Advertisement

ಕಾರ್ಡ್‌ ಯಾರಿಗೊ, ಕಿರುಕುಳ ಇನ್ನಾರಿಗೋ

12:06 PM Oct 24, 2017 | Team Udayavani |

ಬೆಂಗಳೂರು: ಕ್ರೆಡಿಟ್‌ ಕಾರ್ಡ್‌ ವಿಚಾರದಲ್ಲಿ ಮಾನಸಿಕ ಹಿಂಸೆ ನೀಡಿದ ಖಾಸಗಿ ಬ್ಯಾಂಕ್‌ ವಿರುದ್ಧ ರಾಜ್ಯ ಗ್ರಾಹಕರ ವ್ಯಾಜ್ಯ ಆಯೋಗದ ಮೊರೆ ಹೋದ ಅನಿವಾಸಿ ಭಾರತೀಯ ಸಾಫ್ಟ್ವೇರ್‌ ಎಂಜಿನಿಯರೊಬ್ಬರು ನಾಲ್ಕು ವರ್ಷ ಹೋರಾಟ ನಡೆಸಿ ಪರಿಹಾರ ಪಡೆದುಕೊಂಡಿದ್ದಾರೆ.

Advertisement

ಮಾನಸಿಕ ಕಿರುಕುಳ ಕೊಟ್ಟ ತಪ್ಪಿಗೆ ಖಾಸಗಿ ಬ್ಯಾಂಕ್‌ಗೆ ಗ್ರಾಹಕರ ವ್ಯಾಜ್ಯ ಆಯೋಗ ಐದು ಲಕ್ಷ ರೂ. ದಂಡ ವಿಧಿಸಿದ್ದು, ವಾರ್ಷಿಕ ಶೇ.8ರಂತೆ ನಾಲ್ಕು ವರ್ಷಗಳ ಬಡ್ಡಿ ಸಮೇತ ಹಣ ನೀಡಲು ಆದೇಶಿಸಿದೆ. ಅಮೆರಿಕದ ಸಾಫ್ಟ್ವೇರ್‌ ಎಂಜಿನಿಯರ್‌ ಹೆಸರಿನಲ್ಲಿ ನಕಲಿ ವ್ಯಕ್ತಿಗೆ ಕ್ರೆಡಿಟ್‌ ಕಾರ್ಡ್‌ ನೀಡಿದ್ದ ಖಾಸಗಿ ಬ್ಯಾಂಕ್‌ ಮೋಸ ಹೋಗಿದೆ.

ಪ್ರಕರಣದ ತೀರ್ಪು ನೀಡಿರುವ ಆಯೋಗ, “ಬ್ಯಾಂಕ್‌ಗಳು ಸಾಲ, ಕ್ರೆಡಿಟ್‌ ಕಾರ್ಡ್‌ ನೀಡುವಾಗ ವ್ಯಕ್ತಿಯ ನಿಖರ ದಾಖಲೆಗಳನ್ನು ಪರಿಶೀಲಿಸಬೇಕು. ಆಗ ಮಾತ್ರ ನೈಜ ಗ್ರಾಹಕರ ವಿಶ್ವಾಸಾರ್ಹತೆ ಕಾಪಾಡಿಕೊಳ್ಳಬಹುದು. ಈ ಪ್ರಕರಣದಲ್ಲಿ ದೂರುದಾರರು ಮಾನಸಿಕ ಯಾತನೆ ಅನುಭವಿಸಲು ಬ್ಯಾಂಕ್‌ ಸಿಬ್ಬಂದಿಯ ಲೋಪವಿದೆ.

ಅಮೆರಿದಲ್ಲಿರುವ ಅನಿವಾಸಿ ಭಾರತೀಯನ ಹೆಸರಲ್ಲಿ ಯಾರೋ ಸಲ್ಲಿಸಿದ್ದ ನಕಲಿ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆ ಕ್ರೆಡಿಟ್‌ ಕಾರ್ಡ್‌ ನೀಡಿದ್ದು ಬ್ಯಾಂಕ್‌ನ ತಪ್ಪು,’ ಎಂದು ಅಭಿಪ್ರಾಯಪಟ್ಟಿದೆ.

