Advertisement

ಎಪಿಎಂಸಿ ರಸ್ತೆ: ನಗರಸಭೆಗೆ ಹಸ್ತಾಂತರಕ್ಕೆ ಸಿದ್ಧತೆ

05:49 PM Feb 19, 2022 | Team Udayavani |

ಪುತ್ತೂರು: ಇಪ್ಪತ್ತೈದು ವರ್ಷಗಳ ಹಿಂದೆ ಎಪಿಎಂಸಿ ಯಾರ್ಡ್‌ ಗೆ ಸಂಪರ್ಕ ಕಲ್ಪಿಸಲೆಂದೇ ಪುತ್ತೂರು ಅರುಣಾ ಥಿಯೇಟರ್‌ -ಸಾಲ್ಮರ ತನಕ ರಸ್ತೆ ಯನ್ನು ಅಭಿವೃದ್ಧಿ ದೃಷ್ಟಿಯಿಂದ ನಗರಸಭೆಗೆ ಹಸ್ತಾಂತರಗೊಳಿಸಲು ಸಿದ್ಧತೆ ನಡೆದಿದೆ.

Advertisement

ಪುತ್ತೂರು ಅರುಣಾ ಟಾಕೀಸ್‌ -ಸಾಲ್ಮರ ತನಕ ರಸ್ತೆ ಎಪಿಎಂಸಿ ವ್ಯಾಪ್ತಿಗೆ ಸೇರಿದ್ದು ಸಾರ್ವಜನಿಕವಾಗಿ ಬಳಸಲ್ಪಡುವ ಈ ರಸ್ತೆ ಅಭಿವೃದ್ಧಿಗೆ ಎಪಿಎಂಸಿಯಲ್ಲಿ ಅನು ದಾನಗಳೇ ಇಲ್ಲ. ಎಪಿಎಂಸಿ ಹೆಸರ ಲ್ಲಿರುವ ಈ ರಸ್ತೆ ನಗರಸಭೆಯಿಂದ ಅಭಿವೃದ್ಧಿ ಪಡಿಸಲು ಅಸಾಧ್ಯ. ಹಾಗಾಗಿ ರಸ್ತೆಯನ್ನು ಪೂರ್ಣ ಪ್ರಮಾಣದಲ್ಲಿ ನಗರಸಭೆಗೆ ಹಸ್ತಾಂತರಿಸಲು ಎಪಿಎಂಸಿ ಸಭೆ ನಿರ್ಧರಿಸಿದೆ.

ಪರ-ವಿರೋಧ
ಎಪಿಎಂಸಿ ಯಾರ್ಡ್‌ಗೆ ಸಂಪರ್ಕ ಕಲ್ಪಿಸಲೆಂದೆ ಈ ರಸ್ತೆಯನ್ನು ನಿರ್ಮಿಸಿ ಅದನ್ನು ಎಪಿಎಂಸಿ ಹೆಸರಿಗೆ ಬರೆಸಲಾಗಿತ್ತು. ಎಪಿಎಂಸಿ ಹೆಸರಿನಲ್ಲಿರುವ ರಸ್ತೆಯನ್ನು ಅಭಿವೃದ್ಧಿ ಮಾಡುವ ಬಗ್ಗೆ ನಗರಸಭೆಯಲ್ಲಿ ಅಪಸ್ವರ ಕೇಳಿ ಬಂದಿತ್ತು. ಎಪಿಎಂಸಿ ರಸ್ತೆ ಯನ್ನು ಅವರೇ ಅಭಿವೃದ್ಧಿ ಪಡಿಸಲಿ ಎಂದು ನಗರಸಭೆ ಸದಸ್ಯರು ಅನೇಕರು ವಾದಿಸುತ್ತ ಬಂದಿದ್ದರು. ಆದರೆ ರಸ್ತೆ ಪಕ್ಕದ ವ್ಯವಹಾರ ಮಳಿಗೆ, ಅಂಗಡಿಗಳ ತೆರಿಗೆಯನ್ನು ನಗರ ಸಭೆ ವಸೂಲಿ ಮಾಡುವ ಕಾರಣ ರಸ್ತೆ ನಗರ ಸಭೆ ಯವರೇ ಅಭಿವೃದ್ಧಿ ಪಡಿಸಬೇಕು ಎಂಬ ವಾದ ಎಪಿಎಂಸಿ ಸಭೆಗಳಲ್ಲಿ ಕೇಳಿ ಬರುತ್ತಿತ್ತು. ಈ ಎರಡು ಸಂಸ್ಥೆಗಳು ರಸ್ತೆ ಅಭಿವೃದ್ಧಿ ಬಗ್ಗೆ ಪರಸ್ಪರ ಬೆರಳು ತೋರಿಸುತ್ತಿದ್ದ ಕಾರಣ ದಶಕಗಳಿಂದ ರಸ್ತೆ ಅಭಿವೃದ್ಧಿ ಮರೀಚಿಕೆ ಆಗಿತ್ತು.

