ನ್ಯೂಯಾರ್ಕ್ : ನ್ಯೂಯಾರ್ಕ್‌ನಲ್ಲಿ ಕಳೆದ ಒಂದು ದಶಕದಲ್ಲೇ ಸಂಭವಿಸಿರುವ ಅತ್ಯಂತ ಭೀಕರ ಅಗ್ನಿ ದುರಂತದ ಘಟನೆಯಾಗಿ ಬ್ರಾಂಕ್ಸ್ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ಗುರುವಾರ ರಾತ್ರಿ ಸಂಭವಿಸಿರುವ ಬೆಂಕಿ ಅವಘಡದಲ್ಲಿ 12 ಮಂದಿ ಮೃತಪಟ್ಟಿದ್ದಾರೆ. ತೀವ್ರ ಸುಟ್ಟ ಗಾಯಗಳಿಗೆ ಗುರಿಯಾಗಿರುವ ನಾಲ್ವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ರಾಂಕ್ಸ್ ಝೂ ಎದುರುಗಡೆ ಇರುವ 25 ಅಪಾರ್ಟ್‌ಮೆಂಟ್‌ಗಳಿರುವ ಐದು ಅಂತಸ್ತುಗಳ ಬ್ರಾಂಕ್ಸ್ ಅಪಾರ್ಟ್‌ಮೆಂಟಿನಲ್ಲಿ ಸ್ಥಳೀಯ ಕಾಲಮಾನ ರಾತ್ರಿ 7 ಗಂಟೆಯ ಹೊತ್ತಿಗೆ ಅಗ್ನಿ ದುರಂತ ಸಂಭವಿಸಿತು. ಬ್ರಾಂಕ್ಸ್ ಝೂ ನ್ಯೂಯಾರ್ಕ್ ಮಹಾನಗರದ ಅತ್ಯಂತ ಪ್ರಸಿದ್ಧ ಪ್ರವಾಸೀ ತಾಣವಾಗಿದೆ.
ಅಗ್ನಿ ದುರಂತದಲ್ಲಿ ಸುಟ್ಟು ಕರಕಲಾಗಿರುವ 12 ಮಂದಿಯಲ್ಲಿ ಒಂದು ವರ್ಷದ ಹಸುಳೆ ಕೂಡ ಸೇರಿದೆ. ಶೂನ್ಯಕ್ಕಿಂತ ಕೆಳಗಿನ ತಾಪಮಾನದಲ್ಲಿ ನಡುಗುವ ಚಳಿಯಲ್ಲಿ ಕಟ್ಟಡದಿಂದ ಹೊರ ಧಾವಿಸಿ ಬಂದವರಿಗೆ ಬ್ಲಾಂಕೆಟ್‌ಗಳನ್ನು ಕೊಟ್ಟು ಅವರನ್ನು ಸಮೀಪದ ಶಾಲೆಯಲ್ಲಿನ ತಾತ್ಕಾಲಿಕ ಆಸರೆ ತಾಣಕ್ಕೆ ಕಳುಹಿಸುವ ಕೆಲಸದಲ್ಲಿ ರೆಡ್ ಕ್ರಾಸ್ ಕಾರ್ಯಕರ್ತರು ನಿರತರಾಗಿರುವ ದೃಶ್ಯ ಕಂಡು ಬಂದಿದೆ.
ಮೊದಲು ಒಂದನೇ ಅಂತಸ್ತಿನಲ್ಲಿ ಕಾಣಿಸಿಕೊಂಡ ಬೆಂಕಿ ನೋಡ ನೋಡುತ್ತಿದ್ದಂತೆಯೇ ಎಲ್ಲ ಐದು ಮಹಡಿಗಳಿಗೂ ಹಬ್ಬಿತು. ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದು ಈ ತನಕವೂ ಗೊತ್ತಾಗಿಲ್ಲ.
ಸಮರೋಪಾದಿಯ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಅಗ್ನಿ ಶಾಮಕ ದಳದ ಸಿಬಂದಿಗಳು ಬೆಂಕಿ ಹೊತ್ತಿಕೊಂಡ ಕಟ್ಟಡದಲ್ಲಿ ಸಿಲುಕಿಕೊಂಡವರನ್ನು ಪಾರುಗೊಳಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಕನಿಷ್ಠ 12 ಮಂದಿಯನ್ನು ಅವರು ರಕ್ಷಿಸಿ ಕಟ್ಟಡದಿಂದ ಹೊರ ತಂದಿದ್ದಾರೆ.
ನ್ಯೂಯಾರ್ಕ್ ನಗರದಲ್ಲಿ ಕಳೆದ ಎರಡೇ ವಾರಗಳಲ್ಲಿ ಸಂಭವಿಸಿರುವ ಎರಡನೇ ಅಗ್ನಿ ದುರಂತ ಇದಾಗಿದೆ. ಕಳೆದ ಡಿ.18ರಂದು ಬ್ಲೂಕ್ಲಿನ್‌ನ ಶೀಪ್‌ಶೆಡ್ ಬೇ ನಲ್ಲಿ ಸಂಭವಿಸಿದ್ದ ಅಗ್ನಿ ದುರಂತದಲ್ಲಿ ತಾಯಿ ಮತ್ತು ಆಕೆಯ 3 ವರ್ಷದ ಮಗು ಮೃತಪಟ್ಟಿತ್ತು.