ಏನಿದು ಪ್ರಕರಣ?: ಆಂಧ್ರಪ್ರದೇಶ ಮೂಲದ ಕಿಶೋರ್‌ಕುಮಾರ್‌ ಬೋಡೆ 2009ರಿಂದ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದು, 2009ರಲ್ಲಿ ಆಂಧ್ರದ ಬೇಗಂಪೇಟ್‌ನ ಐಸಿಐಸಿಐ ಶಾಖೆಯಲ್ಲಿ ಎನ್‌ಆರ್‌ಐ ಖಾತೆ ತೆರೆದು ವಹಿವಾಟು ನಡೆಸುತ್ತಿದ್ದರು. ಈ ಮಧ್ಯೆ 2012ರ ಏ.4ರಂದು ಇಂಟರ್‌ನೆಟ್‌ ಬ್ಯಾಂಕಿಂಗ್‌ಗೆ ಲಾಗ್‌ಇನ್‌ ಆದಾಗ “ನಿಮ್ಮ ಕ್ರೆಡಿಟ್‌ ಕಾರ್ಡ್‌ ಬ್ಯಾಲೆನ್ಸ್‌ ಮೊತ್ತ 1.58 ಕೋಟಿ ರೂ. ಇದೆ’ ಎಂಬ ಸಂದೇಶ ಕಂಡಿದೆ.

Advertisement

ಜತೆಗೆ ಖಾತೆಯಲ್ಲಿ 11,824 ರೂ. ನೆಗೆಟೀವ್‌ ಬ್ಯಾಲೆನ್ಸ್‌ ತೋರಿಸಿದೆ. ಇದರಿಂದ ಗಾಬರಿಯಾದ ಕಿಶೋರ್‌ಕುಮಾರ್‌, ಕೂಡಲೇ ಬ್ಯಾಂಕ್‌ನ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿ ವಿಚಾರಿಸಿದಾಗ “ನೀವು ಕ್ರೆಡಿಟ್‌ ಕಾರ್ಡ್‌ ಪಡೆದಿದ್ದು ಹಣ ಬಳಸಿಕೊಂಡಿದ್ದೀರಿ. ಇದುವರೆಗೆ ಒಂದೂ ಕಂತು ಪಾವತಿಸಿಲ್ಲ ಹೀಗಾಗಿ ಬಾಕಿ ಹಣ ಪಾವತಿಸಿ’ ಎಂಬ ಉತ್ತರ ಬಂದಿದೆ.

ತಾವು ಕ್ರೆಡಿಟ್‌ ಕಾರ್ಡ್‌ ಪಡೆಯದಿದ್ದರೂ ತೊಂದರೆಗೊಳಗಾದ ಕಿಶೋರ್‌, ಬೇಗಂಪೇಟ್‌ ಐಸಿಐಸಿಐ ಶಾಖೆಯ ಮ್ಯಾನೇಜರನ್ನು ಸಂಪರ್ಕಿಸಿದಾಗ, “ನೀವು ಬೆಂಗಳೂರಿನ ಬಿಟಿಎಂ ಲೇಔಟ್‌ ಶಾಖೆಯಿಂದ 2007ರ ಜುಲೈನಲ್ಲಿ ಕಾರ್ಡ್‌ ಪಡೆದಿದ್ದೀರಿ. ನಿಮ್ಮ ಪಾನ್‌ ಕಾರ್ಡ್‌ ನಂಬರ್‌, ಡ್ರೈವಿಂಗ್‌ ಲೈಸೆನ್ಸ್‌, ವೇತನ ವಿವರ ದಾಖಲೆಗಳ ಆಧಾರದಲ್ಲಿ ಕಾರ್ಡ್‌ ನೀಡಲಾಗಿದೆ.

ಹೀಗಾಗಿ ಬಾಕಿ ಮೊತ್ತವನ್ನು ಪಾವತಿಸಲೇಬೇಕು’ ಎಂದು ವಾದಿಸಿದ್ದಾರೆ. ಅಲ್ಲದೆ ಬಾಕಿ ಪಾವತಿಸುವಂತೆ ಕಿಶೋರ್‌ ಅವರ ಪೋಷಕರಿಗೂ ನೋಟಿಸ್‌ ನೀಡಲಾಗಿತ್ತು. ಇದರಿಂದ ಕಂಗಲಾದ  ಕಿಶೋರ್‌, ಬ್ಯಾಂಕ್‌ ವಿರುದ್ಧ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದಾವೆ ಹೂಡಿದ್ದರು.

ಅರ್ಜಿದಾರರ ಪರ ವಕೀಲರ ವಾದ: ಸಾಮಾನ್ಯ ಜನ ಖಾತೆ ಮಾಡಿಸಲು ಹೋದರೆ ನೂರೆಂಟು ನಿಯಮ ಹೇಳುವ ಬ್ಯಾಂಕ್‌, ಕಿಶೋರ್‌ಕುಮಾರ್‌ ಹೆಸರಿನಲ್ಲಿ ಕ್ರೆಡಿಟ್‌ ಕಾರ್ಡ್‌ ನೀಡುವಾಗ ನಿಯಮಗಳನ್ನು (ಕೆವೈಸಿ) ಪಾಲಿಸಿಲ್ಲ. ಕಡೇ ಪಕ್ಷ ಕ್ರೆಡಿಟ್‌ ಕಾರ್ಡ್‌ ಪಡೆದ ವ್ಯಕ್ತಿಯ ಭಾವಚಿತ್ರವನ್ನಾದರೂ ಪಡೆಯಬೇಕಿತ್ತು.

