Advertisement

19 ವರ್ಷದಿಂದ ಬಿಲ್‌ ಪಾವತಿಸದ ಎಪಿಎಂಸಿ

10:45 AM Mar 28, 2018 | Team Udayavani |

ಕಾರ್ಕಳ: ಕಾರ್ಕಳ ಎಪಿಎಂಸಿ ಕಳೆದ 19 ವರ್ಷಗಳಿಂಂದ ನೀರಿನ ಬಿಲ್‌ ಪಾವತಿಸಲಿಲ್ಲ. 9 ಲಕ್ಷ ರೂ. ಬಾಕಿಯಿದೆ…!
ಇದು ಪುರಸಭೆಯ ಅಧ್ಯಕ್ಷೆ ಅನಿತಾ ಆರ್‌. ಅಂಚನ್‌ ಅವರ ಅಧ್ಯಕ್ಷತೆಯಲ್ಲಿ ಮಾ. 27ರಂದು ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಪ್ರತಿಪಕ್ಷದ ಸದಸ್ಯರ ಪ್ರಶಸ್ತಿಗೆ ಉತ್ತರಿಸಿದ ಇಲಾಖಾಧಿಕಾರಿ ಎಪಿಎಂಸಿ ಪುರಸಭೆಗೆ ಪಾವತಿಸಲು ಬಾಕಿ ಇರುವ ನೀರಿನ ಬಿಲ್‌ ಬಗೆಗಿನ ಮಾಹಿತಿ. ಪ್ರತಿಪಕ್ಷದ ಸದಸ್ಯ ಶುಭದಾ ರಾವ್‌ ಮಾತನಾಡಿ, ಎಪಿಎಂಸಿಯಿಂದ ಪಾವತಿಯಾಗಬೇಕಿರುವ ನೀರಿನ ಬಿಲ್‌ ಬಾಕಿಯಿರುವ ಬಗ್ಗೆ ಸಭೆಗೆ ಮಾಹಿತಿ ನೀಡುವಂತೆ ಆಗ್ರಹಿಸಿದರು.

Advertisement

1999ರಿಂದ 2015ರ ವರೆಗೆ 7,88,000 ರೂ ಬಾಕಿಯಿದ್ದು, ಅನಂತರದ 2 ವರ್ಷಗಳ ಮೊತ್ತ ಸೇರಿ ಅಂದಾಜು 9 ಲಕ್ಷ ರೂ. ಆಗಿರಬಹುದು ಎಂದು ಅಧಿಕಾರಿ ತಿಳಿಸಿದರು. ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು ಕಳೆದ ಹಲವು ವರ್ಷಗಳಿಂದ ಬಿಲ್‌ ಪಾವತಿ ಮಾಡದಿದ್ದರೂ ಎಪಿಎಂಸಿಗೆ ನೀರು ನೀಡಿವುದು ಯಾಕೆ ಎಂದು ಪ್ರಶ್ನಿಸಿ, ಕೂಡಲೇ ಬಿಲ್‌ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು. 

ಕಳೆದ ಮೂರು ವರ್ಷಗಳ ಹಿಂದೆಯೇ ಸಭೆಯಲ್ಲಿ ಈ ವಿಷಯ ಪ್ರಸ್ತಾಪ ಮಾಡಿದ್ದೇನೆ. ಆದರೆ ಈ ಬಗ್ಗೆ ನಿರ್ಲಕ್ಷ್ಯ ಮಾಡಲಾಗಿದೆ. ಹಣ ಬಾಕಿಯಿದ್ದರೂ ಎಪಿಎಂಸಿ ಅವರು ಪುರಸಭೆಗೆ ಬಂದು ಉಡಾಫೆ ಮಾತನಾಡಿದ್ದಾರೆ ಎಂದು ಶರೀಫ್ ಹೇಳಿದರು. ಪುರಸಭೆಯ ಉಪಾಧ್ಯಕ್ಷ ಗಿರಿಧರ್‌ ನಾಯಕ್‌ ಮಾತನಾಡಿ, ನೀರು ಪೂರೈಕೆ ಕಡಿತಗೊಳಿಸುವಂತೆ ತಿಳಿಸಿದರು.

ಮುಖ್ಯಾಧಿಕಾರಿ ಮೇಬಲ್‌ ಡಿ’ಸೋಜಾ ಮಾತನಾಡಿ, 1999 ಮಾರ್ಚ್‌ 22ರಂದು ಎಪಿಎಂಸಿ ಪುರಸಭೆಯ ಒಪ್ಪಂದ ಮಾಡಿಕೊಂಡಿದೆ. ಅದರಲ್ಲಿ 5 ವರ್ಷ ಎಂದು ಹೇಳಲಾಗಿದೆ. ಬಾಕಿ ಇರುವ ಬಿಲ್‌ ಪಾವತಿ ಮಾಡುತ್ತೇವೆ ಎಂದು ಎಪಿಎಂಸಿಯವರು ತಿಳಿಸಿದ್ದಾರೆ ಎಂದರು. ಉಪಾಧ್ಯಕ್ಷ ಗಿರಿಧರ್‌ ನಾಯಕ್‌ ಮಾತನಾಡಿ, ಬಿಜೆಪಿ ನಗರ ಅಧ್ಯಕ್ಷರ ನೇತೃತ್ವದಲ್ಲಿ ಎಲ್ಲಿಯೂ ಪ್ಯಾಚ್‌ ವರ್ಕ್‌ ನಡೆದಿಲ್ಲ. ಅಂತಹ ಕಾಮಗಾರಿ ನಡೆಯುವ ಪ್ರದೇಶಕ್ಕೆ ಅವರೂ ಎಲ್ಲಾದರೂ ಬಂದಿರಬಹುದು ಅಷ್ಟೇ ಎಂದು ತಿಳಿಸಿದರು.

