ಬಳ್ಳಾರಿ: ಜಿಲ್ಲೆಯ ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಮಾಜಿ ರಾಷ್ಟ್ರಪತಿ ದಿ| ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಹೆಸರಿನಲ್ಲಿ ತಾಂತ್ರಿಕ ಕೌಶಲ ತರಬೇತಿ ನೀಡುವ ಮೂಲಕ ಉದ್ಯೋಗ ಅವಕಾಶ ಕಲ್ಪಿಸಿಕೊಡುವ ಫೆಲೋಶಿಪ್ ಯೋಜನೆ ರೂಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ| ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಡಾ| ಎ.ಪಿ.ಜೆ.ಅಬ್ದುಲ್ ಕಲಾಂ ಅವರ 2ನೇ ಸಂಸ್ಮರಣಾ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಸರಳ ಕಾರ್ಯಕ್ರಮದಲ್ಲಿ ಅಬ್ದುಲ್ ಕಲಾಂ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉತ್ತಮ ಸರಾಸರಿ ಅಂಕ ಪಡೆದರೂ ಆರ್ಥಿಕ ಅಡಚಣೆಯಿಂದ ಭವಿಷ್ಯದ ಓದನ್ನು ಮೊಟಕುಗೊಳಿಸುವ ವಿದ್ಯಾರ್ಥಿಗಳಿಗಾಗಿ ಈ ಯೋಜನೆ ರೂಪಿಸಲಾಗಿದೆ. ಜಿಲ್ಲೆಯ ಇಂತಹ 50 ವಿದ್ಯಾರ್ಥಿಗಳಿಗೆ 2017-18ನೇ ಸಾಲಿನಲ್ಲಿ ಡಾ| ಅಬ್ದುಲ್ ಕಲಾಂ ಫೆಲೋಶಿಪ್ ನೀಡುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳನ್ನು ಫೆಲೋಶಿಪ್ ಗೆ ಆಯ್ಕೆ ಮಾಡಲು ಸರಳ ಪ್ರವೇಶ ಪರೀಕ್ಷೆ ನಡೆಸಲಾಗುವುದು. ಈ ಪರೀಕ್ಷೆಗೆ ಪಿಯು ವಿಜ್ಞಾನದಲ್ಲಿ ಕನಿಷ್ಠ ಶೇ.60 ಅಂಕ ಪಡೆದಿರಬೇಕು. ಪರೀಕ್ಷೆಯಲ್ಲಿ ಆಯ್ಕೆಯಾದ 50 ಜನ ವಿದ್ಯಾರ್ಥಿಗಳಿಗೆ ಖಾಸಗಿ ಸಹಭಾಗಿತ್ವದ ಕಂಪೆನಿಗಳಿಂದ ಒಂದು ವರ್ಷದ ಸಂವಹನ ಕೌಶಲ್ಯ, ತಾಂತ್ರಿಕ ಕೌಶಲ್ಯ ಹಾಗೂ ಉದ್ಯೋಗಾಧರಿತ ಕೌಶಲ್ಯಗಳನ್ನು ಹೇಳಿಕೊಡಲಾಗುವುದು. ಒಂದು ವರ್ಷದ ತರಬೇತಿಯ ನಂತರ ಆ ವಿದ್ಯಾರ್ಥಿಗಳಿಗೆ 4 ವರ್ಷಗಳ ಅವ ಧಿಯ ಔದ್ಯಮಿಕ ಬಿಎಸ್‌ಸಿ ಪದವಿ ನೀಡಲಾಗುವುದು. ಈ ವಿದ್ಯಾರ್ಥಿಗಳಿಗೆ ಆರಂಭಿಕ ವರ್ಷದಲ್ಲಿ ಮಾಸಿಕ 4,500 ರೂ. ಹಣಕಾಸು ನೆರವು ನೀಡಲಾಗುವುದು. ಆ ನಂತರ ಅವರು ಸೇರುವ ಕೆಲಸದ ಆಧಾರದಲ್ಲಿ ಅವರಿಗೆ ವೇತನವೂ ದೊರೆಯಲಿದೆ ಎಂದರು.
ಇದೊಂದು ವಿನೂತನ ಯೋಜನೆಯಾಗಿದ್ದು, ನಾನು ಕಾರವಾರ ಜಿಲ್ಲೆಯಲ್ಲಿ ಜಿಪಂ ಸಿಇಒ ಆಗಿದ್ದಾಗ ಫೆಲೋಶಿಪ್ ಆರಂಭಿಸಿದ್ದೆ. ಮೊದಲ ವರ್ಷದಲ್ಲಿ 50 ವಿದ್ಯಾರ್ಥಿಗಳು ಫೆಲೋಶಿಪ್ ಗೆ ಆಯ್ಕೆಯಾಗಿದ್ದರು. ಆದರೆ, ನಾನು ಬಳ್ಳಾರಿ ಡಿಸಿಯಾಗಿ ಆಗಮಿಸಿದ ಮೇಲೆ ಅಲ್ಲಿ ಫೆಲೋಶಿಪ್ ಮುಂದುವರೆದಿಲ್ಲ. ಈ ನ್ಯೂನತೆ ಗಮನಿಸಿ ಈ ಯೋಜನೆಯನ್ನು ಇಲ್ಲಿ ಕಾರ್ಯರೂಪಕ್ಕೆ ತರಲಾಗುತ್ತಿದೆ ಎಂದರು.