ಜತೆಗೆ ಕ್ರೆಡಿಟ್‌ ಕಾರ್ಡ್‌ ನೀಡುವ ಮುನ್ನ ಪಡೆದಿರುವ ವೇತನ ವಿವರದ ದಾಖಲೆ ನೀಡಿದ್ದ ಕಂಪನಿಯಲ್ಲಿ ಕಿಶೋರ್‌ಕುಮಾರ್‌ ಕೆಲಸ ಮಾಡೇ ಇಲ್ಲ. ಅವರ ದೂರವಾಣಿ ಹಾಗೂ ಇ ಮೇಲ್‌ ವಿಳಾಸ ಕೂಡ ಹೊಂದಾಣಿಕೆಯಾಗುತ್ತಿಲ್ಲ. ಹೀಗಿದ್ದಾಗ, ಬ್ಯಾಂಕ್‌ನ ಒಳಗಡೆಯಿರುವ ಸಿಬ್ಬಂದಿಯೇ ಕಿಶೋರ್‌ ಅವರ ಮಾಹಿತಿ ಸಂಗ್ರಹಿಸಿ ಕ್ರೆಡಿಟ್‌ ಕಾರ್ಡ್‌ ಪಡೆದಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ವಕೀಲರು ವಾದ ಮಂಡಿಸಿದ್ದರು.

ಕೇಳಿದ್ದು 49 ಲಕ್ಷ ರೂ.: ತಾನು ಪಡೆಯದ ಕ್ರೆಡಿಟ್‌ ಕಾರ್ಡ್‌ ಸಾಲದ ಮೊತ್ತ ವಾಪಾಸ್‌ಗೆ ಬ್ಯಾಂಕ್‌ ಸಿಬ್ಬಂದಿ ಸಾಕಷ್ಟು ತೊಂದರೆ ಕೊಟ್ಟಿದ್ದಾರೆ. ಪೋಷಕರಿಗೂ ನೋಟಿಸ್‌ ಕಳುಹಿಸಿ ಮಾನಸಿಕ ಹಿಂಸೆ ನೀಡಿದ್ದಾರೆ. ಹೀಗಾಗಿ, ಪರಿಹಾರವಾಗಿ 49 ಲಕ್ಷ ರೂ. ಕೊಡಿಸುವಂತೆ ದೂರುದಾರರು ಆಯೋಗಕ್ಕೆ ಮನವಿ ಸಲ್ಲಿಸಿದ್ದರು. ಆದರೆ, ದೂರುದಾರರು ಕೋರಿರುವ ಪರಿಹಾರ ಮೊತ್ತ ದುಬಾರಿಯಾಗಿದೆ. ಹೀಗಾಗಿ ಅದನ್ನು 5 ಲಕ್ಷಕ್ಕೆ ಮಿತಗೊಳಿಸಲಾಗಿದೆ ಎಂದು ಆಯೋಗ ತಿಳಿಸಿದೆ.

ಯಾರಿಗೋ ಕ್ರೆಡಿಟ್‌ ಕಾರ್ಡ್‌ ನೀಡಿ, ಹಣ ಪಾವತಿಸುವಂತೆ ನಮ್ಮ ಕಕ್ಷಿದಾರರಿಗೆ ನೀಡಿದ ಮಾನಸಿಕ ಕಿರುಕುಳಕ್ಕೆ ಪರಿಹಾರ ಕೋರಿ ದೂರು ನೀಡಲಾಗಿತ್ತು. ಅಲ್ಲದೆ ಖುದ್ದು ಕಿಶೋರ್‌ಕುಮಾರ್‌ ಕ್ರೆಡಿಟ್‌ ಕಾರ್ಡ್‌ ಪಡೆದುಕೊಂಡಿದ್ದಾರೆ ಎಂಬುದಕ್ಕೆ ಬ್ಯಾಂಕ್‌ ಬಳಿ ಸೂಕ್ತ ಸಾಕ್ಷ್ಯಗಳೇ ಇರಲಿಲ್ಲ.
-ಪಿ.ರಾಜಶೇಖರ್‌, ಕಿಶೋರ್‌ಕುಮಾರ್‌ ಪರ ವಕೀಲ

* ಮಂಜುನಾಥ್‌ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next