ರೈಲ್ವೆ ಸೌಲಭ್ಯಕ್ಕೆ ಸಂಬಂಧಿಸಿದಂತೆ ಮಂಗಳೂರಿಗೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂಬ ದೂರು ಇಂದು ನಿನ್ನೆಯದ್ದಲ್ಲ. ಮಂಗಳೂರೆಂದಲ್ಲ, ರಾಜ್ಯದಿಂದ ಎಂಟು ಮಂದಿ ರೈಲ್ವೆ ಸಚಿವರಾಗಿದ್ದರೂ ಕರ್ನಾಟಕಕ್ಕೆ ರೈಲ್ವೆ ಭೂಪಟದಲ್ಲೊಂದು ಪ್ರಮುಖ ಸ್ಥಾನ ದೊರೆತಿಲ್ಲ. ಮೊದಲು ರೈಲು ಸಂಪರ್ಕದಿಂದಲೇ ಮಂಗಳೂರಿಗೆ ಅನ್ಯಾಯವಾಗಿದ್ದು, ಈಗಲೂ ಮುಂದುವರಿದಿದೆ. ಗಾಯದ ಮೇಲೆ ಉಪ್ಪು ಸವರುವಂತೆ ಕೇರಳ ರೈಲ್ವೆ ಎಲ್ಲ ಸೌಲಭ್ಯಗಳನ್ನು ಪಡೆದುಕೊಂಡು ಬೀಗುತ್ತಿದೆ. ಇದೀಗ ಮಂಗಳೂರಿನಿಂದ ಕೊಚ್ಚುವೇಲಿಗೆ ಇನ್ನೊಂದು ರೈಲು ಪ್ರಾರಂಭವಾಗುತ್ತಿದ್ದು, ಈ ಸಂದರ್ಭದಲ್ಲಿ ಮಂಗಳೂರನ್ನು ಪಾಲ್ಗಟಿನಿಂದ ಪ್ರತ್ಯೇಕಿಸಿ ಹೊಸ ವಿಭಾಗ ರಚಿಸಬೇಕೆಂಬ ಕೂಗು ಮುನ್ನೆಲೆಗೆ ಬಂದಿದೆ.
ಈಗಾಗಲೇ ಮಂಗಳೂರಿನಿಂದ ಕೇರಳಕ್ಕೆ ಐದು ನೇರ ರೈಲುಗಳಿವೆ. ಇದರ ಜತೆಗೆ ಕೊಂಕಣ ರೈಲ್ವೆ ಮೂಲಕ ಸಂಚರಿಸುತ್ತಿರುವ ಹಲವು ರೈಲುಗಳು ಕೇರಳಕ್ಕೆ ಹೋಗುತ್ತಿವೆ. ಹಾಗೆ ನೋಡಿದರೆ ಕೊಂಕಣ ರೈಲ್ವೇಯಿಂದ ಹೆಚ್ಚು ಪ್ರಯೋಜನವಾಗಿರುವುದು ಕರ್ನಾಟಕಕ್ಕಲ್ಲ ಬದಲಾಗಿ ಕೇರಳಕ್ಕೆ. ಕೊಂಕಣ ರೈಲ್ವೆಯಲ್ಲಿ ಯಾವುದೇ ಹೊಸ ರೈಲು ಪ್ರಾರಂಭವಾದರೂ ತಕ್ಷಣವೇ ಅದನ್ನು ಕೇರಳಕ್ಕೆ ವಿಸ್ತರಿಸಿಕೊಳ್ಳುವಲ್ಲಿ ಕೇರಳಿಗರು ಯಶಸ್ವಿ ಯಾಗುತ್ತಾರೆ. ಅಂತೆಯೇ ಪ್ರತಿ ಬಜೆಟ್‌ನಲ್ಲಿ ಕೇರಳಕ್ಕೆ ಏನಾದರೊಂದು ರೈಲ್ವೆ ಕೊಡುಗೆ ಇದ್ದೇ ಇರುತ್ತದೆ. ದಿಲ್ಲಿಯ ಆಯಕಟ್ಟಿನ ಸ್ಥಳಗಳಲ್ಲಿ ಮಲಯಾಳಿ ಅಧಿಕಾರಿಗಳೇ ತುಂಬಿಕೊಂಡಿರುವುದರಿಂದ ಸೌಲಭ್ಯಗಳೆಲ್ಲ ಕೇರಳ ಪಾಲಾಗುತ್ತಿದೆ. ಕರ್ನಾಟಕದವರಿಗೆ ಈ ಮಟ್ಟದ ಲಾಬಿ ಮಾಡಲು ಗೊತ್ತಿಲ್ಲದಿರುವುದರಿಂದ ರೈಲುಗಳೆಲ್ಲ ಕೇರಳಕ್ಕೆ ಅವುಗಳ ಹೊಗೆ ಮಾತ್ರ ನಮಗೆ ಎಂಬ ವ್ಯಂಗ್ಯೋಕ್ತಿಯಲ್ಲಿ ಸತ್ಯಾಂಶವಿದೆ. ಮಂಗಳೂರು- ಬೆಂಗಳೂರು ಮಧ್ಯೆ ಒಂದು ಹೆಚ್ಚುವರಿ ರೈಲು ಪ್ರಾರಂಭಿಸಬೇಕಾದರೆ ಕನ್ನಡಿಗರು ಆಕಾಶ ಭೂಮಿ ಒಂದು ಮಾಡಬೇಕಾಯಿತು.
