ಚಿಕ್ಕಬಳ್ಳಾಪುರ: ರಾಜ್ಯದ ರೈತರಿಗೆ ಅನ್ಯಾಯ ಆಗದಂತೆ ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು ಕೋವಿಡ್ 19 ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಮುಚ್ಚಲು ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಪಿಎಂಸಿ ಮುಚ್ಚಿ ರೈತರಿಗೆ ಅನ್ಯಾಯ ಆಗಲು ಅವಕಾಶ ನೀಡುವುದಿಲ್ಲ. ಆದರೆ ಒಂದು ಕಡೆ ಎಪಿಎಂಸಿ ತೆರೆಯುವ ಬದಲು 4 ಕಡೆ ತೆರೆದು ವಿಸ್ತರಣೆ ಮಾಡಲಾಗುವುದೆಂದರು.
ರೈತರು ಯಾವುದೇ ಕಾರಣಕ್ಕೂ ಆತಂಕಕ್ಕೆಒಳಗಾಬೇಕಿಲ್ಲ. ದ್ರಾಕ್ಷಿ, ಟೊಮೆಟೋ ಹಾಗೂ ಹೂವು, ಹಣ್ಣು ತರಕಾರಿ ಮಾರಾಟಕ್ಕೆ ಅಗತ್ಯ ಸ್ಥಳಾವಕಾಶ ಮಾಡಿಕೊಡಲಾಗುವುದು, ದ್ರಾಕ್ಷಿಯನ್ನು ವಿದೇಶಗಳಿಗೂ ರಪು¤ ಮಾಡಲು ಅವಕಾಶ ಇದೆ. ಆದರೆ ಸದ್ಯಕ್ಕೆ ಮಾರುಕಟ್ಟೆ ಹಾಗೂ ಬೇಡಿಕೆ ಇಲ್ಲವಾಗಿದೆ. ಜಿಲ್ಲೆಯಲ್ಲಿನ ದ್ರಾಕ್ಷಿಯನ್ನು ಬೆಂಗಳೂರು ಸೇರಿ ರಾಜ್ಯದ ಇತರೆಡೆ ಹಾಪ್‌ಕಾಮ್ಸ್ ಮೂಲಕ ಮಾರಾಟಕ್ಕೆ ಪ್ರಯತ್ನಿಸಲಾಗುವುದು. ಆದರೆ ಸದ್ಯಕ್ಕೆ ರೈತರಿಗೆ ಪರಿಹಾರ ನೀಡುವ ಉದ್ದೇಶ ಸರ್ಕಾರದ ಮುಂದಿಲ್ಲ. ಜಿಲ್ಲೆಯ ದ್ರಾಕ್ಷಿ ಬೆಳೆಗಾರರಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ವೈನರಿ ಶಾಪ್ ತೆರೆಯಲಾಗುವುದೆಂದರು.
ದೇಶದಲ್ಲಿ ರೋಗ ಪ್ರಮಾಣ ಕಡಿಮೆ: ಮುಂದುವರಿದ ರಾಷ್ಟ್ರಗಳಿಗೆ ಹೋಲಿಸಿಕೊಂಡರೆ ಭಾರತದಲ್ಲಿ ಕೋವಿಡ್ 19 ರೋಗ ಪ್ರಮಾಣ ತುಂಬಾ ಕಡಿಮೆ ಇದೆ. ಇದಕ್ಕೆ ದೇಶದ ನಾಯಕತ್ವ ನೀಡುತ್ತಿರುವ ಮೋದಿ ಕೈಗೊಳ್ಳುತ್ತಿರುವ ದಿಟ್ಟ ಕ್ರಮ ಕಾರಣ. ಕರ್ನಾಟಕ ರಾಷ್ಟ್ರದಲ್ಲಿ 3 ರಿಂದ 9ನೇ ಸ್ಥಾನಕ್ಕೆ ಬಂದಿದೆ ಎಂದ ಡಿಸಿಎಂ, ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ತಡೆಗೆ ಅಗತ್ಯ ಸೌಕರ್ಯ ಕಲ್ಪಿಸಲಾಗಿದೆ ಎಂದರು.
ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್. ತೋಟಗಾರಿಕೆ ಹಾಗೂ ರೇಷ್ಮೆ ಸಚಿವರಾದ ಡಾ.ನಾರಾಯಣಗೌಡ, ಸಂಸದರಾದ ಬಿ.ಎನ್.ಬಚ್ಚೇಗೌಡ, ಎಸ್. ಮುನಿಸ್ವಾಮಿ, ಜಿಪಂ ಅಧ್ಯಕ್ಷ ಚಿಕ್ಕನರಸಿಂಹಯ್ಯ, ಜಿಲ್ಲಾಧಿಕಾರಿ ಆರ್.ಲತಾ, ಸಿಇಒ ಫೌಜಿಯಾ ತರುನ್ನುಮ್, ಎಸ್ಪಿ ಮಿಥುನ್ ಕುಮಾರ್, ಅಪರ ಜಿಲ್ಲಾಧಿಕಾರಿ ಆರತಿ, ಉಪ ವಿಭಾಗಾಧಿಕಾರಿ ರಘುನಂದನ್ ಉಪಸ್ಥಿತರಿದ್ದರು.
ವೆಂಟಿಲೇಟರ್ ಪೂರೈಕೆ : ರಾಜ್ಯದ ಪ್ರತಿ ಜಿಲ್ಲೆಗೆ 20 ರಿಂದ 25 ವೆಂಟಿ ಲೇಟರ್ ಒದಗಿಸಬೇಕೆಂಬುದು ಸರ್ಕಾರದ ಚಿಂತನೆ. ಮೊದಲ ಹಂತದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ 10 ವೆಂಟಿಲೇಟರ್ ಒಂದರೆಡು ದಿನದಲ್ಲಿ ಪೂರೈಸಲಾಗುವುದು. ಜಿಲ್ಲೆಯಲ್ಲಿ 10 ಕೋವಿಡ್ 19 ಸೋಂಕಿತರು ಪತ್ತೆಯಾಗಿದ್ದು ಒಬ್ಬರು ಮೃತ ಪಟ್ಟಿದ್ದು ಉಳಿದವರು ಚೇತರಿಸಿಕೊಳ್ಳುತ್ತಿದ್ದಾರೆಂದು ಅಶ್ವತ್ಥನಾರಾಯಣ ತಿಳಿಸಿದರು.