ಸಿಡ್ನಿ: ಸುಮಾರು ಎಂಟು ತಿಂಗಳ ಬಳಿಕ ಆಡಿದ ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾ ಹೀನಾಯ ಸೋಲನುಭವಿಸಿದೆ. ಐಪಿಎಲ್ ನಲ್ಲಿ ಮಿಂಚಿದ್ದ ಆಟಗಾರರು ಟೀಂ ಇಂಡಿಯಾದಲ್ಲಿ ಹೀನಾಯ ಪ್ರದರ್ಶನ ತೋರಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಐಪಿಎಲ್ ನಲ್ಲಿ ನೀರಸ ಪ್ರದರ್ಶನ ತೋರಿದ್ದ ಆಸೀಸ್ ಆಟಗಾರರು ರಾಷ್ಟ್ರೀಯ ತಂಡದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ.
ಆರ್ ಸಿಬಿ ಪರ ಆಡುವ ಫಿಂಚ್ ಮತ್ತು ರಾಜಸ್ಥಾನ್ ಪರ ಆಡುವ ಸ್ಮಿತ್ ಶುಕ್ರವಾರದ ಪಂದ್ಯದಲ್ಲಿ ಶತಕ ಬಾರಿಸಿದರೆ, ಪಂಜಾಬ್ ಪರ ಕಳಪೆ ಪ್ರದರ್ಶನ ನೀಡಿದ್ದ ಗ್ಲೆನ್ ಮ್ಯಾಕ್ಸ್ ವೆಲ್ ಐದು ಫೋರ್ ಮೂರು ಸಿಕ್ಸರ್ ಬಾರಿಸಿ 45 ರನ್ ಬಾರಿಸಿದರು. ಇದೇ ವೇಳೆ ವೆಸ್ಟ್ ಇಂಡೀಸ್ ವಿರುದ್ಧ ಆಕ್ಲಂಡ್ ನಲ್ಲಿ ನಡೆದ ಪಂದ್ಯದಲ್ಲಿ ಕಿವೀಸ್ ನ ಜಿಮ್ಮಿ ನೀಶಮ್ 24 ಎಸೆತಗಳಲ್ಲಿ 48 ರನ್ ಬಾರಿಸಿದರು. ಇವರು ಕೂಡಾ ಪಂಜಾಬ್ ತಂಡದ ಪರವಾಗಿ ಐಪಿಎಲ್ ಆಡಿದ್ದರು.
ಮ್ಯಾಕ್ಸ್ ವೆಲ್ ಭರ್ಜರಿ ಬ್ಯಾಟ್ ಮಾಡುತ್ತಿರುವಾಗ ವಿಕೆಟ್ ಕೀಪಿಂಗ್ ಮಾಡುತ್ತಿದ್ದ ಐಪಿಎಲ್ ನಲ್ಲಿ ಪಂಜಾಬ್ ತಂಡದ ನಾಯಕ ಕೆ ಎಲ್ ರಾಹುಲ್ ಮನಸ್ಥಿತಿಯ ಬಗ್ಗೆ ಹಲವರು ಟ್ರೋಲ್ ಮಾಡಿದ್ದರು. ನನ್ನ ನಾಯಕತ್ವದಲ್ಲಿ ಕೆಟ್ಟ ಪ್ರದರ್ಶನ ತೋರಿದ್ದ ಗ್ಲೆನ್ ಈಗ ಹೇಗೆ ಬ್ಯಾಟ್ ಬೀಸುತ್ತಿದ್ದಾನೆ ಎಂಬ ಯೋಚನೆಯ ಮುಖಭಾವದೊಂದಿಗೆ ಕೆ ಎಲ್ ರಾಹುಲ್ ರ ಫೋಟೊವನ್ನು ಟ್ರೋಲ್ ಮಾಡಲಾಗಿತ್ತು.
ಇದನ್ನೂ ಓದಿ:ಕಿವೀಸ್ ಪ್ರವಾಸದಲ್ಲಿರುವ ಪಾಕ್ ತಂಡದ ಏಳು ಸದಸ್ಯರಿಗೆ ಕೋವಿಡ್ ಸೋಂಕು: ಛೀಮಾರಿ ಹಾಕಿದ ಕಿವೀಸ್
ವರುನ್ ಎಂಬವರು ಟ್ವಿಟ್ಟರ್ ನಲ್ಲಿ ಫೋಟೊವನ್ನು ಹಾಕಿ ಜೇಮ್ಸ್ ನೀಶಮ್ ಗೆ ಟ್ಯಾಗ್ ಮಾಡಿ, ನಿಮ್ಮ ಮತ್ತು ಗ್ಲೆನ್ ಮ್ಯಾಕ್ಸ್ ವೆಲ್ ಬ್ಯಾಟಿಂಗ್ ನೋಡಿ ರಾಹುಲ್ ಪರಿಸ್ಥಿತಿ ಹೀಗಾಗಿದೆ ಎಂದು ಬರೆದಿದ್ದರು. ಈ ಪೋಸ್ಟನ್ನು ಶೇರ್ ಮಾಡಿದ ನೀಶಮ್’ ಇದು ಚೆನ್ನಾಗಿದೆ’ ಎಂದು ಮ್ಯಾಕ್ಸ್ ವೆಲ್ ಗೆ ಟ್ಯಾಗ್ ಮಾಡಿದ್ದರು.
ಈ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ ಮ್ಯಾಕ್ಸ್ ವೆಲ್, “ನಾನು ಬ್ಯಾಟಿಂಗ್ ಮಾಡುವಾಗ ರಾಹುಲ್ ಬಳಿ ಕ್ಷಮೆ ಕೇಳಿದ್ದೇನೆ” ಎಂದಿದ್ದಾರೆ.
ಐಪಿಎಲ್ ನಲ್ಲಿ ಪ್ರಚಂಡ ಫಾರ್ಮ್ ನಲ್ಲಿದ್ದ ರಾಹುಲ್ ಕಳೆದ ಪಂದ್ಯದಲ್ಲಿ ವಿಫಲರಾದರು. ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ರಾಹುಲ್ ಕೇವಲ 12 ರನ್ ಗೆ ವಿಕೆಟ್ ಒಪ್ಪಿಸಿದರು. ವಿಕೆಟ್ ಕೀಪಿಂಗ್ ನಲ್ಲಿ ಮೂರು ಕ್ಯಾಚ್ ಹಿಡಿದು ಮಿಂಚಿದರು.