Advertisement

ಅಪೂರ್ವ ಎಂಬ ಅಪರೂಪಸಿ!

11:26 AM Oct 15, 2017 | |

ಇತ್ತೀಚೆಗೆ ಸದ್ದು ಮಾಡಿದ ಕೆಲವೇ ಕೆಲವು ಚಿತ್ರಗಳಲ್ಲಿ ಅದರಲ್ಲೂ ಹೊಸಬರ ಚಿತ್ರಗಳಲ್ಲಿ “ಫ‌ಸ್ಟ್‌ ರ್‍ಯಾಂಕ್‌ ರಾಜು’ ಕೂಡಾ ಒಂದು. ಸಂಪೂರ್ಣ ಹೊಸಬರೇ ಸೇರಿ ಮಾಡಿದ ಸಿನಿಮಾ ಈಗ 50 ದಿನ ದಾಟಿ ಮುನ್ನಗ್ಗುತ್ತಿದೆ.ಈ ಚಿತ್ರದಿಂದ ನಿರ್ಮಾಪಕರಿಗೆ ಅದೆಷ್ಟು ಕಾಸು ಬಂತೋ ಗೊತ್ತಿಲ್ಲ. ಆದರೆ ಆ ಚಿತ್ರದ ನಾಯಕಿಯರಲ್ಲೊಬ್ಬರಾದ ಅಪೂರ್ವಗೆ ಒಂದೊಳ್ಳೆಯ ಕೆರಿಯರ್‌ ಸಿಕ್ಕಿರುವುದಂತೂ ಸುಳ್ಳಲ್ಲ. ಮೊದಲ ಚಿತ್ರದಲ್ಲೇ ಎಲ್ಲರ ಗಮನಸೆಳೆಯುವ ಮೂಲಕ ಅಪೂರ್ವ ಚಿತ್ರರಂಗದಲ್ಲಿ ನೆಲೆನಿಲ್ಲುತ್ತಿದ್ದಾರೆ.ಅಷ್ಟಕ್ಕೂ ಈ ಅಪೂರ್ವ ಎಲ್ಲಿಂದ ಬಂದರು, ಇವರ ಹಿನ್ನೆಲೆಯೇನು ಅಂದರೆ ಸಿಗುವ ಉತ್ತರ ಅಪೂರ್ವಗೆ ಇದು ಮೊದಲ ಸಿನಿಮಾ. ಮೊದಲ ಸಿನಿಮಾದಲ್ಲೇ ಸಿಕ್ಸರ್‌ ಬಾರಿಸಿದ್ದಾರೆ ಅಪೂರ್ವ. ಮೊದಲ ಸಿನಿಮಾವೇ ಹಿಟ್‌ ಆಗುತ್ತದೆ, ತನಗೆ ಒಂದಷ್ಟು ಅವಕಾಶಗಳು ಸಿಕ್ಕಿ ಚಿತ್ರರಂಗದಲ್ಲಿ ನೆಲೆ ನಿಲ್ಲುತ್ತೇನೆಂಬ ಯಾವ ಕಲ್ಪನೆಯೂ ಈ ಅಪೂರ್ವಗಿರಲಿಲ್ಲ. ಅದೃಷ್ಟವಿದ್ದರೆ ಸಿಗುತ್ತದೆಂಬ ಆಸೆಯೊಂದಿಗೆ ಆಡಿಷನ್‌ ಎದುರಿಸಿದ ಹುಡುಗಿ ಅಪೂರ್ವ. ಅಪೂರ್ವಗೆ ಚಿತ್ರರಂಗದಲ್ಲಿ ಯಾರೊಬ್ಬರು ಗಾಡ್‌ಫಾದರ್‌ ಇಲ್ಲ. ತನ್ನ ಅದೃಷ್ಟವನ್ನೇ ನಂಬಿಕೊಂಡು ಬಂದ ಹುಡುಗಿ. ಈಗ ಮೊದಲ ಸಿನಿಮಾ ಹಿಟ್‌ ಆಗುವುದರೊಂದಿಗೆ ಅಪೂರ್ವ ಸಿನಿಪಯಣ ಆರಂಭವಾಗಿದೆ. 


