Advertisement

ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು: ಡಿ.ಕೆ.ಶಿವಕುಮಾರ್‌

12:13 AM Jul 07, 2023 | Team Udayavani |

ಬೆಂಗಳೂರು: ರಾಜಕೀಯದಲ್ಲಿ ಯಾವ ಸ್ಥಾನಮಾನಗಳೂ ಶಾಶ್ವತವಲ್ಲ, ಇಲ್ಲಿ ಏನು ಬೇಕಾದರೂ ಆಗಬಹುದು. ಶತ್ರುವಿನ ಶತ್ರು ಮಿತ್ರನಾಗುತ್ತಾನೆ. ರಾಜಕೀಯ ಒಂದು ಉತ್ತಮ ಕಲೆಯಷ್ಟೆ. ಹೀಗಾಗಿ ಯಾರು ಬೇಕಾದರೂ ಯಾವ ಸ್ಥಾನದಲ್ಲಿ ಯಾವಾಗ ಬೇಕಾದರೂ ಕುಳಿತುಕೊಳ್ಳಬಹುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಾರ್ಮಿಕವಾಗಿ ಆಡಿದ ಮಾತುಗಳು ಹಲವು ರಾಜಕೀಯ ಊಹಾಪೋಹಗಳಿಗೆ ಕಾರಣವಾದವು.

Advertisement

ವಿಧಾನಸಭೆ ಕಲಾಪದಲ್ಲಿ ಗುರುವಾರ ಉಪಸಭಾಧ್ಯಕ್ಷರ ಆಯ್ಕೆ ವೇಳೆ ಅಭಿನಂದನ ಮಾತುಗಳನ್ನಾಡಿ, ಪ್ರತಿಯೊಬ್ಬ ವ್ಯಕ್ತಿಗೂ ರಾಜಕಾರಣದಲ್ಲಿ ಏಳು ಬೀಳು ಸಾಮಾನ್ಯ. ಆದರೆ ಯಾವುದು ಶಾಶ್ವತವಲ್ಲ. ರಾಜಕೀಯ ಒಂದು ಉತ್ತಮ ಕಲೆ ಎನ್ನಬಹುದು. ಇಲ್ಲಿ ಶತ್ರುವಿನ ಶತ್ರು ಮಿತ್ರನಾಗಿರುತ್ತಾನೆ. ಚುನಾವಣೆಯವರೆಗೆ ಒಂದಿರುತ್ತದೆ, ಆ ಮೇಲೆ ಮುಂದೆನಾಗುತ್ತದೆಯೋ ಗೊತ್ತಿಲ್ಲ ಎಂದು ಹೇಳಿದ ಮಾತುಗಳಿಗೆ ಬಿಜೆಪಿ ಪಾಳಯದ ಕೆಲವು ಸದಸ್ಯರು ಡಿಕೆಶಿ ಅವರಿಗೆ ಪ್ರೋತ್ಸಾಹಿತ ಮಾತುಗಳನ್ನಾಡಿ ಕಾಲೆಳೆದರು.

ಕಾದು ನೋಡುವ ಕಾಲವಲ್ಲ
ಕೂಡಲೇ ಮಧ್ಯ ಪ್ರವೇಶಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮೊದಲು ರಾಜಕಾರಣದಲ್ಲಿ ಕಾದು ನೋಡಿ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದರು. ಆದರೆ ಈಗಿನ ರಾಜಕಾರಣದಲ್ಲಿ ಅಂತಹ ವಾತಾವರಣ ಉಳಿದಿಲ್ಲ. ಈಗ ಅವಕಾಶ ಸಿಕ್ಕಾಗ ಯಾವ ರೀತಿಯಿಂದಲಾದರೂ ಸರಿ ಅಧಿಕಾರ ಪಡೆದುಕೊಳ್ಳುವ ಘಟನೆಗಳು ನಮ್ಮ ಅಕ್ಕಪಕ್ಕದ ರಾಜ್ಯದಲ್ಲಿ ನಡೆದಿವೆ. ಅಧಿಕಾರ ಯಾರಿಗೂ ಕಾಯುವುದಿಲ್ಲ. ನಾವೇ ಅದನ್ನು ಪಡೆದುಕೊಳ್ಳಬೇಕು ಎಂದರು.