1994ರಲ್ಲಿ ಸ್ಥಗಿತಗೊಳಿಸಲಾಗಿದ್ದ ಮಂಗಳೂರು-ಹುಬ್ಬಳ್ಳಿ-ಮೀರಜ್ ಮಾರ್ಗವಾಗಿ ಸಂಚರಿಸುತ್ತಿದ್ದ ಮಹಾಲಕ್ಷ್ಮೀ ಎಕ್ಸ್‌ಪ್ರೆಸ್, ಕಣ್ಣೂರು-ಮಂಗಳೂರು-ಬೆಂಗಳೂರು ರೈಲು, ಕಾರವಾರ-ಬೆಂಗಳೂರು ನಡುವೆ ಇನ್ನೊಂದು ರೈಲು ಪ್ರಾರಂಭಿಸಬೇಕೆಂಬ ಬೇಡಿಕೆಯಿದ್ದರೂ ರೈಲ್ವೆ ಅದನ್ನು ಕಿವಿಗೆ ಹಾಕಿಕೊಂಡಿಲ್ಲ. ಮಂಗಳೂರು-ಬೆಂಗಳೂರು ನಡುವೆ ಸಂಚರಿಸುವ ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲನ್ನು ಮಂಗಳೂರು ಸೆಂಟ್ರಲ್ ನಿಲ್ದಾಣದವರೆಗೆ ವಿಸ್ತರಿಸಬೇಕೆಂಬ ಚಿಕ್ಕ ಬೇಡಿಕೆಯನ್ನು ಪ್ಲಾಟ್‌ಫಾರಂ ಇಲ್ಲ ಎಂದು ಹೇಳಿ ತಿರಸ್ಕರಿಸಲಾಗಿದೆ. ಕರಾವಳಿಯ ಸಮಸ್ಯೆಗಳಿಗೆಲ್ಲ ಮಂಗಳೂರು ಪಾಲಾ^ಟ್ ರೈಲ್ವೇ ವಿಭಾಗದಲ್ಲಿರುವುದು ಕಾರಣ ಎನ್ನುವ ಆರೋಪ ನಿಜವಾದರೂ ಪ್ರತ್ಯೇಕ ರೈಲ್ವೇ ವಿಭಾಗ ಸೃಷ್ಟಿಯಾಗುವುದರಿಂದ ಇಲ್ಲಿನ ಸಮಸ್ಯೆಗಳೆಲ್ಲ ಬಗೆಹರಿಯುತ್ತವೆ ಎಂದು ನಿರೀಕ್ಷಿಸುವಂತಿಲ್ಲ.