ಎಪಿಎಂಸಿ ಆಡಳಿತ ಮಂಡಳಿ ಒಲವು
ಎಪಿಎಂಸಿ ರಸ್ತೆ ಅಭಿವೃದ್ಧಿ ಬಗ್ಗೆ ವಾದ ವಿವಾದ, ಅಪಸ್ವರಗಳಿ ಕೇಳಿ ಬಂದ ಹಿನ್ನೆಲೆಯಲ್ಲಿ ಇತ್ತೀಚೆಗೆ ಶಾಸಕ ಸಂಜೀವ ಮಠಂದೂರು ಅವರ ಸಲಹೆ ಮೇರೆಗೆ ರಸ್ತೆಯನ್ನು ನಗರಸಭೆಗೆ ಹಸ್ತಾಂತರಿಸಲು ಎಪಿಎಂಸಿ ಆಡಳಿತ ಮಂಡಳಿ ಒಲವು ತೋರಿತ್ತು. ರಸ್ತೆ ಹಸ್ತಾಂತರದ ಬಗ್ಗೆ ನಿರ್ಣಯ ಅಂಗೀಕರಿಸಿ ನಿರ್ದೇಶಕರಿಗೆ ಕಳುಹಿಸಲಾಗುತ್ತದೆ. ಅದರ ಪ್ರತಿಯನ್ನು ನಗರಸಭೆಗೂ ಕಳುಹಿಸಲಾಗುವುದು ಎಂದು ಅಧ್ಯಕ್ಷ ದಿನೇಶ್‌ ಮೆದು ಪ್ರತಿಕ್ರಿಯಿಸಿದ್ದಾರೆ.

ಅಭಿವೃದ್ಧಿ ಕಾಣಲಿದೆ
ಎಪಿಎಂಸಿ ರಸ್ತೆ ನಗರಸಭೆಯಿಂದ ಅಭಿವೃದ್ಧಿಪಡಿಸಲು ಕೆಲವು ತಾಂತ್ರಿಕ ತೊಂದರೆಗಳಿರುವುದರಿಂದ ನಗರಸಭೆಗೆ ಹಸ್ತಾಂತರಿಸುವ ಬಗ್ಗೆ ಸೂಚನೆ ನೀಡಲಾಗಿದೆ. ಈ ರಸ್ತೆ ಹಸ್ತಾಂತರಿಸಲು ಎಪಿಎಂಸಿ ಸಭೆಯಲ್ಲಿ ಈಗಾಗಲೇ ನಿರ್ಧರಿಸಿದ್ದು, ಮುಂದಿನ ದಿನಗಳಲ್ಲಿ ಈ ರಸ್ತೆ ಹೆಚ್ಚಿನ ಅಭಿವೃದ್ಧಿ ಕಾಣಲಿದೆ.
-ಸಂಜೀವ ಮಠಂದೂರು,
ಪುತ್ತೂರು ಶಾಸಕ

Advertisement

ಚರ್ಚೆ ನಡೆಯುತ್ತಿದೆ
ಈ ರಸ್ತೆ ಎಪಿಎಂಸಿ ಹೆಸರಲ್ಲಿರುವುದರಿಂದ ನಗರಸಭೆಯಿಂದ ಈ ರಸ್ತೆ ಅಭಿವೃದ್ಧಿ ಅಸಾಧ್ಯ. ಎಪಿಎಂಸಿ ರಸ್ತೆ ನಗರಸಭೆಗೆ ಹಸ್ತಾಂತರಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಅಂತಿಮ ತೀರ್ಮಾನ ಇನ್ನಷ್ಟೇ ಆಗಬೇಕಿದೆ.
-ಜೀವಂಧರ್‌ ಜೈನ್‌,
ನಗರಸಭೆ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next