ನಗರದ ಪುಲ್ಕೇರಿ ಪ್ರದೇಶದಲ್ಲಿ ಎಲ್‌ಪಿಜಿ ಡಿಸ್ಪೆನ್ಸಿಂಗ್‌ ಸ್ಟೇಷನ್‌ ಸ್ಥಾಪಿಸುವ ಬಗ್ಗೆ ಸದಸ್ಯರ ಒಪ್ಪಿಗೆ ಇಲ್ಲದೆಯೇ ನಿರಾಕ್ಷೇಪಣಾ ಪತ್ರ ನೀಡಲಾಗಿದೆ. ಆದರೆ ಕಳೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಪಸ್ತಾಪಿಸಿದಾಗ ಎಲ್ಲ ಸದಸ್ಯರು ಒಪ್ಪಿಗೆ ನೀಡಲಿಲ್ಲ. ಹೀಗಾಗಿ ಕೂಡಲೇ ಅದನ್ನು ರದ್ದುಗೊಳಿಸಬೇಕು ಎಂದು ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಸದಸ್ಯರ ಆಗ್ರಹಕ್ಕೆ ಮಣಿದು ಮುಖ್ಯಾಧಿಕಾರಿ ಅವರು ನಿರಾಕ್ಷೇಪಣಾ ಪತ್ರ ರದ್ದುಪಡಿಸುವ ಬಗ್ಗೆ ನಿರ್ಣಯ ಕೈಗೊಂಡರು.

Advertisement

ನಗರ ಅಧ್ಯಕ್ಷರಿಂದ ಪ್ಯಾಚ್‌ ವರ್ಕ್‌…!
ಪುರಸಭೆಯ ವ್ಯಾಪ್ತಿಯ ಅಲ್ಲಲ್ಲಿ ರಸ್ತೆಯ ಪ್ಯಾಚ್‌ವರ್ಕ್‌ ಕಾಮಗಾರಿಗಳನ್ನು ಬಿಜೆಪಿ ನಗರ ಅಧ್ಯಕ್ಷರು ನಡೆಸುತ್ತಿದ್ದಾರೆ. ಅವರು ಆ ಕೆಲಸವನ್ನು ನಡೆಸುವುದಾದರೆ ಪುರಸಭೆಯ ಅಧ್ಯಕ್ಷರು ಮತ್ತು ಸದಸ್ಯರು ಇರೋದು ಯಾಕೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಅಷ್ಫಾಕ್‌ ಪ್ರಶ್ನಿಸಿದರು. ಅಲ್ಲದೇ 5 ಮಂದಿ ನಾಮನಿರ್ದೇಶಿತ ಸದಸ್ಯರು ಇದ್ದಾರೆ ಅವರ ಅಧಿಕಾರವನ್ನು ಮೊಟಕುಗೊಳಿಸಬಾರದು ಎಂದರು.

ಬಡವರಿಗೆ ನೀರಿನ ಸಂಪರ್ಕ ಕಟ್‌…!
ಕಳೆದ ಒಂದು ತಿಂಗಳಲ್ಲಿ ನೀರಿನ ಬಿಲ್‌ ಪಾವತಿ ಮಾಡದ ಕೆಲವು ಬಡವರ ನೀರಿನ ಸಂಪರ್ಕ ಕಡಿತಗೊಳಿಸಲಾಗಿದೆ. ಆದರೆ ಕೆಲವು ಕಚೇರಿಗಳಲ್ಲಿ ಅನೇಕ ಸಮಯಗಳಿಂದ ಬಿಲ್‌ ಪಾವತಿ ಮಾಡದಿದ್ದರೂ ನೀರು ನೀಡಲಾಗುತ್ತಿದೆ. ಆದರೆ ನೀರಿನ ಸಂಪರ್ಕ ಕಡಿತಗೊಳಿಸುವ ಮೊದಲು ಪರಿಶೀಲನೆ ನಡೆಸಿ ಅವರ ಜತೆಗೆ ಚರ್ಚಿಸಬೇಕು ಎಂದು ಶುಭದಾ ರಾವ್‌ ತಿಳಿಸಿದರು. ಎಸ್‌ಸಿಎಸ್‌ಟಿ ಕಾಲನಿಯಲ್ಲಿ ನೀರಿನ ಸಂಪರ್ಕ ಕಡಿತಗೊಳಿಸಿರುವುದು ಯಾಕೆ ಎಂದು ಸದಸ್ಯೆ ಪ್ರತಿಮಾ ಪ್ರಶ್ನಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next