ಹುಳಿಯಾರು: ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಗಗನಕ್ಕೇರಿದ್ದರೂ ಇಲ್ಲಿ ಮಾತ್ರ ಯಾವುದೇ ತರಕಾರಿ ಕೊಂಡರೂ ಕೇವಲ ಇಪ್ಪತ್ತು ರೂ. ಮಾತ್ರ. ಇದು ಫೆಸ್ಟಿವಲ್ ಆಫರ್ ಅಲ್ಲ. ಸ್ಟಾಕ್ ಕ್ಲಿಯರೆನ್ಸ್ ಆಫರ್ ಮೊದಲೇ ಅಲ್ಲ. ಎರಡ್ಮೂರು ದಿನ ಕಡಿಮೆಗೆ ಕೊಟ್ಟು ನಂತರ ಹೆಚ್ಚಿಸುವ ಬಿಸಿನೆಸ್ ಅಟ್ರಾಕ್ಷ್ಯನ್ ಅಲ್ಲವೇ ಅಲ್ಲ. ಕಳೆದ ಎರಡ್ಮೂರು ತಿಂಗಳಿಂದಲೂ ಇಲ್ಲಿ ಕೆ.ಜಿಗೆ 20 ರೂ.ನಂತೆ ತರಕಾರಿ ಮಾರಾಟ ಮಾಡಲಾಗುತ್ತಿದೆ.
ಕಡಿಮೆ ದರಕ್ಕೆ ಮಾರಾಟ: ಪಟ್ಟಣದ ಸ್ಪಂದನಾ ನರ್ಸಿಂಗ್ ಹೋಂ ಎದುರಿಗೆ ಕಡಿಮೆ ದರಕ್ಕೆ ತರಕಾರಿ ಮಾರಾಟ ನಡೆಯುತ್ತಿದೆ. ವಾರಕ್ಕೆ ಮೂರು ದಿನ ಬೆಳಗ್ಗೆ 8 ಗಂಟೆಗೆ ಇಪ್ಪತ್ತು ರೂಪಾಯಿ, ಇಪ್ಪತ್ತು ರೂಪಾಯಿ. ಯಾವುದೇ ತರಕಾರಿ ಕೊಂಡರೂ ಕೆ.ಜಿ.ಗೆ ಕೇವಲ ಇಪ್ಪತ್ತು ರೂಪಾಯಿ ಎಂದು ಕೂಗಿ ಮಾರಾಟ ಮಾಡುತ್ತಾರೆ. ಒಂದಲ್ಲ ಎರಡಲ್ಲ ಹತ್ತಕ್ಕೂ ಹೆಚ್ಚು ಬಗೆಯ ತರಕಾರಿ ಇಲ್ಲಿ ಕೆ.ಜಿ.ಗೆ 20 ರೂ. ನಂತೆ ದೊರೆಯುತ್ತದೆ. ಮಾರುಕಟ್ಟೆಯಲ್ಲಿ 50 ರೂ. ಆಸುಪಾಸಿನಲ್ಲಿರುವ ಕ್ಯಾರೇಟ್, ಆಲೂಗಡ್ಡೆ, ಕ್ಯಾಪ್ಸಿಕಂ ಬೆಲೆ ಸಹ ಇಲ್ಲಿ 20 ರೂ. ಮಾತ್ರ.