ಡೆಂಟಲ್‌ ಸ್ಟೂಡೆಂಟ್‌ನ ಫ‌ಸ್ಟ್‌ಎಂಟ್ರಿ
ಅಪೂರ್ವ ಡೆಂಟಲ್‌ ಸ್ಟೂಡೆಂಟ್‌. ದಾವಣಗೆರೆಯಲ್ಲಿ ತನ್ನ ಪಾಡಿಗೆ ಡೆಂಟಲ್‌ ಓದುತ್ತಿದ್ದ ಅಪೂರ್ವಗೆ ತಾನು ಮೊದಲ ಆಡಿಷನ್‌ನಲ್ಲೇ ಆಯ್ಕೆಯಾಗುತ್ತೇನೆಂಬ ಒಂದು ಸಣ್ಣ ಕಲ್ಪನೆಯೂ ಇರಲಿಲ್ಲ. ಅಂದಹಾಗೆ, ಅಪೂರ್ವ ಬೆಂಗಳೂರು ಹುಡುಗಿ. ದಾವಣಗೆರೆಯಲ್ಲಿ ಕಾಲೇಜು ಓದುತ್ತಿದ್ದಾಗ “ಫ‌ಸ್ಟ್‌ ರ್‍ಯಾಂಕ್‌ ರಾಜು’ ಎಂಬ ಸಿನಿಮಾ ಆರಂಭವಾಗುತ್ತಿರುವ ವಿಷಯ ಕೇಳಿ ಆಡಿಷನ್‌ಗೆ ಹೋದವರು ಅಪೂರ್ವ. ಚಿಕ್ಕಂದಿನಲ್ಲೇ ಸಿನಿಮಾ ಬಗ್ಗೆ ಕನಸು ಕಂಡಿದ್ದ ಅಪೂರ್ವಗೆ ಛಾನ್ಸ್‌ ಸಿಕ್ಕಿಲ್ಲದಿದ್ದರೂ ಆಡಿಷನ್‌ ಒಂದು ಅನುಭವವಾಗುತ್ತದೆಂಬ ಕಾರಣಕ್ಕೆ ಹೋದರಂತೆ. “ನಿಜ ಹೇಳಬೇಕೆಂದರೆ ನನಗೆ ಆಡಿಷನ್‌ನಲ್ಲಿ ಆಯ್ಕೆಯಾಗುವ ಯಾವ ವಿಶ್ವಾಸವೂ ಇರಲಿಲ್ಲ. ಏಕೆಂದರೆ ನನಗೆ ಸಿನಿಮಾ ಬ್ಯಾಕ್‌ಗ್ರೌಂಡ್‌ ಇರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಇದು ಮೊದಲ ಸಿನಿಮಾ. ಕಾಲೇಜು ದಿನಗಳಲ್ಲಿ ಕಲ್ಚರಲ್‌ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ಬಿಟ್ಟರೆ ಮಿಕ್ಕಂತೆ ಸಿನಿಮಾಕ್ಕೆ ಸಂಬಂಧಪಟ್ಟಂತೆ ಯಾವುದೇ ತರಬೇತಿ ಪಡೆದಿಲ್ಲ. ಹಾಗಾಗಿ, ನನಗೆ ಈ ಸಿನಿಮಾಕ್ಕೆ ಆಯ್ಕೆಯಾಗುವ ನಂಬಿಕೆ ಇರಲಿಲ್ಲ. ಅದೇ ಕಾರಣಕ್ಕೆ ನಾನು ಆಡಿಷನ್‌ ಕೊಟ್ಟು ಬರುವವರೆಗೆ ಮನೆಯಲ್ಲೂ ಹೇಳಿರಲಿಲ್ಲ. ಆ ನಂತರ ಹೇಳಿದೆ. ಆದರೆ ಆಡಿಷನ್‌ನಲ್ಲಿ ನಾನು ಆಯ್ಕೆಯಾದೆ ಎಂದಾಗ ಮೊದಲು ನಂಬಲಾಗಲಿಲ್ಲ. ಆಡಿಷನ್‌ ಆಗಿ 10ನೇ ದಿನಕ್ಕೆ ಚಿತ್ರೀಕರಣ ಆರಂಭವಾಯಿತು. ಹಾಗಾಗಿ ಆ ಗ್ಯಾಪಲ್ಲಿ ನಿರ್ದೇಶಕ ನರೇಶ್‌ ವರ್ಕ್‌ಶಾಪ್‌ ಮಾಡಿಸಿ ಒಂದಷ್ಟು ತರಬೇತಿ ಕೊಡಿಸಿದರು’ ಎಂದು ತಾವು ಸಿನಿಮಾಕ್ಕೆ ಆಯ್ಕೆಯಾದ ಬಗ್ಗೆ ಹೇಳುತ್ತಾರೆ ಅಪೂರ್ವ. 

