Advertisement

ಎಪಿಎಂಸಿ ಮಳಿಗೆ ಕಾಮಗಾರಿ ಕಳಪೆ

02:36 PM Nov 04, 2020 | Suhan S |

ನೆಲಮಂಗಲ: ದಾಸನಪುರ ತರಕಾರಿ ಮಾರುಕಟ್ಟೆ ಮಳಿಗೆಗಳು ಉದ್ಘಾಟನೆಗೂ ಮೊದಲೇ ಸಂಪೂರ್ಣ ಬಿರುಕು ಬಿಟ್ಟಿದ್ದು, ಕಳಪೆ ಕಾಮಗಾರಿ ಮಾಡಿ ಕೋಟ್ಯಂತರ ರೂಪಾಯಿ ಲೂಟಿ ಮಾಡಿದ್ದಾರೆ ಎಂದು ವರ್ತಕರು ಆರೋಪಿಸಿದ್ದಾರೆ.

Advertisement

ಬೆಂಗಳೂರಿನ ತರಕಾರಿ ಮಾರುಕಟ್ಟೆಯಿಂದ ಎದುರಾಗುತ್ತಿದ್ದ ಸಮಸ್ಯೆ ಬಗೆಹರಿಸಲು, ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಸಮೀಪದ 17 ಎಕರೆ ಪ್ರದೇಶದಲ್ಲಿ ಸುಮಾರು 80 ಕೋಟಿ ರೂ. ವೆಚ್ಚದಲ್ಲಿ 210 ವ್ಯಾಪಾರ ಮಳಿಗೆಗೆಳನ್ನು ನಿರ್ಮಾಣಮಾಡಲಾಗಿದ್ದು, ಕಾಮಗಾರಿ ಪೂರ್ಣಗೊಂಡು 6ತಿಂಗಳಾಗಿದೆ.

ಕೋವಿಡ್  ಕಾರಣಕ್ಕೆ ಯಶವಂತಪುರದ ತರಕಾರಿ ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ಈ ಮಾರುಕಟ್ಟೆಗೆ ಸ್ಥಳಾಂತರ ಮಾಡಲಾಗಿತ್ತು. ಆದರೆ, ಕೋಟ್ಯಂತರ ರೂಪಾಯಿ ಅನುದಾನದಲ್ಲಿ ನಿರ್ಮಾಣ ವಾದ ಮಾರುಕಟ್ಟೆ ಸಂಪೂರ್ಣ ಬಿರುಕು ಬಿಟ್ಟು, ಮಳೆಯ ನೀರು ಒಳಗೆ ಬರುವುದಲ್ಲದೆ, ಗೋಡೆ ಹಾಗೂ ಮೇಲ್ಚಾವಣಿ ಬೀಳುವ ಆತಂಕ ಎದುರಾಗಿದೆ.

ಮೂಲ ಸೌಕರ್ಯವಿಲ್ಲ: ಬೃಹತ್‌ ಮಾರುಕಟ್ಟೆಯಲ್ಲಿ ವರ್ತಕರು ಹಾಗೂ ರೈತರಿಗೆ ಅನುಕೂಲವಾಗಲು ಶುದ್ಧಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಸೌಕರ್ಯಗಳನ್ನು ಸಹ ನೀಡಿಲ್ಲ.

ಬಿರುಕು: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಬೃಹತ್‌ಯೋಜನೆಗಳಲ್ಲಿ ಒಂದಾದ ದಾಸನಪುರ ತರಕಾರಿ ಮಾರುಕಟ್ಟೆ ಮಳಿಗೆ ನಿರ್ಮಾಣಕ್ಕೆ 2018ರಲ್ಲಿ 47 ಕೋಟಿ ರೂ., ಮೂಲ ಸೌಕರ್ಯ, ಕಾಂಪೌಂಡ್‌ನಿರ್ಮಾಣಕ್ಕೆ 22 ಕೋಟಿ ರೂ. ಹಾಗೂ  ಇತರೆ ಕಾಮಗಾರಿಗಳಿಗೆ ಒಟ್ಟಾರೆ 80 ಕೋಟಿಗೂ ಹೆಚ್ಚು ಅನುದಾನಒದಗಿಸಲಾಗಿದೆ. ಆದರೆ, ಕಾಮಾಗಾರಿ ಪೂರ್ಣಗೊಂಡು ಕೇವಲ 6 ತಿಂಗಳಾಗಿದೆ. ಅಷ್ಟರಲ್ಲಿ 210 ಮಳಿಗೆಗಳು ಒಂದು ಇಂಚಿನಷ್ಟು ಬಿರುಕು ಬಿಟ್ಟಿವೆ.

