ದಾರೆ. ಈ ಪ್ರಕರಣವನ್ನು ದಯಾಳ್ ಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ ”ಎಂದು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದರೆ ತಾಹೀರ್ ಹುಸೇನ್, ಗಲಭೆಯಲ್ಲಿ ತಮಗೂ ತೊಂದರೆಯಾಗಿದೆ. ನಮ್ಮ ಮನೆಗೆ ನುಗ್ಗಿದ ದುಷ್ಕರ್ಮಿಗಳು ಬಲವಂತವಾಗಿ ನನ್ನನ್ನು ಹೊರ ಹಾಕಿದ್ದರು ಎಂದು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ತಾಹಿರ್ ಹುಸೇನ್ ತಪ್ಪಿತಸ್ಥರೆಂದು ಸಾಬೀತಾದರೆ, ಅವರಿಗೆ ಎರಡು ಪಟ್ಟು ಶಿಕ್ಷೆ ನೀಡಬೇಕು. ಮಾತ್ರವಲ್ಲದೆ ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಯಾವುದೇ ರಾಜಕೀಯ ಇರಬಾರದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.