Advertisement

ಒಳ್ಳೆಯ ಲಾಂಚ್‌
ಸಾಮಾನ್ಯವಾಗಿ ಗಾಂಧಿನಗರದಲ್ಲಿ ಹೊಸಬರ ಸಿನಿಮಾಗಳೆಂದರೆ ತಿರುಗಿ ನೋಡುವವರು ಕಡಿಮೆ. ಆದರೆ, “ಫ‌ಸ್ಟ್‌ ರ್‍ಯಾಂಕ್‌ ರಾಜು’ ಚಿತ್ರ ಮಾತ್ರ ಹೊಸಬರ ಸಿನಿಮಾವಾದರೂ ಗೆದ್ದಿದೆ. ಈ ಮೂಲಕ ಆ ಚಿತ್ರತಂಡ ಎಲ್ಲರಿಗೂ ಒಳ್ಳೆಯ ಹೆಸರು ಸಿಕ್ಕಿದೆ. ಹಾಗಾಗಿಯೇ ಅಪೂರ್ವ ಇದನ್ನು ತನಗದು ಸರಿಯಾದ ಲಾಂಚ್‌ ಎನ್ನುತ್ತಾರೆ. “ಚಿತ್ರರಂಗಕ್ಕೆ ಸಾಕಷ್ಟು ಮಂದಿ ಹೊಸಬರು ಬರುತ್ತಾರೆ. ಆದರೆ ಸರಿಯಾದ ಲಾಂಚ್‌ ಸಿಗದೇ ಪ್ರತಿಭಾವಂತರು ಕೂಡಾ ಸದ್ದಿಲ್ಲದೇ ಮಾಯವಾಗುವಂತಾಗಿದೆ. ಆ ವಿಷಯದಲ್ಲಿ ನಾನು ಲಕ್ಕಿ. “ಫ‌ಸ್ಟ್‌ ರ್‍ಯಾಂಕ್‌ ರಾಜು’ ನನಗೆ ಒಳ್ಳೆಯ ಲಾಂಚ್‌ ಎಂದು ಖುಷಿಯಿಂದ ಹೇಳಿಕೊಳ್ಳುತ್ತೇನೆ. ಅದಕ್ಕೆ ಕಾರಣ ಚಿತ್ರತಂಡ. ತಂಡದ ಪ್ರತಿಯೊಬ್ಬರಿಗೂ ಒಂದೊಳ್ಳೆಯ ಸಿನಿಮಾ ಕೊಡುವ ಆಸೆ ಇತ್ತು. ಆ ನಿಟ್ಟಿನಲ್ಲಿ ಎಲ್ಲರು ಒಂದು ತಂಡವಾಗಿ ಕೆಲಸ ಮಾಡಿದರು. ಬಹುತೇಕ ನಾವೆಲ್ಲರೂ ಹೊಸಬರಾಗಿದ್ದರಿಂದ ಏನೋ ಒಂದು ಹೊಸತನ ಕೊಡಬೇಕು, ಚಿತ್ರರಂಗದಲ್ಲಿ ನೆಲೆ ನಿಲ್ಲಬೇಕೆಂಬ ಆಸೆ ಇತ್ತು. ಆ ಮಟ್ಟಿಗೆ ನಮ್ಮದು ತುಂಬಾ ಒಳ್ಳೆಯ ತಂಡವಾಗಿತ್ತು. ಅದರ ಪರಿಣಾಮವಾಗಿಯೇ ಚಿತ್ರ ಈಗ ಯಶಸ್ಸು ಕಂಡಿದೆ. 