15 ಚೀಲ ತರಕಾರಿ ಮಾರಾಟ: ಅಂದ ಹಾಗೆ ಇಷ್ಟು ಕಡಿಮೆ ಬೆಲೆಗೆ ತರಕಾರಿ ಮಾರಾಟ ಮಾಡುತ್ತಿರುವವರ್ಯಾರು ತರಕಾರಿ ಬೆಳೆಗಾರರಲ್ಲ, ಮಾರುಕಟ್ಟೆಯಲ್ಲಿ ಕೊಂಡು ತಂದು ಮಾರುತ್ತಿರುವ ಅಪ್ಪಟ ವ್ಯಾಪಾರಸ್ಥರು. ನಿತ್ಯ ಮಧ್ಯರಾತ್ರಿಯೇ ಕೋಲಾರ ಅಥವಾ ಹಾಸನ ಮಾರುಕಟ್ಟೆಗೆ ಹೋಗ್ತಾರೆ. ಹರಾಜಿನಲ್ಲಿ ಚೀಲಗಟ್ಟಲೆ ತರಕಾರಿ ಖರೀದಿಸ್ತಾರೆ. ಖರೀದಿಸಿದ ತರಕಾರಿಯನ್ನು ಅಂದೇ ದಿನಕ್ಕೊಂದೊಂದು ಊರಿನಲ್ಲಿ ತಾಜಾವಾಗಿಯೇ ಮಾರಾಟ ಮಾಡುತ್ತಾರೆ. ಕಡಿಮೆ ಲಾಭವಿಟ್ಟು ಗ್ರಾಹಕರನ್ನು ಆಕರ್ಷಿಸಿ ಮಧ್ಯಾಹ್ನದೊಳಗೆ ಹತ್ತದಿನೈದು ಚೀಲ ತರಕಾರಿ ಮಾರಾಟ ಮಾಡಿ ನೆಮ್ಮದಿಯಿಂದ ಮನೆ ಸೇರುತ್ತಾರೆ.
ಗ್ರಾಹಕರ ಅಚ್ಚು ಮೆಚ್ಚಿನ ವ್ಯಾಪರಿಗಳು: ಮೂರು ಮಂದಿ ಸ್ನೇಹಿತರು ಸೇರಿ ತರಕಾರಿ ವ್ಯಾಪಾರ ಮಾಡುತ್ತಿದ್ದು ರಾಜಣ್ಣ ಮತ್ತು ಆನಂದ್ ಇವರಿಬ್ಬರೂ ಹುಳಿಯಾರು ಹೋಬಳಿಯ ಯಳನಾಡು ಗ್ರಾಮದವರು. ಮತ್ತೂಬ್ಬರು ಜಯಣ್ಣ ಶ್ರೀರಂಪುರ ಹೋಬಳಿಯ ಎಸ್.ನೇರಲಕೆರೆಯವರು. ಇವರು ಹುಳಿಯಾರು, ಅಜ್ಜಾಂಪುರ, ಶ್ರೀರಾಂಪುರ ಹೀಗೆ ದಿನಕ್ಕೊಂದು ಊರಿನಲ್ಲಿ ಕೆ.ಜಿ.ಗೆ 20 ರೂ.ನಂತೆ ತರಕಾರಿ ಮಾರಾಟ ಮಾಡುತ್ತಾರೆ. ಜೊತೆಗೆ ಇಂತಿಷ್ಟೆ ತರಕಾರಿ ಖರೀದಿಸಬೇಕೆಂಬ ನಿಯಮವಿಲ್ಲ ಯಾರು ಎಷ್ಟು ಕೇಳಿದರೂ ಕೊಡ್ತಾರೆ. ಎಲ್ಲಾ ತರಕಾರಿಗಳನ್ನೂ ಮಿಕ್ಸ್ ಕೇಳಿದರೂ ಕೊಡ್ತಾರೆ. ಹಾಗಾಗಿ ಇವರು ಬರುವುದನ್ನೇ ಗ್ರಾಹಕರು ಎದುರು ನೋಡುವಂತ್ತಾಗಿದ್ದು ಹುಳಿಯಾರಿನಲ್ಲಿ ಈ ತರಕಾರಿ ವ್ಯಾಪಾರಸ್ಥರು ಮನೆ ಮಾತಾಗಿದ್ದಾರೆ.
ಸಿಗುವ ತರಕಾರಿಗಳು: ಕ್ಯಾರೇಟು, ಬೀನ್ಸ್, ಹಾಗಲಕಾಯಿ, ಸೌತೆಕಾಯಿ, ಬದನೆಕಾಯಿ, ಹುರುಳಿಕಾಯಿ, ಆಲೂಗಡ್ಡೆ, ತೊಂಡೆಕಾಯಿ, ಬೊಂಡದ ಮೆಣಸಿನಕಾಯಿ, ಕ್ಯಾಪ್ಸಿಕಂ, ಹಸಿರುಮೆಣಸಿನಕಾಯಿ, ಸೀಮೆ ಬದನೆಕಾಯಿ, ಗಡ್ಡೆ ಕೋಸು, ಹೂಕೋಸು ಜೊತೆಗೆ ಸೊಪ್ಪು.