ಪರಿಸ್ಥಿತಿ ತುಸು ಗೋಜಲಾಗಿದೆ. ಮಂಗಳೂರಿನ ಬರೀ 20 ಕಿ. ಮೀ. ರೈಲ್ವೆ ವ್ಯಾಪ್ತಿ ಕೊಂಕಣ ರೈಲ್ವೇ, ದಕ್ಷಿಣ ರೈಲ್ವೇ, ನೈಋತ್ಯ ರೈಲ್ವೆಗಳಲ್ಲಿ ಹಂಚಿಹೋಗಿದೆ.ಇದರ ಬಹುಪಾಲು ದಕ್ಷಿಣ ರೈಲ್ವೆಯ ಅಧೀನದಲ್ಲಿರುವುದರಿಂದ ಯಾವುದೇ ಕೆಲಸವಾಗಬೇಕಿದ್ದರೂ ಚೆನ್ನೈಯಲ್ಲಿರುವ ದಕ್ಷಿಣ ರೈಲ್ವೆ ವಲಯ ಕೇಂದ್ರ ಕಚೇರಿ ಮತ್ತು ಪಾಲಾ^ಟ್ ವಿಭಾಗ ಕಚೇರಿಯಿಂದ ಅನುಮತಿ ಅಗತ್ಯ. ಪಾಲಾ^ಟ್ ವಿಭಾಗ ಗಳಿಸುವ ಲಾಭದಲ್ಲಿ ಮಂಗಳೂರಿನಿಂದ ಹೋಗುವ ಪಾಲೇ ಹೆಚ್ಚಿದೆ. ಹೀಗಿದ್ದರೂ ಮಂಗಳೂರನ್ನು ಅಭಿವೃದ್ಧಿಪಡಿಸಲು ರೈಲ್ವೆ ಇಲಾಖೆ ಮನಸು ಮಾಡುತ್ತಿಲ್ಲ.
ರೈಲ್ವೆ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಕರಾವಳಿಯ ಈಗಿನ ಇಬ್ಬರು ಸಂಸದರು ನಡೆಸಿರುವ ಪ್ರಯತ್ನಗಳು ಏನೇನೂ ಸಾಲದು. ಕೇಂದ್ರದಲ್ಲಿ ತಮ್ಮದೇ ಪಕ್ಷದ ಸರಕಾರ ಇರುವುದರಿಂದ ಸಂಸದರು ಸಂಸತ್ತಿನಲ್ಲಿ ಕರಾವಳಿಗೆ ಆಗುತ್ತಿರುವ ಅನ್ಯಾಯಗಳತ್ತ ಗಮನಸೆಳೆಯಬಹುದಿತ್ತು. ಅಂತೆಯೇ ಬಜೆಟ್ ಮಂಡನೆಯಾಗುವಾಗ ಕೆಲವೊಂದು ಸೌಲಭ್ಯಗಳನ್ನು ತರಲು ಒತ್ತಡ ಹೇರಬಹುದಿತ್ತು. ಆದರೆ ಈ ನಿಟ್ಟಿನಲ್ಲಿ ಅವರು ಮಾಡಿರುವ ಪ್ರಯತ್ನಗಳು ನಿರಾಶೆ ಉಂಟು ಮಾಡುತ್ತಿವೆ.
ಹಾಗೆಂದು ಮಂಗಳೂರು ವಿಭಾಗ ಸ್ಥಾಪನೆಯಾದ ಕೂಡಲೇ ಎಲ್ಲ ಸೌಲಭ್ಯಗಳು ಸಿಗುತ್ತವೆ ಎನ್ನುವಂತಿಲ್ಲ. ಏಕೆಂದರೆ ವಿಭಾಗಕ್ಕೆ ಇರುವುದು ಸೀಮಿತ ಅಧಿಕಾರ. ಅಲ್ಲದೆ ಬಜೆಟ್ ಅನುದಾನಗಳು ಸಿಗುವುದು ವಲಯಕ್ಕೆ ಹೊರತು ವಿಭಾಗಕ್ಕಲ್ಲ. ಮಂಗಳೂರು ಮತ್ತು ಒಟ್ಟಾರೆಯಾಗಿ ಕರ್ನಾಟಕದ ರೈಲ್ವೆ ಸೌಲಭ್ಯ ಅಭಿವೃದ್ಧಿ ಹೊಂದಬೇಕಾದರೆ ಮಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಮಂಗಳೂರು ರೈಲ್ವೇ ವಲಯವನ್ನು ಸ್ಥಾಪಿಸಲು ಒತ್ತಾಯಿಸುವುದು ಅಗತ್ಯ. ಇದು ಸಾಧ್ಯವಾಗಬೇಕಾದರೆ ಕೊಂಕಣ ರೈಲ್ವೆಯನ್ನು ಮಂಗಳೂರು ವಲಯದ ವ್ಯಾಪ್ತಿಗೆ ತರುವ ಕೆಲಸವಾಗಬೇಕು.