Advertisement

ಅಪೆಕ್ಸ್‌ ಬ್ಯಾಂಕ್‌ನೊಂದಿಗೆ ವಿಲೀನ ಸೂಕ್ತ

10:45 PM Apr 08, 2022 | Team Udayavani |

ಡಿಸಿಸಿ ಬ್ಯಾಂಕ್‌ ಗಳನ್ನು ಅಪೆಕ್ಸ್‌ ಬ್ಯಾಂಕ್‌ಗಳಲ್ಲಿ ವಿಲೀನಗೊಳಿಸಬೇಕೇ ಅಥವಾ ಬೇಡವೇ ಎಂಬ ಕುರಿತಾಗಿ ರಾಜ್ಯದಲ್ಲಿ ಚರ್ಚೆಗಳು ನಡೆಯುತ್ತಿವೆ. ವಿಲೀನದಿಂದ ಅನುಕೂಲ ಹೆಚ್ಚು ಎಂದು ರಾಜ್ಯ ಸರಕಾರ ಪ್ರತಿಪಾದಿಸಿದರೆ ಸಹಕಾರಿ ಮಹಾಮಂಡಲದ ಅಧ್ಯಕ್ಷರು, ವಿಲೀನ ಬೇಡವೇ ಬೇಡ ಎಂದು ಹೇಳುತ್ತಿದ್ದಾರೆ. ಹಾಗಾದರೆ ವಿಲೀನದಿಂದಾಗುವ ಲಾಭ -ನಷ್ಟಗಳ ಬಗ್ಗೆ ಒಂದು ವಾದ-ಪ್ರತಿವಾದ.

Advertisement

ರೈತ ಗ್ರಾಹಕರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುವಂತಾಗಲು ಹಾಗೂ ವೆಚ್ಚ ಕಡಿತ ಮತ್ತಿತರ ಕಾರಣಗಳಿಂದ ಡಿಸಿಸಿ ಬ್ಯಾಂಕ್‌ಗಳನ್ನು ಅಪೆಕ್ಸ್‌ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸುವುದು ಸೂಕ್ತ.

ರಾಜ್ಯದಲ್ಲಿ ಎಲ್ಲ 21 ಡಿಸಿಸಿ ಬ್ಯಾಂಕ್‌ಗಳನ್ನು ಅಪೆಕ್ಸ್‌ ಬ್ಯಾಂಕ್‌ಗಳೊಂದಿಗೆ ವಿಲೀನಗೊಳಿಸುವ ಅಗತ್ಯವಿದೆ. 21 ಜಿಲ್ಲಾ ಸಹಕಾರ ಬ್ಯಾಂಕ್‌ಗಳು ಪೈಕಿ ಬೆಳಗಾವಿ ಮತ್ತು ಮೈಸೂರು ಪ್ರಾಂತ್ಯದ ಡಿಸಿಸಿ ಬ್ಯಾಂಕ್‌ಗಳು ಮಾತ್ರ ಹೆಚ್ಚಿನ ಠೇವಣಿ ಹೊಂದಿದ್ದು, ಬೆಂಗಳೂರು ಮತ್ತು ಕಲಬುರಗಿ ಪ್ರಾಂತದ ಡಿಸಿಸಿ ಬ್ಯಾಂಕ್‌ಗಳು ಹೆಚ್ಚಿನ ಠೇವಣಿಯನ್ನು ಸಂಗ್ರಹಿಸಲು ಗ್ರಾಹಕರಲ್ಲಿ ಹೆಚ್ಚಿನ ವಿಶ್ವಾಸವನ್ನು ಹೊಂದಿರುವುದಿಲ್ಲ. ಹೆಚ್ಚಿನ ಠೇವಣಿ ಹೊಂದಿರುವ ಬ್ಯಾಂಕ್‌ಗಳು ಸಹ ಗ್ರಾಹಕರಿಗೆ ಠೇವಣಿಗಳ ಮೇಲೆ ಹೆಚ್ಚಿನ ದರದ ಬಡ್ಡಿಯನ್ನು ನೀಡುತ್ತಿದ್ದು, ಈ ಬಡ್ಡಿ ದರಗಳು ವಾಣಿಜ್ಯ ಬ್ಯಾಂಕ್‌ಗಳ ಬಡ್ಡಿ ದರಗಳಿಗಿಂತ ತೀರಾ ಹೆಚ್ಚಿನದ್ದಾಗಿರುತ್ತದೆ.

