Advertisement

ಸ್ಪರ್ಧೆಗೆ ಉದಾಸೀನ: ರಂಗೇರಿದ ಹಾವೇರಿ ಲೋಕಸಭಾ ಕಣ

06:22 PM Aug 03, 2023 | Team Udayavani |

ಹಾವೇರಿ:ಲೋಕಸಭಾ ಚುನಾವಣೆಗೆ ಇನ್ನೂ ಒಂಬತ್ತು ತಿಂಗಳು ಬಾಕಿಯಿರುವಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಹಾಲಿ ಸಂಸದ ಶಿವಕುಮಾರ ಉದಾಸಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಣೆ ಮಾಡಿದ್ದರಿಂದ ಹಾವೇರಿ ಕ್ಷೇತ್ರದತ್ತ ಹಲವು ಆಕಾಂಕ್ಷಿಗಳು ಆಸಕ್ತಿ ತೋರುತ್ತಿದ್ದು, ಈಗಿನಿಂದಲೇ ಚುನಾವಣೆ ತಯಾರಿಗೆ ಮುಂದಾಗಿದ್ದಾರೆ.

Advertisement

ಹಾವೇರಿ-ಗದಗ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಿವಕುಮಾರ ಉದಾಸಿ ಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಬಹಿರಂಗವಾಗಿಯೇ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದೆ. ಹಾವೇರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ಸಂಸದ ಶಿವಕುಮಾರ ಉದಾಸಿ ಕಳೆದ ಒಂದು ವರ್ಷದಿಂದಲೇ ಚುನಾವಣಾ ರಾಜಕೀಯದ ಬಗ್ಗೆ ನಿರಾಸಕ್ತಿ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಇದನ್ನು ಅವರು ಅನೇಕರ ಬಳಿ
ಸ್ಪಷ್ಟಪಡಿಸಿರುವುದರಿಂದ ಹಲವರು ಕ್ಷೇತ್ರದತ್ತ ಕಣ್ಣು ನೆಟ್ಟಿದ್ದಾರೆ. 2024ರ ಏಪ್ರಿಲ್‌ನಲ್ಲಿ ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಈಗಿನಿಂದಲೇ ಹಲವರು ಆಸಕ್ತಿ ತೋರುತ್ತಿದ್ದಾರೆ. ಅಲ್ಲದೇ, ತಾವೂ ಆಕಾಂಕ್ಷಿಗಳೆಂದು ಹೇಳಿಕೊಂಡು
ಕ್ಷೇತ್ರದಲ್ಲಿ ಸಂಚಾರ ಆರಂಭಿಸಿದ್ದಾರೆ.

ಆಕಾಂಕ್ಷಿಗಳು ಯಾರ್ಯಾರು?: ವಿಧಾನಸಭೆ ಚುನಾವಣೆ ಮುಗಿಯುತ್ತಲೇ ಮುಂಬರುವ ಲೋಕಸಭೆ ಚುನಾವಣೆಯತ್ತ ಹಾವೇರಿ ಹಾಗೂ ಗದಗ ಜಿಲ್ಲೆಯ ಅನೇಕರು ಚಿತ್ತ ನೆಟ್ಟಿದ್ದಾರೆ. ಮಾಜಿ ಸಚಿವ ಬಿ.ಸಿ.ಪಾಟೀಲ, ಕೆ.ಎಸ್‌.ಈಶ್ವರಪ್ಪ ಅವರ ಪುತ್ರ ಕಾಂತೇಶ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ಧರಾಜ ಕಲಕೋಟಿ, ಹಾವೇರಿಯ ಮಂಜುನಾಥ ಮಡಿವಾಳರ, ಹಿರೇಕೆರೂರಿನ ಪಾಲಾಕ್ಷ ಗೌಡ ಪಾಟೀಲ, ರಾಣಿಬೆನ್ನೂರಿನ ಕೆ.ಶಿವಲಿಂಗಪ್ಪ, ಪವನಕುಮಾರ ಮಲ್ಲಾಡದ, ಬ್ಯಾಡಗಿಯ ಮುರುಗೆಪ್ಪ ಶೆಟ್ಟರ್‌, ಗದಗ ಜಿಲ್ಲೆಯ ಅನಿಲ ಮೆಣಸಿನಕಾಯಿ, ಡಾ|ಶೇಖರ ಸಜ್ಜನರ ಹೀಗೆ ಅನೇಕರ ಹೆಸರು ಕೇಳಿಬರುತ್ತಿದೆ.

ಉದಾಸಿ ಕಣದಿಂದ ಹಿಂದೆ ಸರಿದಿದ್ದೇಕೆ?: ಹಾವೇರಿ ಜಿಲ್ಲೆಯ 5 ಹಾಗೂ ಗದಗ ಜಿಲ್ಲೆಯ ಮೂರು ಸೇರಿದಂತೆ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಹಾವೇರಿ ಲೋಕಸಭಾ ಕ್ಷೇತ್ರದಿಂದ ಶಿವಕುಮಾರ ಉದಾಸಿ 2009ರಿಂದ ಸತತ ಮೂರು ಬಾರಿ ಗೆದ್ದಿದ್ದಾರೆ. 2009 ಮತ್ತು 2014ರಲ್ಲಿ ಕಾಂಗ್ರೆಸ್‌ನ ಸಲೀಂ ಅಹ್ಮದ್‌ ವಿರುದ್ಧ ಗೆದ್ದರೆ, 2019ರಲ್ಲಿ ಗದಗಿನ ಡಿ.ಆರ್‌.ಪಾಟೀಲ ವಿರುದ್ಧ ಗೆಲುವು ಸಾಧಿಸಿದ್ದಾರೆ. ಮುಂದಿನ ದಿನಗಳಲ್ಲಿ ತಮ್ಮ ಸಂಸ್ಥೆ, ಉದ್ದಿಮೆಯ ವ್ಯವಹಾರದಲ್ಲಿ ಶಿವಕುಮಾರ ಉದಾಸಿ ತಮ್ಮನ್ನು
ತೊಡಗಿಸಿಕೊಳ್ಳಲು ಉದ್ದೇಶಿಸಿದ್ದಾರೆ. ಅದಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ವತಃ ಅವರೇ ಸ್ಪಷ್ಟಪಡಿಸಿದ್ದಾರೆ.

