Advertisement

ಆಚರಣೆ ಪ್ರಶ್ನಿಸಿದಾಗ ಸಾಮರಸ್ಯಕ್ಕೆ ಆತಂಕ

11:52 AM Dec 24, 2017 | |

ಬೆಂಗಳೂರು: ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶದಲ್ಲಿ ಎಲ್ಲ ಹಬ್ಬಗಳನ್ನು ಆಚರಿಸಬೇಕು. ಆಚರಣೆಗಳನ್ನು ಪ್ರಶ್ನಿಸುವುದು ಶಾಂತಿ- ಸಾಮರಸ್ಯಕ್ಕೆ ಒಳಿತಲ್ಲ ಎಂದು ಬೆಂಗಳೂರು ಮಹಾಧರ್ಮಕ್ಷೇತ್ರದ ಮಹಾ ಧರ್ಮಾಧ್ಯಕ್ಷ ಬರ್ನಾರ್ಡ್‌ ಮೊರಾಸ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಬೆಂಗಳೂರು ಮಹಾಧರ್ಮ ಕ್ಷೇತ್ರವು ಕೋಲ್ಸ್‌ ಪಾರ್ಕ್‌ ಬಳಿಯ ಸಂತ ಜರ್ಮನ್ಸ್‌ ವಿದ್ಯಾಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ “ಕ್ರಿಸ್ಮಸ್‌ ಸ್ನೇಹಮಿಲನ’ದಲ್ಲಿ ಮಾತನಾಡಿದ ಅವರು, “ದೇಶದಲ್ಲಿ ನಾನಾ ಜಾತಿ, ಜನಾಂಗ, ಸಂಸ್ಕೃತಿ, ಸಂಪ್ರದಾಯ, ವರ್ಣ, ಭಾಷೆಯ ಜನರಿದ್ದು, ಎಲ್ಲರೂ ಭಾತೃತ್ವದಿಂದ ಜೀವನ ನಡೆಸುತ್ತಾ ಬಂದಿದ್ದೇವೆ. ವಿವಿಧತೆಯಲ್ಲಿ ಏಕತೆಯೇ ನಮ್ಮ ಜೀವನ ಶೈಲಿಯಾಗಿದೆ ಎಂದು ಹೇಳಿದರು.

ಪ್ರಸ್ತುತ ಸಂದರ್ಭದಲ್ಲಿ ಬಹಳಷ್ಟು ಜನರಿಗೆ ಇತಿಹಾಸ, ವಾಸ್ತವ ಹಾಗೂ ದೇವರು, ಸಮಾಜದ ಜೀವನ ಕ್ರಮ ಬೇಡವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರಶ್ನಿಸಲಾಗುತ್ತಿದ್ದು, ದೇಶದಲ್ಲಿನ ಶಾಂತಿ, ಸಾಮರಸ್ಯವನ್ನು ಕದಡಿದಂತಾಗುತ್ತದೆ. ಇಂತಹ ಸಂದಿಗ್ಧ ಪರಿಸ್ಥಿತಿ 
ಯಲ್ಲಿ ಯೇಸು ಕ್ರಿಸ್ತರ ಜಯಂತಿ ಆಚರ ಣೆಯಿಂದ ಶಾಂತಿ ನೆಲೆಯೂರುವಂತೆ ಮಾಡಲಿ ಎಂದರು.

ಅಸಹನೆ, ಕೋಮುಗಲಭೆ, ಪ್ರತ್ಯೇಕತೆ, ವಿಚ್ಛಿದ್ರಕಾರಕ ಶಕ್ತಿಗಳು ಅಲ್ಲಲ್ಲಿ ಕ್ರಿಯಾಶೀಲವಾಗಿದ್ದು, ಶಾಂತಿ ಕದಡುವ ಯತ್ನ ನಡೆದಿದೆ. ಶಾಂತಿಯುತವಾಗಿ ಹಬ್ಬ ಹರಿದಿನಗಳ ಆಚರಣೆಗೆ ಅಡ್ಡಿಪಡಿಸುವ ಪ್ರಯತ್ನಗಳ ಮೂಲಕ ಜಾತ್ಯಾತೀತ ರಾಷ್ಟ್ರದ ಧಾರ್ಮಿಕ ಆಚರಣೆಗೆ ಧಕ್ಕೆ ತರಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕ್ರಿಸ್ತನ ಆದರ್ಶ, ಮೌಲ್ಯಗಳ ಪಾಲನೆಯ ಮೂಲಕ ಶಾಂತಿ ಯನ್ನು ಪ್ರತಿಪಾದಿಸಬೇಕು ಎಂದು ಕರೆ ನೀಡಿದರು.

ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂದು ಬಸವಣ್ಣ ಹೇಳಿದ್ದಾರೆ. ಬಾಲ್ಯದಿಂದಲೇ ಭಕ್ತಿ, ಆಚರಣೆಯ ಮಹತ್ವ ಅರಿತು ಪಾಲಿಸಿದರೆ ಜೀವನ ಅರ್ಥಪೂರ್ಣ. ಹಾಗಾಗಿ ಹಬ್ಬ ಹರಿದಿನಗಳ ಆಚರಣೆ, ಪರಸ್ಪರ ಶುಭಾಷಯ ಹೇಳುವುದನ್ನು ನಡೆಸಿಕೊಂಡು ಬರಲಾಗುತ್ತಿದೆ. ಅದರಂತೆ ಕ್ರಿಸ್ತ ಜಯಂತಿಯನ್ನು ಸಂಭ್ರಮ ದಿಂದ ಆಚರಿಸೋಣ ಎಂದು ಹೇಳುವ ಮೂಲಕ ನಾಡಿನ ಜನತೆಗೆ ಶುಭಾಷಯ ಕೋರಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next