ಶಿರಸಿ: ಕೋವಿಡ್ 19 ತಡೆಗಟ್ಟುವ ಹಿನ್ನೆಲೆಯಲ್ಲಿ ಹಾಗೂ ರೈತರ ಹಿತದೃಷ್ಟಿಯಿಂದ ಎಪಿಎಂಸಿ ಆವಾರದೊಳಗೆ ಸಾರ್ವಜನಿಕ ವಾಹನಗಳ ಅನಗತ್ಯ ಪ್ರವೇಶಕ್ಕೆ ಕಡಿವಾಣ ಹಾಕಲು ನಿರ್ಧರಿಸಲಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ವಿಶ್ವನಾಥ ಹೆಗಡೆ ಶೀಗೆಹಳ್ಳಿ ತಿಳಿಸಿದ್ದಾರೆ.
ಎಪಿಎಂಸಿ ಆವಾರದೊಳಗೆ ಹೆಚ್ಚಿನ ಬಂದೋಬಸ್ತ್ ಒದಗಿಸುವ ನಿಟ್ಟಿನಲ್ಲಿ ಮೂರು ಮುಖ್ಯ ದ್ವಾರಗಳಿಗೆ ಪ್ರತ್ಯೇಕ ಗೇಟ್ ವ್ಯವಸ್ಥೆ ಮಾಡಲಾಗುತ್ತಿದೆ. ಟಿಆರ್‌ಸಿ ಬ್ಯಾಂಕ್ ಹಿಂಭಾಗ ಹಾಗೂ ಟಿಎಸ್‌ಎಸ್ ಪಕ್ಕದಲ್ಲಿ ಗೇಟ್ ನಿರ್ಮಾಣ ಕಾರ್ಯ ಮುಕ್ತಾಯಗೊಂಡಿದ್ದು, ಟಿಎಂಎಸ್ ಪಕ್ಕದಲ್ಲಿ ಗೇಟ್ ಅಳವಡಿಕೆ ಇನ್ನೊಂದು ವಾರದೊಳಗೆ ಅಂತ್ಯಗೊಳ್ಳಲಿದೆ.
ಎಪಿಎಂಸಿ ಆವಾರದಲ್ಲಿ ರಾತ್ರಿ ವೇಳೆ ಹೊರ ಭಾಗಗಳಿಂದ ಆಗಮಿಸಿದ ಹಾಗೂ ಖಾಸಗಿ ವಾಹನಗಳು ನಿತ್ಯ ಪಾರ್ಕಿಂಗ್ ಮಾಡುತ್ತಿರುವುದು ಕಂಡುಬಂದಿತ್ತು. ಖಾಸಗಿ ವಾಹನಗಳ ಮಾಲೀಕರಿಗೆ ಈಗಾಗಲೆ ನೋಟಿಸ್ ನೀಡಿ ಎಚ್ಚರಿಕೆ ಕೂಡ ನೀಡಲಾಗಿದೆ. ಸರ್ಕಾರದ ಆದೇಶದಂತೆ ಮೂರು ಗೇಟುಗಳ ಪೈಕಿ ಟಿಆರ್‌ಸಿ ಬ್ಯಾಂಕ್ ಹಿಂಬದಿಯಲ್ಲಿನ ಗೇಟ್‌ನ್ನು ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ಬಂದ್ ಮಾಡಲಾಗಿದೆ. ಸಾರ್ವಜನಿಕರು ಮಾರುಕಟ್ಟೆಯ ಹೊರ ವಲಯದ ರಸ್ತೆ ಬಳಸಬೇಕೆಂದು ಮನವಿ ಮಾಡಿದ್ದಾರೆ.
ಮಾರುಕಟ್ಟೆಯೊಳಗೆ ಆಗಮಿಸುವ ಹೊರ ರಾಜ್ಯಗಳ ವಾಹನಗಳು ಟಿಎಸ್‌ಎಸ್ ಪಕ್ಕದ ಗೇಟ್ ಮೂಲಕ ಆಗಮಿಸಿ ಟಿಎಮ್‌ಎಸ್ ಪಕ್ಕದ ಗೇಟ್ ಮೂಲಕ ನಿರ್ಗಮಿಸಬೇಕು. ಹೊರ ಭಾಗಗಳಿಗಂದ ಆಗಮಿಸುವ ವಾಹನ ಚಾಲಕರು, ಕ್ಲೀನರ್‌ಗಳ ಸಂಪೂರ್ಣ ವಿವರ, ವಾಹನದ ಆಗಮನ ಹಾಗೂ ನಿರ್ಗಮನ ವೇಳೆಯನ್ನು ಗೇಟ್ ಬಳಿಯಲ್ಲಿರುವ ಅಧಿಕಾರಿಗಳು ನೋಂದಾಯಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ತಹಶೀಲ್ದಾರ್ ಎಂ.ಆರ್ ಕುಲಕರ್ಣಿ, ಮಾರ್ಕೆಟ್ ಯಾರ್ಡ್ ಪಿಎಸ್‌ಐ ನಾಗಪ್ಪ ಬಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಪಿಎಂಸಿ ಮುಖ್ಯ ಕಾರ್ಯನಿರ್ವಾಹಕಿ ವಿಜಯಲಕ್ಷ್ಮೀ ಸೇರಿದಂತೆ ಎಪಿಎಂಸಿ ಸದಸ್ಯರು, ಅಧಿ ಕಾರಿಗಳು ಉಪಸ್ಥಿತರಿದ್ದರು.