50 ದಿನ ದಾಟಿ ಮುನ್ನುಗ್ಗುತ್ತಿದೆ. ಬಿಡುಗಡೆಯ ಮುನ್ನ ಸಿನಿಮಾವನ್ನು ಜನ ಹೇಗೆ ಸ್ವೀಕರಿಸುತ್ತಾರೆಂಬ ಭಯ ಇತ್ತು. ಆದರೆ ಒಳ್ಳೆಯ ಪ್ರಯತ್ನವನ್ನು ಜನ ಕೈ ಬಿಡುವುದಿಲ್ಲ ಎಂಬುದಕ್ಕೆ ಈ ಚಿತ್ರವೇ ಸಾಕ್ಷಿ’ ಎಂದು ಖುಷಿಯಿಂದ ಹೇಳುತ್ತಾರೆ ಅಪೂರ್ವ. ಮೊದಲ ಆಡಿಷನ್‌ನಲ್ಲೇ ಆಯ್ಕೆಯಾಗಿ ನಾಯಕಿಯಾದ ಬಗ್ಗೆ ಅಪೂರ್ವ ಅಪ್ಪ-ಅಮ್ಮನಿಗೂ ಖುಷಿ ಇದೆಯಂತೆ. ಮೊದಲ ದಿನ ಮೊದಲ ಶೋ ನೋಡಿ ಆವರು ಖುಷಿಪಟ್ಟರಂತೆ. ಹೊಸಬರ ಚಿತ್ರವನ್ನು ಪ್ರೋತ್ಸಾಹಿಸಿದ ಕನ್ನಡ ಚಿತ್ರರಂಗದ ಮಂದಿಗೆ ಥ್ಯಾಂಕ್ಸ್‌ ಹೇಳಲು ಅಪೂರ್ವ ಮರೆಯುವುದಿಲ್ಲ. “ಉಪೇಂದ್ರ ಸೇರಿದಂತೆ ಸಾಕಷ್ಟು ಮಂದಿ ನಮ್ಮ ಸಿನಿಮಾಗಳನ್ನು ನೋಡಿ ಖುಷಿಯಿಂದ ಮಾತನಾಡಿದರು. ಇವತ್ತು “ಫ‌ಸ್ಟ್‌ ರ್‍ಯಾಂಕ್‌ ರಾಜು’ಗೆ ಈ ಮಟ್ಟದ ಪ್ರತಿಕ್ರಿಯೆ ಸಿಗುವಲ್ಲಿ ಕನ್ನಡ ಚಿತ್ರರಂಗದ ಮಂದಿಯ ಪಾತ್ರ ಮಹತ್ವದ್ದು. ಹೊಸಬರ ಚಿತ್ರವೆಂದು ಕಡೆಗಣಿದೇ ಪ್ರೋತ್ಸಾಹಿಸುವ ಮೂಲಕ ಚಿತ್ರ ಗೆಲ್ಲುವಲ್ಲಿ ಸಹಕಾರ ನೀಡಿದ್ದಾರೆ’ ಎನ್ನಲು ಅಪೂರ್ವ ಮರೆಯುವುದಿಲ್ಲ. 