ಮುಂಬರುವ ದಿನಗಳಲ್ಲಿ ಜಿಲ್ಲೆ ಹಾಗೂ ರಾಜ್ಯದಲ್ಲಿ ಹೊಸ ರೀತಿಯ ತಾಂತ್ರಿಕ ಉದ್ಯಮಗಳು ತಲೆ ಎತ್ತಲಿವೆ. ಬಳ್ಳಾರಿಯಂತಹ ಖನಿಜಾಧಾರಿತ ಉದ್ಯಮಗಳಿರುವ ಜಿಲ್ಲೆಯಲ್ಲಿಯೂ ಆಧುನಿಕ ತಂತ್ರಜ್ಞಾನದ ಸೆಮಿ ಕಂಡಕ್ಟರ್ ಉದ್ಯಮ ಸ್ಥಾಪಿಸುವ ಸಾಧ್ಯತೆಗಳು ಅಪಾರವಾಗಿವೆ. ಈ ಫೆಲೋಶಿಪ್‌ನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಆರಂಭದಿಂದಲೇ ಅತ್ಯುನ್ನತ ಮಟ್ಟದ ತಾಂತ್ರಿಕ ಕೌಶಲ್ಯಗಳನ್ನು ನೀಡುವುದರಿಂದ ಅವರಿಗೆ ಉದ್ಯೋಗ ದೊರೆಯುವುದು ಶೇ.100 ಖಚಿತವಾಗಿದೆ. ಭವಿಷ್ಯದಲ್ಲಿ ಇವರು ಸ್ವಂತ ಉದ್ಯಮಗಳನ್ನು ಸ್ಥಾಪಿಸಿ ನೂರಾರು ಪ್ರತಿಭಾವಂತರಿಗೆ ಉದ್ಯೋಗ ನೀಡಬಹುದಾಗಿದೆ. ಒಟ್ಟಿನಲ್ಲಿ ಈ ಫೆಲೋಶಿಪ್ ಅಪಾರ ಸಾಧ್ಯತೆಗಳನ್ನು ಒಳಗೊಂಡಿದೆ ಎಂದು ತಿಳಿಸಿದರು.
ಹುಬ್ಬಳ್ಳಿಯ ಸಂಕಲ್ಪ ಸೆಮಿ ಕಂಡಕ್ಟರ್ ಸೆಂಟರ್, ಎಕ್ಲಾಸ್ ವಿಎಲ್‌ಎಸ್‌ಐ ಆರ್ ಅಂಡ್ ಡಿ ಸೆಂಟರ್, ದೇಶಪಾಂಡೆ ಫೌಂಡೇಷನ್, ಕೆಎಲ್‌ಇ ವಿಶ್ವವಿದ್ಯಾಲಯ ಸಹಯೋಗದಲ್ಲಿ ಈ ಫೆಲೋಶಿಪ್ ರೂಪಿಸಲಾಗಿದೆ. ಮೊದಲ ಮೂರು ಸಂಸ್ಥೆಗಳು ತಾಂತ್ರಿಕ ಕೌಶಲ್ಯ ನೀಡಿದರೆ, ಕೆಎಲ್‌ಇ ವಿವಿ ವಿದ್ಯಾರ್ಥಿಗಳಿಗೆ ಬಿಎಸ್‌ಸಿ ಪದವಿ ನೀಡಲಿದೆ. ಈ ಫೆಲೋಶಿಪ್‌ಗೆ ರಾಜ್ಯ ಅಥವಾ ಕೇಂದ್ರ ಸರ್ಕಾರಗಳ ಅನುದಾನ ಪಡೆಯುವುದಿಲ್ಲ. ಆದರೆ, ಜಿಲ್ಲಾಡಳಿತ ಪ್ರತಿಭಾವಂತ ವಿದ್ಯಾರ್ಥಿ ಹಾಗೂ ಉದ್ಯಮಗಳನ್ನು ಬೆಸೆಯುವ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಸಂಕಲ್ಪ ಸೆಮಿ ಕಂಡಕ್ಟರ್ ಸೆಂಟರ್‌ನ ಸಿಇಒ ವಿವೇಕ್ ಪವಾರ್, ಎಕ್ಲಾಸ್ ಕಂಪೆನಿಯ ಮುಖ್ಯಸ್ಥೆ ಪೂರ್ಣಿಮಾ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವಿ.ಶ್ರೀಧರನ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾಗರಾಜಪ್ಪ ಇದ್ದರು.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ
ವಿಶೇಷ ತಾಂತ್ರಿಕ ತರಬೇತಿ ಹಾಗೂ ಪದವಿ ಶಿಕ್ಷಣ ಪೂರೈಕೆಗಾಗಿ ಪ್ರವೇಶ ಪರೀಕ್ಷೆ ನಡೆಸಲು ಬಳ್ಳಾರಿ ಜಿಲ್ಲೆಯ ವಿದ್ಯಾರ್ಥಿಗಳಿಂದ ಜುಲೈ 28ರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 12 ಕೊನೆ ದಿನವಾಗಿದೆ. ಆಗಸ್ಟ್ 27ರಂದು ಲಿಖೀತ ಪರೀಕ್ಷೆ ನಡೆಯಲಿದೆ.