ಬಿಸಿಯೂಟಕ್ಕೆ ಖರೀದಿ: ಯಾವ ತರಕಾರಿ ಕೊಂಡರೂ ಕೆ.ಜಿ.ಗೆ 20 ರೂ. ನಂತೆ ಕೊಡುತ್ತಿರುವುದರಿಂದ ಖರೀದಿಗೆ ಜನ ಮುಗಿ ಬೀಳುತ್ತಿದ್ದಾರೆ. ಅಲ್ಲದೆ ಶಾಲಾ ಶಿಕ್ಷಕರೂ ಸಹ ಇವರ ಆಕರ್ಷಣೆಗೆ ಒಳಗಾಗಿದ್ದು ತಮ್ಮ ಶಾಲೆಯ ಬಿಸಿಯೂಟಕ್ಕೆ ತರಕಾರಿ ವಾರದ ಮೂರು ದಿನ ವರ ಬಳಿಯೇ ತರಕಾರಿ ಕೊಂಡುಕೊಳ್ಳುತ್ತಾರೆ.
ಹೆಚ್ಚು ಲಾಭವಿಟ್ಟು ವಾರಗಟ್ಟಲೆ ಮಾರುವ ಬದಲು ಕಡಿಮೆ ಲಾಭವಿಟ್ಟು ಒಂದೇ ದಿನದಲ್ಲಿ ಹತ್ತದಿನೈದು ಚೀಲ ಮಾರುವುದು ನಮ್ಮ ವ್ಯಾಪಾರ ಗುಟ್ಟು. ಇದರಿಂದ ಗ್ರಾಹಕರಿಗೂ ತಾಜಾ ತರಕಾರಿ ದೊರೆಯುತ್ತದೆ. ನಮ್ಮ ದುಡಿಮೆ ಬಂಡವಾಳವೂ ನಿತ್ಯ ರೊಟೇಷನ್ ಆಗುತ್ತದೆ. ಈ ವ್ಯಾಪಾರದಿಂದ ನಿತ್ಯ ನಾವು ಮೂವರೂ ತಲಾ ಐನೂರು ರೂ. ದುಡಿಯುತ್ತೇ ವೆ.
-ಆನಂದ್, ತರಕಾರಿ ಮಾರಾಟಗಾರ
ನಮ್ಮ ಮೆಡಿಕಲ್ ಸ್ಟೋರ್ ಎದುರಿನಲ್ಲೇ ಕಳೆದ ಎರಡ್ಮೂರು ತಿಂಗಳ ಹಿಂದೆ ಇವರು ತರಕಾರಿ ವ್ಯಾಪಾರ ಆರಂಭಿಸಿದರು. ಮೊದ ಮೊದಲು ಸುಮಾರಿಗೆ ವ್ಯಾಪಾರ ನಡೆಯುತ್ತಿತ್ತು. ಈಗಂತೂ ಒಂದು ಕ್ಷಣವೂ ಬಿಡುವಿಲ್ಲದಂತೆ ವ್ಯಾಪಾರ ಮಾಡುತ್ತಿದ್ದಾರೆ. ನಾವು ಇವರ ಬಳಿಯೇ ತರಕಾರಿ ಕೊಂಡುಕೊಳ್ಳುತ್ತಿದ್ದು ಕಡಿಮೆ ಬೆಲೆಗೆ ಒಳ್ಳೆಯ ತರಕಾರಿ ದೊರೆಯುತ್ತದೆ.
-ಮೆಡಿಕಲ್ ಶಶಿ, ಗ್ರಾಹಕ
* ಎಚ್.ಬಿ.ಕಿರಣ್ ಕುಮಾರ್