ತೆಲುಗುನಿಂದ ಆಫ‌ರ್‌
ಸಹಜವಾಗಿಯೇ ಒಂದು ಸಿನಿಮಾ ಹಿಟ್‌ ಆದ ಕೂಡಲೇ ನಾಯಕ-ನಾಯಕಿಯರಿಗೆ ಸಾಕಷ್ಟು ಅವಕಾಶಗಳು ಬರುತ್ತವೆ. ಆ ವಿಷಯದಲ್ಲಿ ಅಪೂರ್ವ ಕೂಡ ಹೊರತಾಗಿಲ್ಲ. ಸಿನಿಮಾ ಬಿಡುಗಡೆಯಾದ ಕೆಲವೇ ದಿನಕ್ಕೆ ಅಪೂರ್ವಗೆ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬಂತಂತೆ. ಅದರಲ್ಲಿ ತೆಲುಗು ಚಿತ್ರದಿಂದಲೂ ಆಫ‌ರ್‌ ಬಂದಿದ್ದು, ಅಪೂರ್ವ ತೆಲುಗು ಸಿನಿಮಾವೊಂದಕ್ಕೆ ಸಹಿ ಮಾಡಿದ್ದಾರೆ. ಅಲ್ಲಿಗೆ ಕನ್ನಡ ಹುಡುಗಿಯ ತೆಲುಗು ಪಯಣ ಎನ್ನಲಡ್ಡಿಯಿಲ್ಲ. “ಸಿನಿಮಾ ಬಿಡುಗಡೆಯಾದ 25ನೇ ದಿನಕ್ಕೆ ನನಗೆ ನಾಲ್ಕೈದು ಸಿನಿಮಾಗಳ ಆಫ‌ರ್‌ ಬಂದುವು. ನನಗೆ ಅಷ್ಟೇನು ಇಷ್ಟವಾಗಲಿಲ್ಲ. ಒಂಚೂರಾದರೂ ಪರ್‌ಫಾರ್ಮೆನ್ಸ್‌ಗೆ ಅವಕಾಶವಿರುವ ಪಾತ್ರದಲ್ಲಿ ನಟಿಸಬೇಕೆಂಬ ಕಾರಣಕ್ಕೆ ತುಂಬಾ ಚೂಸಿಯಾಗಿ ಸಿನಿಮಾವನ್ನು ಆಯ್ಕೆ ಮಾಡುತ್ತಿದ್ದೇನೆ. ನಿಧಾನವಾಗಿಯಾದರೂ ಒಳ್ಳೆಯ ಪಾತ್ರ ಸಿಕ್ಕರೆ ಸಾಕು ಎಂಬ ಆಸೆ ನನದು. ಈಗಾಗಲೇ ತೆಲುಗು ಸಿನಿಮಾವೊಂದನ್ನು ಒಪ್ಪಿಕೊಂಡಿದ್ದೇನೆ. ಮಾರ್ಚ್‌ನಲ್ಲಿ ಆ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ಹಾಗಂತ ನನಗೆ ಕನ್ನಡದಲ್ಲೇ ಒಳ್ಳೆಯ ಸಿನಿಮಾ ಮಾಡುವಾಸೆ. ಏಕೆಂದರೆ ನಾನು ಕನ್ನಡದ ಹುಡುಗಿ. ಒಳ್ಳೆಯ ಪಾತ್ರಕ್ಕಾಗಿ ಎದುರು ನೋಡುತ್ತಿದ್ದೇನೆ’ ಎಂಬುದು ಅಪೂರ್ವ ಮಾತು.  ಇನ್ನು, ಅಪೂರ್ವಗೆ ಪಾತ್ರಕ್ಕಾಗಿ ಬೋಲ್ಡ್‌ ಅಂಡ್‌ ಗ್ಲಾಮರಸ್‌ ಆಗಿ ಕಾಣಿಸಿಕೊಳ್ಳಲು ಯಾವುದೇ ಅಭ್ಯಂತರವಿಲ್ಲ. ಅಶ್ಲೀಲವಾಗಿ ಕಾಣದೇ ಗ್ಲಾಮರಸ್‌ ಆಗಿ ಕಾಣಿಸಿಕೊಳ್ಳುವುದರಲ್ಲಿ ತಪ್ಪಿಲ್ಲ ಎನ್ನುತ್ತಾರೆ ಅಪೂರ್ವ. 

ಬಹುತೇಕ ನಟಿಯರಂತೆ ಅಪೂರ್ವಗೆ ಕನ್ನಡದಲ್ಲಿ ಪುನೀತ್‌ ರಾಜ್‌ಕುಮಾರ್‌ ಜೊತೆ ನಾಯಕಿಯಾಗಿ ನಟಿಸಬೇಕೆಂಬ ಆಸೆಯ ಜೊತೆಗೆ ಮುಂದೊಂದು ಅವಕಾಶ ಸಿಗಬಹುದೆಂಬ ವಿಶ್ವಾಸವೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next