Advertisement

ಎಪಿಎಂಸಿ ಆರ್ಥಿಕ ಪ್ರಗತಿ 3 ಕೋಟಿ ರೂ. ಗುರಿ ನಿರೀಕ್ಷೆ

09:07 PM Feb 01, 2020 | Sriram |

ಉಡುಪಿ: ರೈತರ ಆರ್ಥಿಕ ಚೈತನ್ಯದ ಮೂಲವಾಗಿವೆ ಸಂತೆ ಮಾರುಕಟ್ಟೆಗಳು. ಉಡುಪಿ ತಾಲೂಕು ಎಪಿಎಂಸಿ ಪ್ರಸಕ್ತ ಸಾಲಿನಲ್ಲಿ ನಿರೀಕ್ಷೆಗೂ ಮೀರಿ ವ್ಯಾಪಾರ ವಹಿವಾಟು ನಡೆಸಿ ಉತ್ತಮ ಸಾಧನೆ ಮಾಡಿದೆ.

Advertisement

ಮಾರ್ಚ್‌ ಅಂತ್ಯಕ್ಕೆ 3 ಕೋ. ರೂ. ಗುರಿ ತಲುಪುವ ನಿರೀಕ್ಷೆಯನ್ನು ಅದು ಹೊಂದಿದೆ. ಜತೆಗೆ ನಬಾರ್ಡ್‌ನ 1.ಕೋ.ರೂ ಹಾಗೂ ಸ್ವಂತ ನಿಧಿ ಬಳಸಿ ಉಡುಪಿಯಲ್ಲಿ ಸುಸಜ್ಜಿತ ಉಪಮಾರುಕಟ್ಟೆ ಹೊಂದುವ ಉದ್ದೇಶವನ್ನು ಎಪಿಎಂಸಿ ಹೊಂದಿದೆ. 2015ರ ವರೆಗೆ ಮಾರುಕಟ್ಟೆ ಶುಲ್ಕದಿಂದ ಸಂಗ್ರಹವಾಗುವ ವಾರ್ಷಿಕ ಆದಾಯವು ಒಂದು ಕೋ.ರೂ. ಗಡಿ ದಾಟುತ್ತಿರಲಿಲ್ಲ. ಅನಂತರದ ನಾಲ್ಕು ವರ್ಷಗಳಲ್ಲಿ ಗಣನೀಯವಾಗಿ ಚೇತರಿಕೆ ಕಂಡಿದೆ. ವಾರದ ಸಂತೆಯ ವ್ಯಾಪಾರಸ್ಥರಿಗೆ ಹಳೆಯ ಶುಲ್ಕವನ್ನೇ ವಿಧಿಸಲಾಗುತಿತ್ತು. ಇದನ್ನು ಪರಿಷ್ಕರಿಸಿ ಶುಲ್ಕವನ್ನು ಏರಿಕೆ ಮಾಡಲಾಗಿದೆ. ಅಂಗಡಿಗಳ ಪರವಾನಿಗೆ, ನವೀಕರಣ, ಗ್ರಾಮೀಣ ಪ್ರದೇಶಗಳ ದಿನಸಿ ಅಂಗಡಿಗಳ ಪರವಾನಿಗೆಯಿಂದ ಆದಾಯ ಹೆಚ್ಚಳಗೊಂಡಿದೆ. 30ರಷ್ಟು ಗೋದಾಮುಗಳಿದ್ದು, ಇನ್ನಷ್ಟು ಗೋದಾಮುಗಳು ನಿರ್ಮಾಣವಾಗಬೇಕಿದೆ.

ಸುಸ್ಥಿರ ಅಭಿವೃದ್ಧಿ
ಸಂತೆಗಳು ಗ್ರಾಮೀಣ ಸುಸ್ಥಿರ ಅಭಿವೃದ್ಧಿಯ ಆಶಯವನ್ನು ಹೊಂದಿವೆ. ಸ್ಥಳೀಯವಾಗಿಯೇ ಮಾರಾಟ ಮಾಡುವ ಮತ್ತು ಸ್ಥಳೀಯವಾಗಿ ಉದ್ಯೋಗ ದೊರಕಿಸುವ, ಕರಕುಶಲ ವಸ್ತುಗಳು, ತಾಜಾ ತರಕಾರಿಗಳು, ಕೃಷಿ ಉಪಕರಣಗಳ ಮಾರಾಟಕ್ಕೆ ವೇದಿಕೆ ಒದಗಿಸುತ್ತವೆ.

ಉಡುಪಿ ತಾಲೂಕು ಕೇಂದ್ರ ಸೇರಿದಂತೆ 10 ಕಡೆಗಳಲ್ಲಿ ಗ್ರಾಮೀಣ ಸಂತೆ ನಡೆಯುತ್ತಿದೆ. ರೈತರು ತಾವು ಬೆಳೆದುದನ್ನು ಊರ ಮಾರುಕಟ್ಟೆಯಲ್ಲಿ ಮಾರುತ್ತಾರೆ. ಹೊರಗಿನಿಂದಲೂ ತರಕಾರಿ ಮಾರಾಟ ಮಾಡಲು ಜನ ಬರುತ್ತಾರೆ. ತಾಲೂಕಿನ ವಿವಿಧೆಡೆಗಳಲ್ಲಿ ಮೂಲ ಸೌಕರ್ಯ ಕೊರತೆಗಳ ನಡುವೆಯೂ ಉಪ ಸಂತೆ ಮಾರುಕಟ್ಟೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ.