Advertisement

ಹೊಸದಾಗಿ ನಿರ್ಮಿಸುವ ಅನಿವಾರ್ಯ: 210 ಮಳಿಗೆಗಳ ಗೋಡೆಗಳು ಒಂದು ಇಂಚಿನಷ್ಟು ಬಿರುಕು ಬಿಟ್ಟಿದ್ದು, ಅವುಗಳನ್ನು ದುರಸ್ತಿ ಮಾಡಿಸಲು ಅಧಿಕಾರಿಗಳು ಮುಂದಾಗಿದ್ದು, ದುರಸ್ತಿ ಮಾಡಿದರೂ, ಕುಸಿಯುವ ಆತಂಕವಿದೆ. ಎಲ್ಲಾ ಮಳಿಗೆಗಳು ಶಿಥೀಲವಾಗಿರುವುದರಿಂದ ತೆರವು ಮಾಡಿ ಹೊಸದಾಗಿ ನಿರ್ಮಾಣ ಮಾಡುವುದೇ ಅನಿವಾರ್ಯ ಎಂದು ವರ್ತಕರು ಒತ್ತಾಯ ಮಾಡಿದ್ದಾರೆ.

ಹಣ ವಸೂಲಿ: ಮಾರುಕಟ್ಟೆ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ 270 ವರ್ತಕರಿಗೆ ಟೆಂಡರ್‌ ಮೂಲಕ ಬಾಡಿಗೆಗೆ 20 ಸಾವಿರ ರೂ. ಹಾಗೂ ಸ್ವಂತಕ್ಕೆ 24 ಲಕ್ಷ ರೂ.ನಂತೆ ಮಳಿಗೆ ಪಡೆಯಲು ಆದೇಶಿಸಿ, ಈಗಾಗಲೇ 270 ವರ್ತಕರಲ್ಲಿ ಬಾಡಿಗೆದಾರರಿಂದ 40 ಸಾವಿರ ರೂ. ಹಾಗೂ ಸ್ವಂತಕ್ಕೆ ಪಡೆಯುವ ವರ್ತಕರಿಂದ 6 ಲಕ್ಷ ಮುಂಗಡ ಹಣ ವಸೂಲಿ ಮಾಡಲಾಗಿದೆ. ಆದರೆ ಮಳಿಗೆಗಳು ಬಿರುಕು ಬಿಟ್ಟಿರುವುದರಿಂದ ವರ್ತಕರು ಮಳಿಗೆಗೆ ಹೋಗಲು ಮುಂದಾಗಿಲ್ಲ ಎಂದು ಆರೋಪಿಸಲಾಗಿದೆ.

ದಾಸನಪುರ ಎಪಿಎಂಸಿ ಮಾರುಕಟ್ಟೆಗೆ 6 ತಿಂಗಳ ಹಿಂದೆ ಹೋಗಿದ್ದೆ, ಬಿರುಕು ಬಿಟ್ಟಿರುವ ವಿಚಾರ ನನಗೆ ಗೊತ್ತಿಲ್ಲ. ಮೂರ್‍ನಾಲ್ಕು ದಿನಗಳಲ್ಲಿ ಸ್ಥಳ ಪರಿಶೀಲನೆ ಮಾಡಿ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ. ಕರೀಗೌಡ, ಎಂಪಿಎಂಸಿ ವ್ಯವಸ್ಥಾಪಕ ನಿರ್ದೇಶಕ

ಸರ್ಕಾರದ ಮೇಲೆ ವಿಶ್ವಾಸವಿಟ್ಟು ಲಕ್ಷಾಂತರ ಹಣ ಹೂಡಿಕೆ ಮಾಡಲಾಗಿದೆ. ವ್ಯಾಪಾರದ ಮಳಿಗೆಗಳು ಕಳಪೆ ಕಾಮಗಾರಿಯಿಂದ ಸಂಪೂರ್ಣ ಬಿರುಕು ಬಿಟ್ಟು, ಬೀಳುವ ಹಂತ ತಲುಪಿವೆ. ಯಾವುದೇ ಮೂಲ ವ್ಯವಸ್ಥೆ ಇಲ್ಲ. ಹೊಸಮಳಿಗೆ ನಿರ್ಮಿಸಿ ಅಥವಾ ಹಣ ವಾಪಸ್‌ ನೀಡಿ, ಖಾಸಗಿಯಾಗಿ ಸ್ಥಳ ಖರೀದಿ ಮಾಡಿ ಮಾರುಕಟ್ಟೆ ನಿರ್ಮಾಣ ಮಾಡಿಕೊಳ್ಳುತ್ತೇವೆ. ಗೋವಿಂದಪ್ಪ, ಕೆಂಪೇಗೌಡ ವರ್ತಕರ ಮಾರುಕಟ್ಟೆ ಅಧ್ಯಕ್ಷ

 

ಕೋಟ್ರೇಶ್‌.ಆರ್‌

Advertisement

Udayavani is now on Telegram. Click here to join our channel and stay updated with the latest news.

Next