ಜಗಳೂರು: ಇಲ್ಲಿನ ಎಪಿಎಂಸಿ ನೂತನ ಅಧ್ಯಕ್ಷರಾಗಿ ಯು.ಜಿ.ಶಿವಕುಮಾರ್, ಉಪಾಧ್ಯಕ್ಷರಾಗಿ ಉಮಾದೇವಿ ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬೆಳಿಗ್ಗೆ 11.00 ಗಂಟೆಗೆ ಆರಂಭವಾದ ಚುನಾವಣೆಯ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ಸಿನ ಯು.ಜಿ.ಶಿವಕುಮಾರ್, ಬಿಜೆಪಿಯ ಶ್ರೀಶೈಲಾಚಾರಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಉಪಾಧ್ಯಕ್ಷ ಸ್ಥಾನಕ್ಕೆ ಉಮಾದೇವಿ ಒಬ್ಬರೇ ನಾಮಪತ್ರ ಸಲ್ಲಿಸಿದರು. ಈ ನಡುವೆ ನಾಮಪತ್ರ ಪರಿಶೀಲನೆ ನಂತರ ನಡೆದ ನಾಮಪತ್ರ ವಾಪಾಸ್ಸು ಪಡೆಯುವ ಪ್ರಕ್ರಿಯೆಯಲ್ಲಿ ಶ್ರೀಶೈಲಾಚಾರಿ ನಾಮಪತ್ರ ವಾಪಾಸ್ಸು ಪಡೆದರು. ಅಧ್ಯಕ್ಷರಾಗಿ ಯು.ಜಿ.ಶಿವಕುಮಾರ್, ಉಪಾಧ್ಯಕ್ಷರಾಗಿ ಉಮಾದೇವಿ ಆಯ್ಕೆ ಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ತಹಶೀಲ್ದಾರ್ ಶ್ರೀಧರಮೂರ್ತಿ ಘೋಷಿಸಿದರು.
ಸದಸ್ಯರಾದ ಎನ್.ಎಸ್.ರಾಜು, ಡಿ.ಟಿ.ಗುರುಮೂರ್ತಿ, ಎಸ್. ಕೆ.ರಾಮರೆಡ್ಡಿ, ಎಂ.ನಿರ್ಮಲ, ಆರ್.ವಿ.ಗೋವಿಂದರಾಜ್, ಕೆ.ಹನುಮಂತಪ್ಪ, ರೇಣುಕಾನಂದ, ಬಿ.ಎನ್. ತಿಪ್ಪೇಸ್ವಾಮಿ, ಎಸ್.ಜೆ. ಮಲ್ಲಿಕಾರ್ಜುನಸ್ವಾಮಿ, ಜಿ.ಪಿ.ಶರಣಪ್ಪ ನಾಮನಿರ್ದೇಶನ ಸದಸ್ಯರಾದ ಬಿ.ಬಾಲಮ್ಮ, ಉಮಾಪತಿ, ಎಚ್.ಎಸ್.ಶಿವಕುಮಾರ್, ಎಪಿಎಂಸಿ ಕಾರ್ಯದರ್ಶಿ ಹಾಲಪ್ಪ ಇತರರಿದ್ದರು.
ತರಕಾರಿ ಮಾರುಕಟ್ಟೆ ಸ್ಥಾಪನೆಗೆ ಆದ್ಯತೆ: ಜಗಳೂರು ಕೃಷಿ ಉತ್ಪನ್ನ ಮಾರುಕಟ್ಟೆಗೆ ಅಗತ್ಯ ಮೂಲ ಸೌಲಭ್ಯವನ್ನು ಒದಗಿಸುವ ಮೂಲಕ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಜಗಳೂರು ತಾಲೂಕಿನಾದ್ಯಂತ ರೈತರು ಹೆಚ್ಚು ತರಕಾರಿ ಬೆಳೆಯುತ್ತಿದ್ದು, ಅಗತ್ಯ ತರಕಾರಿ ಮಾರುಕಟ್ಟೆ ಸ್ಥಾಪಿಸಲು ಶ್ರಮಿಸಲಾಗುವುದು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಅಧ್ಯಕ್ಷ ಯು.ಜಿ.ಶಿವಕುಮಾರ್ ತಿಳಿಸಿದರು.
ಈ ವರ್ಷ ತಾಲೂಕಿನಲ್ಲಿ ಭೀಕರ ಬರ ಎದುರಾಗಿ ಬೆಳೆ ಹಾನಿಯಾಗಿರುವುದರಿಂದ ಸಹಜವಾಗಿ ಕೃಷಿ ಉತ್ಪನ್ನ ಮಾರುಕಟ್ಟೆಯ ಆವಕ ಕಡಿಮೆಯಾಗಿದೆ. ಸರ್ಕಾರದ ಬಿಡುಗಡೆಯಾಗುವ ಅನುದಾನ ಮತ್ತು ಎಪಿಎಂಸಿ ಸಂಗ್ರಹವಾಗುವ ಆದಾಯವನ್ನು ಕ್ರೂಢಿಕರಿಸಿ ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.
ಶಾಸಕರಿಂದ ಅಭಿನಂದನೆ: ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹಾಗೂ ನಾಮನಿರ್ದೇಶನ ಸದಸ್ಯರನ್ನು ಶಾಸಕ ಎಚ್.ಪಿ.ರಾಜೇಶ್ ಅಭಿನಂದಿಸಿದರು. ಬರಪೀಡಿತ ತಾಲೂಕಿನ ರೈತರ ಸಮಸ್ಯೆಗಳಿಗೆ ಪೂರಕವಾದ ನಿರ್ಣಯ ತೆಗೆದುಕೊಂಡು ಉತ್ತಮ ಆಡಳಿತ ನಡೆಸಬೇಕು. ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಿ ಎಪಿಎಂಸಿ ಪ್ರಾಂಗಣವನ್ನು ಅಭಿವೃದ್ಧಿಪಡಿಸಬೇಕು ಎಂದು ಕಿವಿಮಾತು ಹೇಳಿದರು.
ತಾಪಂ ಉಪಾಧ್ಯಕ್ಷ ಮುದೇಗೌಡ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿಪ್ಪೇಸ್ವಾಮಿಗೌಡ, ಜಿಪಂ ಮಾಜಿ ಸದಸ್ಯ ಕೆ.ಪಿ.ಪಾಲಯ್ಯ, ಮುಖಂಡರಾದ ಮೊಬೈಲ್ ಮಂಜುನಾಥ್, ಬಿಸ್ತುವಳ್ಳಿ ಬಾಬು, ದೇವೇಂದ್ರಪ್ಪ, ಮಾರಣ್ಣ, ಪ್ರಭಣ್ಣ, ಶಿವನಗೌಡ, ಗಿರೀಶ್ ಒಡೆಯರ್ ಇತರರಿದ್ದರು.