ಸಂತೆ ನಡೆಯುವ ವಾರ , ಸ್ಥಳ
ಆದಿಉಡುಪಿ-ಬುಧವಾರ
ಬ್ರಹ್ಮಾವರ-ಸೋಮವಾರ
ಬಾಕೂìರು-ಶುಕ್ರವಾರ
ಹಿರಿಯಡ್ಕ-ಸೋಮವಾರ
ಶಿರ್ವ- ಗುರುವಾರ
ಕಾಪು-ಶುಕ್ರವಾರ
ಕಲ್ಯಾಣಪುರ-ರವಿವಾರ
ಕಟಪಾಡಿ-ಶನಿವಾರ
ಪಡುಬಿದ್ರಿ-ಮಂಗಳವಾರ
ಉಡುಪಿ ಮಾರುಕಟ್ಟೆ ಪ್ರಾಂಗಣ- 2ನೇ ಶನಿವಾರ ಹಾಗೂ ರವಿವಾರ ಹೊರತು ಪಡಿಸಿ ಎಲ್ಲ ದಿನಗಳು

Advertisement

ಮಾರುಕಟ್ಟೆ ಮಾಹಿತಿ
ಮಾರುಕಟ್ಟೆಗಳು ಒಟ್ಟು -10
ಮಾರುಕಟ್ಟೆ ಪ್ರಾಂಗಣ ಉಡುಪಿ-1
ಗ್ರಾಮೀಣ ಸಂತೆ ಮಾರುಕಟ್ಟೆ-9
2018-19ರಲ್ಲಿ ವಹಿವಾಟು -2.37,76,616 ಕೋ.ರೂ.
2017-18ರಲ್ಲಿ ವಹಿವಾಟು- 1,79,04,204.ಕೋ.ರೂ.
ವಾರ್ಷಿಕ ಹೆಚ್ಚಳ- 58,72,412 ಲಕ್ಷ ರೂ.

ಊರಿನ ತರಕಾರಿಗೆ
ಬೇಡಿಕೆಯಿದೆ
ಮನೆಯಲ್ಲಿ ಕೆಲವು ತರಕಾರಿಗಳನ್ನು ಬೆಳೆಸುತ್ತೇನೆ. ಅದನ್ನು ಸಂತೆಗೆ ತಂದು ಮಾರುತ್ತೇನೆ. ಸಂತೆಗೆ ಬಂದವರು ಊರಿನ ತರಕಾರಿಯೇ ಅಂತ ಕೇಳಿ ಪಡೆದುಕೊಳ್ಳುತ್ತಾರೆ. ಊರಿನ ತರಕಾರಿಗೆ ಬೇಡಿಕೆಯಿದೆ
-ಮಾಲತಿ ಶಿರ್ವ,
ಊರ ತರಕಾರಿ ವ್ಯಾಪಾರಸ್ಥೆ.

ಮೂಲಸೌಕರ್ಯಕ್ಕೆ ಆದ್ಯತೆ
ಕೃಷಿ ಬೆಳೆಗಾರ ವ್ಯಾಪಾರಸ್ಥರಿಗೆ ಮೂಲ ಸೌಕರ್ಯ ಒದಗಿಸುವುದು ನಮ್ಮ ಆದ್ಯತೆ. ಅದನ್ನು ಒದಗಿಸುವ ಕಡೆ ಗಮನ ನೀಡುತ್ತೇವೆ. ವಾರ್ಷಿಕವಾಗಿ ನಿರ್ದಿಷ್ಟ ಗುರಿ ಹೊಂದುವ ಕುರಿತು ಮುಖ್ಯ ಕಚೇರಿಯಿಂದ ನಿರ್ದೇಶನ ಕೂಡ ಇರುತ್ತದೆ. ಅದರಂತೆ ಈ ಬಾರಿ ತಾಲೂಕಿನಲ್ಲಿ 3 ಕೋ. ಗುರಿ ಹೊಂದಿದ್ದೇವೆ.
-ಗಾಯತ್ರಿ ಎಂ., ಕಾರ್ಯದರ್ಶಿ. ಎಪಿಎಂಸಿ

ಕೋಲ್ಡ್‌ ಸ್ಟೋರೇಜ್‌ ಅಗತ್ಯ
ರೈತರು ಇರುವುದು ಗ್ರಾಮೀಣ ಕಡೆಗಳಲ್ಲಿ. ಅಲ್ಲಿ ಅವರಿಗೆ ಸೂಕ್ತ ಅವಕಾಶ ದೊರೆಯಬೇಕು. ಹೆಚ್ಚುವರಿ ಗೋದಾಮು ಹೊಂದುವುದು, ಕೋಲ್ಡ್‌ ಸ್ಟೋರೇಜ್‌ ತೆರೆಯುವ ಕುರಿತು ಚಿಂತನೆಗಳು ನಮ್ಮ ಮುಂದಿವೆ.
ಕೆ.ಶ್ಯಾಮ್‌ಪ್ರಸಾದ್‌, ಅಧ್ಯಕ್ಷ, ಎಪಿಎಂಸಿ ಉಡುಪಿ.

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next