ಡಿಸಿಸಿ ಬ್ಯಾಂಕ್‌ಗಳು ಅಪೆಕ್ಸ್‌ ಬ್ಯಾಂಕ್‌ನೊಂದಿಗೆ ವಿಲೀನಗೊಳ್ಳುವುದರಿಂದ ಗ್ರಾಹಕರಲ್ಲಿ ಹೆಚ್ಚಿನ ವಿಶ್ವಾಸ ಮೂಡಲಿದ್ದು ಒಂದೇ ಬಗೆಯ ಬಡ್ಡಿದರಗಳನ್ನು ನಿಗದಿಪಡಿಸುವುದರಿಂದ ಬ್ಯಾಂಕ್‌ನ ಠೇವಣಿ ಮೂಲದ ಬಂಡವಾಳ ಮತ್ತು ಆದಾಯ ಸಹ ಉತ್ತಮ ಪಡಿಸಬಹುದಾಗಿದೆ.

ಮೂರು ಹಂತದ ಸಂಸ್ಥೆಗಳು ಶೇ.50ರಷ್ಟು ಬಂಡವಾಳವನ್ನು ಪ್ಯಾಕ್ಸ್‌ಗಳಲ್ಲಿನ ರೈತ ಗ್ರಾಹಕರಿಗೆ ಕೃಷಿ ಉದ್ದೇಶಕ್ಕಾಗಿ ನೀಡುತ್ತಿರುತ್ತವೆ. ನಬಾರ್ಡ್‌ ಸಂಸ್ಥೆಯು ಶೆಡ್ನೂಲ್ಡ್‌ ಬ್ಯಾಂಕ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ಅಪೆಕ್ಸ್‌ ಬ್ಯಾಂಕ್‌ಗೆ ಮಾತ್ರ ಸಾಲಗಳ ಮೇಲೆ ರೀ ಫೈನಾನ್ಸಿಂಗ್‌ ನೀಡುತ್ತಿದ್ದು ಅಪೆಕ್ಸ್‌ ಬ್ಯಾಂಕ್‌ ಶೇ.0.50ರ ಮಾರ್ಜಿನ್‌, ಡಿಸಿಸಿ ಬ್ಯಾಂಕ್‌ಗಳಿಗೆ ಶೇ.1.75 ಮತ್ತು ಪ್ಯಾಕ್ಸ್‌ಗಳಿಗೆ ಶೇ.2. ಮಾರ್ಜಿನ್‌ ನೀಡಬೇಕಾಗಿರುವು­ದರಿಂದ ಮೂರು ಹಂತದ ಸಹಕಾರ ಸಂಸ್ಥೆಗಳ ವೆಚ್ಚ ಶೇ.4.25ರಷ್ಟಿದ್ದು ಇದು ವಾಣಿಜ್ಯ ಬ್ಯಾಂಕ್‌ಗೆ ಹೋಲಿಸಿದಲ್ಲಿ ಹೆಚ್ಚಾಗಿರುತ್ತದೆ.
ಅಲ್ಪಾವಧಿ ಕೃಷಿ ಸಾಲದ ಬಡ್ಡಿ ಸಹಾಯ ಧನದ ನಿಯೋಜನೆಯಲ್ಲಿ ಕೇಂದ್ರ ಸರಕಾರದಿಂದ ನಿವ್ವಳ ಶೇ.4ರಷ್ಟು ಬಡ್ಡಿ ದರದಲ್ಲಿ ಸಾಲ ದೊರೆಯಲು ತಿಳಿಸಿ ಶೇ.5ರ (ಬ್ಯಾಂಕ್‌ಗಳಿಗೆ ಶೇ.2ರ ಬಡ್ಡಿ ಸಬ್‌ ವೆಷÕನ್‌ ಮತ್ತು ರೈತರಿಗೆ ರೈತರಿಗೆ ಶೇ.3ರ ಬಡ್ಡಿ ಪ್ರೋತ್ಸಾಹ ಧನ) ಬಡ್ಡಿ ಸಹಾಯಧನವನ್ನು ನೀಡುತ್ತಿದೆ. ರಾಜ್ಯ ಸರಕಾರ ಶೂನ್ಯ ಬಡ್ಡಿ ದರಕ್ಕೆ ಇಳಿಸಿರುವುದರಿಂದ ರಾಜ್ಯ ಸರಕಾರ ಶೇ.4ರ ಬಡ್ಡಿ ಸಹಾಯಧನವನ್ನು ಮಾತ್ರ ನೀಡಬೇಕಾಗಿತ್ತು. ಆದರೆ ಮೂರು ಹಂತದ ಸಹಕಾರ ಸಂಸ್ಥೆಗಳ ವ್ಯವಹಾರ ವೆಚ್ಚವನ್ನು ಸರಿದೂಗಿಸಲು ಶೇ.5.6ರ ಬಡ್ಡಿ ಸಹಾಯ ಧನವನ್ನು ನೀಡುತ್ತಿದ್ದು ಶೇ.1.60ರ ಹೆಚ್ಚಿನ ಹೊರೆ ಬೀಳುತ್ತಿದೆ. ವಿಲೀನಗೊಳಿ­ಸುವುದರಿಂದ ಸರಕಾರ ಹೊರೆಯನ್ನು ಕಡಿಮೆ ಮಾಡಬಹುದಾಗಿದೆ.