ಈಶ್ವರಪ್ಪ ಪುತ್ರ ಕಾಂತೇಶ ಹಾವೇರಿ ಕ್ಷೇತ್ರದ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲೂ ಟಿಕೆಟ್‌ ಸಿಕ್ಕಿರಲಿಲ್ಲ. ಇನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಬಿ.ವೈ. ರಾಘವೇಂದ್ರ ಪ್ರತಿನಿಧಿ ಸುತ್ತಿರುವುದರಿಂದ ಅಲ್ಲಿ ಪೈಪೋಟಿ ನಡೆಸುವುದು ಸಾಧ್ಯವಿಲ್ಲ ಎಂಬುದನ್ನು ಅರಿತು ಈಶ್ವರಪ್ಪ ಅವರು ತಮ್ಮ ಪುತ್ರನನ್ನು ಹಾವೇರಿ ಕ್ಷೇತ್ರದತ್ತ ವಲಸೆ ಕಳಿಸಲು ಮುಂದಾಗಿದ್ದಾರೆ. ಆದರೆ, ಕಾಂತೇಶ ಆಗಮನಕ್ಕೆ ಜಿಲ್ಲೆಯ ಬಿಜೆಪಿ ಮುಖಂಡರಲ್ಲೇ ಅಪಸ್ವರ ಕೇಳಿಬರುತ್ತಿದೆ.

Advertisement

ಸ್ಪರ್ಧೆಗೆ ಹೆಚ್ಚುತ್ತಿರುವ ಆಕಾಂಕ್ಷಿಗಳ ಸಂಖ್ಯೆ
ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಹಿನ್ನಡೆಯಾದರೂ ಬಿಜೆಪಿಯಿಂದ ಸ್ಪ ರ್ಧಿಸಲು ಅನೇಕರು ಆಸಕ್ತಿ ತೋರುತ್ತಿದ್ದಾರೆ. ಪ್ರಧಾನಿ ಮೋದಿ ಜನಪ್ರಿಯತೆಯಿಂದಾಗಿ ಗೆಲುವು ಸುಲಭ ಎಂಬ ಲೆಕ್ಕಾಚಾರ ಆಕಾಂಕ್ಷಿಗಳದ್ದಾಗಿದೆ. ಆದ್ದರಿಂದ ದಿನದಿಂದ ದಿನಕ್ಕೆ ಬಿಜೆಪಿಯಿಂದ ಸ್ಪರ್ಧಿಸಲು ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದೆ. ಕೆಲವರಂತೂ ಈಗಿನಿಂದಲೇ ಮಠ-ಮಾನ್ಯಗಳಿಗೆ ತೆರಳಿ ಸ್ವಾಮೀಜಿಗಳನ್ನು ಭೇಟಿ ಮಾಡುತ್ತಿದ್ದರೆ, ಇನ್ನು ಕೆಲವರು ಪಕ್ಷದ ನಾಯಕರೊಂದಿಗೆ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮನ್ನು ಲೋಕಸಭಾ ಚುನಾವಣೆಯ ಆಕಾಂಕ್ಷಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ತಮ್ಮ ಮಟ್ಟದಲ್ಲಿ ಪ್ರಯತ್ನ ಮುಂದುವರಿಸಿದ್ದಾರೆ.

ಎರಡು ವರ್ಷಗಳ ಹಿಂದೆಯೇ ನಾನು ನನ್ನ ನಿರ್ಧಾರದ ಬಗ್ಗೆ ಸ್ಪಷ್ಟತೆ ಹೊಂದಿದ್ದೇನೆ. ವೈಯಕ್ತಿಕ ವ್ಯವಹಾರದಲ್ಲಿ ತೊಡಗಿಕೊಳ್ಳುವುದು ಅನಿವಾರ್ಯ ಆಗಿರುವುದರಿಂದ ಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪ ರ್ಧಿಸುವುದಿಲ್ಲ ಎಂಬುದನ್ನು ಪಕ್ಷದ ಹಿರಿಯರಿಗೂ ತಿಳಿಸಿದ್ದೇನೆ. ಯಾರೇ ನಿಂತರೂ ಅವರ ಪರವಾಗಿ ಪ್ರಚಾರ ಮಾಡುತ್ತೇನೆ.
ಶಿವಕುಮಾರ ಉದಾಸಿ, ಸಂಸದರು

*ವೀರೇಶ ಮಡ್ಲೂರ

Advertisement

Udayavani is now on Telegram. Click here to join our channel and stay updated with the latest news.

Next