ಡಿಕೆಶಿಗೆ ಬಿಜೆಪಿ ಬಹುಪರಾಕ್‌
ಡಿಕೆಶಿ ಅವರು ಕೊಟ್ಟ ಕುದುರೆಯನ್ನು ಚೆನ್ನಾಗಿ ಏರುವ ಸಾಮಾರ್ಥ್ಯ ಹೊಂದಿದ್ದಾರೆ. ರಾಜಕಾರಣದಲ್ಲಿ ಯಾವುದು ಶಾಶ್ವತವಲ್ಲ. ಬರುವಂತಹ ದಿನಗಳಲ್ಲಿ ಬದಲಾವಣೆಗೆ ಉಪ ಸಭಾಧ್ಯಕ್ಷರು ಸಾಕ್ಷಿಯಾಗಬಹುದು ಎಂದು ಮಹಾರಾಷ್ಟ್ರದ ಪವಾರ್‌ ಪಾಲಿಟಿಕ್ಸ್‌ ಅನ್ನು ಪರೋಕ್ಷವಾಗಿ ಬಸವರಾಜ ಬೊಮ್ಮಾಯಿ ಅವರು ಪ್ರಸ್ತಾವಿಸಿದರು. ಇದಕ್ಕೆ ಉತ್ತರಿಸದ ಡಿಕೆಶಿ ಮುಗುಳ್ನಗುತ್ತಲೇ, ನಾನು ಇನ್ನೊಮ್ಮೆ ರಾಜಕಾರಣವನ್ನು ಮಾತನಾಡುತ್ತೇನೆ. ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಭಾಗಿಯಾಗಬೇಕಿದೆ ಎಂದರು. ಕೂಡಲೇ ಬೊಮ್ಮಾಯಿ, ನಿಮಗೆ ಈ ಕಡೆಯವರ ಬೆಂಬಲವೇ ಅಧಿಕವಾಗಿದೆ ಚಿಂತಿಸಬೇಡಿ ಎಂದರು. ಅಷ್ಟೇಯಲ್ಲ, ಬಿಜೆಪಿ ಸದಸ್ಯರು ಆಗಲಿ ಆಗಲಿ ಎಂದು ಬಹುಪರಾಕ್‌ ಹೇಳಿದರು.

2024 -25ನೇ ಸಾಲಿಗೆ ವಾರಾಹಿ ಪೂರ್ಣ: ಡಿಸಿಎಂ
ಬೆಂಗಳೂರು: ವಾರಾಹಿ ನೀರಾವರಿ ಯೋಜನೆಯಡಿ ಬರುವ ಕಾಮಗಾರಿಗಳನ್ನು 2024-25ನೇ ಸಾಲಿನಲ್ಲಿ ಪೂರ್ಣಗೊಳಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

Advertisement

ವಿಧಾನಪರಿಷತ್ತಿನಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನೆಗೆ ಉತ್ತರಿಸಿದ ಅವರು, 2023-24ನೇ ಸಾಲಿನ ವಾರಾಹಿ ಯೋಜನೆಗೆ ಅನುದಾನ ಹಂಚಿಕೆ ಮಾಡಬೇಕಾಗಿರುತ್ತದೆ. ಈ ಯೋಜನೆಯಡಿ ಬರುವ ಕಾಲುವೆಗಳ ನಿರ್ಮಾಣಕ್ಕೆ ಅರಣ್ಯ ಹಾಗೂ ಅರಣ್ಯೇತರ ಭೂಪ್ರದೇಶಗಳ ಹಸ್ತಾಂತರಕ್ಕಾಗಿ ಆದ್ಯತೆ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ಕಾಮಗಾರಿಗಳನ್ನು 2024-25ನೇ ಸಾಲಿನಲ್ಲಿ ಪೂರ್ಣಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.

ವಾರಾಹಿ ನೀರಾವರಿ ಯೋಜನೆಗೆ 1997ರಲ್ಲಿ 9.43 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. 2003-04ರಲ್ಲಿ ಪರಿಷ್ಕೃತ ಅಂದಾಜು 569 ಕೋಟಿ ರೂ. ಆಯಿತು. 2014-15ರಲ್ಲಿ 1,789 ಕೋಟಿ ರೂ.ಗಳಿಗೆ ಪರಿಷ್ಕೃತ ಡಿಪಿಆರ್‌ ಸಿದ್ಧಪಡಿಸಲಾಯಿತು. ಅದರಂತೆ 2023ರ ಮೇ ಅಂತ್ಯಕ್ಕೆ 1,302 ಕೋಟಿ ರೂ. ವೆಚ್ಚ ಮಾಡಲಾಗಿದೆ. ಒಟ್ಟು 15,702 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಗುರಿ ಇದ್ದು, 6,110 ಹೆಕ್ಟೇರ್‌ ಪ್ರದೇಶಕ್ಕೆ ಅಚ್ಚುಕಟ್ಟು ಸೃಷ್ಟಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next