Advertisement

ಪ್ರತೀ ಒಂದು ಜಿಲ್ಲೆ ಅಥವಾ ಹೆಚ್ಚಿನ ಜಿಲ್ಲೆಗಳಿಗೆ ಡಿಸಿಸಿ ಬ್ಯಾಂಕ್‌ಗಳು ಇದ್ದು ಪ್ರತೀ ಬ್ಯಾಂಕ್‌ಗೆ ಒಂದು ಕೇಂದ್ರ ಕಚೇರಿಯನ್ನು ಹೊಂದಿದ್ದು ಕೋರ್‌ ಬ್ಯಾಂಕಿಂಗ್‌ ಹೊಂದಿದ್ದರೂ ಸಹ ಕೇಂದ್ರ ಕಚೇರಿಯಲ್ಲಿ ಒಟ್ಟಾರೆ ಸಿಬಂದಿ ಶೇ.15ರಷ್ಟು ಆಡಳಿತ ಮಂಡಳಿ, ಅಧಿಕಾರಿ ವರ್ಗ ಕಾರ್ಯ ನಿರ್ವಹಿಸುತ್ತಿದ್ದು, ಈ ಎಲ್ಲ ವೆಚ್ಚಗಳನ್ನು ಕಡಿಮೆ ಮಾಡಬಹುದಾಗಿದೆ. ಅಪೆಕ್ಸ್‌ ಬ್ಯಾಂಕ್‌ನ ಮಾರ್ಜಿನ್‌ ಶೇ.0.50 ಕಡಿಮೆ ಮಾಡಿ ಒಟ್ಟಾರೆ ಶೇ.1ರಷ್ಟು ವ್ಯವಹಾರ ವೆಚ್ಚವನ್ನು ವಿಲೀನಗೊಳಿಸುವುದರಿಂದ ಕಡಿಮೆ ಮಾಡಬಹುದಾಗಿದೆ. ಜತೆಗೆ ಇದರಿಂದ ಗ್ರಾಹಕರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ದೊರೆಯಲು ಸಾಧ್ಯವಾಗುತ್ತದೆ.

ಒಂದು ಬ್ಯಾಂಕ್‌ನ ಸಾಲ ವಸೂಲಾತಿ ಕಡಿಮೆ ಆಗಿ ಸಿಆರ್‌ಎಆರ್‌ ಪ್ರಮಾಣ ಶೇ.9ಕ್ಕಿಂತ ಕಡಿಮೆ ಆದಲ್ಲಿ ನಬಾರ್ಡ್‌ ರೀ ಫೈನಾನ್ಸಿಂಗ್‌ಗೆ ಅರ್ಜಿ ಸಲ್ಲಿಸಲಿದ್ದು ಇದರಿಂದ ಜಿಲ್ಲೆಯ ರೈತರಿಗೆ ಸಮರ್ಪಕ ಸಾಲ ವಿತರಿಸಲು ಸಾಧ್ಯವಾಗುತ್ತಿಲ್ಲ. ವಿಲೀನಗೊಳ್ಳುವುದರಿಂದ ಇತರ ಜಿಲ್ಲೆಯ ವಸೂಲಾತಿ ಪ್ರಮಾಣ ಉತ್ತಮವಿದ್ದಲ್ಲಿ ಇಂತಹ ಸಂದರ್ಭ ಉದ್ಭವಿಸುವುದಿಲ್ಲ.

ಪ್ರತಿಯೊಂದು ಜಿಲ್ಲಾ ಸಹಕಾರ ಬ್ಯಾಂಕ್‌ಗಳು ಗ್ರಾಹಕರಿಗೆ ಬ್ಯಾಂಕಿಂಗ್‌ ಸೇವೆ ಮತ್ತು ಡಿಜಿಟಲ್‌ ಸೇವೆಯನ್ನು ಒದಗಿಸಲು ಎನ್‌ಸಿಪಿಐಗೆ ಮತ್ತು ಇತರ ಸಂಸ್ಥೆಗಳಿಗೆ ಪ್ರತ್ಯೇಕವಾಗಿ ಸದಸ್ಯತ್ವ ಪಡೆಯಬೇಕಿದ್ದು ಇದರ ಬದಲಾಗಿ ಇತರ ವಾಣಿಜ್ಯ ಬ್ಯಾಂಕ್‌ನ ಸಬ್‌ ಏಜೆಂಟ್‌ ಆಗಿ ನೊಂದಣಿ ಮಾಡಿಕೊಂಡಿದ್ದು ಪ್ರತೀ ಶಾಖೆಗಳಿಗೂ ( ಬಳ್ಳಾರಿ ಹೊರತು ಪಡಿಸಿ) ಪ್ರತ್ಯೇಕವಾಗಿ ಐಎಫ್ಎಸ್‌ಸಿ ಕೋಡ್‌ಗಳನ್ನು ಪಡೆಯಲು ಸಾಧ್ಯವಾಗಿರುವುದಿಲ್ಲ. ಇದರಿಂದ ಗ್ರಾಹಕರ ಖಾತೆಗೆ ತ್ವರಿತವಾಗಿ ಹಣ ವರ್ಗಾವಣೆ ಮಾಡಲು ಸಾಧ್ಯವಾಗುತ್ತಿಲ್ಲ. ಎಲ್ಲ ಡಿಸಿಸಿ ಬ್ಯಾಂಕ್‌ಗಳನ್ನು ವಿಲೀನಗೊಳಿಸುವುದರಿಂದ ಉನ್ನತ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಗ್ರಾಹಕರಿಗೆ ಉತ್ತಮ ಸೇವೆಯನ್ನು ತ್ವರಿತವಾಗಿ ಒದಗಿಸಲು ಸಹಾಯವಾಗುತ್ತದೆ.

ಆಡಳಿತ ಮಂಡಳಿಗಳು ನೀತಿ ರೂಪಿಸುವ ಬದಲಿಗೆ ಬ್ಯಾಂಕ್‌ನ ದೈನಂದಿನ ವ್ಯವಹಾರದಲ್ಲಿ ಆಡಳಿತ ಮಂಡಳಿ ಸದಸ್ಯರ ಪಾತ್ರ ಮತ್ತು ಅಧಿಕಾರ ಹೆಚ್ಚಾಗಿದ್ದು, ಪ್ರತೀ ಸಾಲದ ಮಂಜೂರಾತಿಗಾಗಿ ತಮ್ಮ ಒಪ್ಪಿಗೆಯನ್ನು ಪಡೆಯಬೇಕಿರುತ್ತದೆ. ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲವನ್ನು ಮಂಡಳಿ ಸದಸ್ಯರ ಒಪ್ಪಿಗೆ ಪಡೆದೇ ಸಾಲ ವಿತರಿಸಬೇಕಾಗಿರುವುದರಿಂದ ಹೆಚ್ಚಿನ ಪ್ರಭಾವ ಇರುವ ಸದಸ್ಯರಿಗೆ ಮಾತ್ರ ಸಾಲ ದೊರೆಯುತ್ತಿದೆ. ರೈತರಿಗೆ ಸಾಲ ನೀಡಲು ಪ್ಯಾಕ್ಸ್‌ಗಳು ರೈತರಿಂದ ದಾಖಲೆ ಪಡೆದು ಎನ್‌ಸಿಎಲ್‌ ಮಿತಿಗೊಳಿಸಲಿ. ಒಂದು ಬಾರಿ ಅರ್ಜಿ ಮತ್ತು ಸಾಲದ ಮಿತಿ ನಿಗದಿಪಡಿಸಲು ಒಂದು ಪ್ರತ್ಯೇಕ ಅರ್ಜಿಯನ್ನು ಡಿಸಿಸಿ ಬ್ಯಾಂಕ್‌ಗಳು ಶಾಖೆಗಳ ಮೂಲಕ ಕೇಂದ್ರ ಕಚೇರಿಗೆ ಸಲ್ಲಿಸಿ ಕೇಂದ್ರ ಕಚೇರಿಯ ಆಡಳಿತ ಮಂಡಳಿ ಸಭೆಯಲ್ಲಿ ಅನುಮೋದನೆ ದೊರೆತ ಅನಂತರವೇ ಸಾಲ ವಿತರಿಸುವ ಪದ್ಧತಿಯನ್ನು ಅನುಸರಿಸುತ್ತಿದ್ದು, ಇದರಿಂದ ರೈತರಿಗೆ ಸಕಾಲದಲ್ಲಿ ಸಾಲ ಸಿಗುತ್ತಿಲ್ಲ. ಅವುಗಳನ್ನು ವಿಲೀನಗೊಳಿಸುವುದರಿಂದ ಒಂದೇ ಬಗೆಯ ಸಾಲದ ನೀತಿಯನ್ನು ರೂಪಿಸಿ ಅಧಿಕಾರವನ್ನು ಶಾಖೆಗಳಿಗೆ ನೀಡುವುದರಿಂದ ರೈತರಿಗೆ ಮತ್ತು ಇತರ ಗ್ರಾಹಕರಿಗೆ ಸಕಾಲದಲ್ಲಿ ಸಾಲ ನೀಡಲು ಸಹಾಯವಾಗುತ್ತದೆ.

– ಎಸ್‌.ಟಿ. ಸೋಮಶೇಖರ್‌, ಸಹಕಾರ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next