Advertisement

ಆರೋಗ್ಯ ಸಿಬ್ಬಂದಿಗೂ ಬಂತು ಆತಂಕದ ಸ್ಥಿತಿ?

12:55 PM Apr 20, 2020 | Suhan S |

ಹುಬ್ಬಳ್ಳಿ: ಕೋವಿಡ್‌-19 ಸೋಂಕಿತರು ಹಾಗೂ ಶಂಕಿತರ ಆರೋಗ್ಯ ತಪಾಸಣೆ, ಚಿಕಿತ್ಸೆಯ ಐಸೋಲೇಷನ್‌ ವಾರ್ಡ್‌ ಹಾಗೂ ಕ್ವಾರಂಟೈನ್‌ದಲ್ಲಿ ಸೇವೆ ಸಲ್ಲಿಸುತ್ತಿರುವ ಆರೋಗ್ಯದ ಸಿಬ್ಬಂದಿಯೇ ಈಗ ಆತಂಕದಲ್ಲಿ ಕಾರ್ಯ ನಿರ್ವಹಿಸುವಂತಾಗಿದೆ.

Advertisement

ಐಸೋಲೇಷನ್‌ ವಾರ್ಡ್‌ ಹಾಗೂ ಕ್ವಾರಂಟೈನ್‌ ಗಳಲ್ಲಿ ಏಳು ದಿನಗಳ ಕಾಲ ಕೆಲಸ ಮಾಡುವ ಸ್ಟಾಪ್‌ ನರ್ಸ್‌ ಸಿಬ್ಬಂದಿ 14 ದಿನಗಳ ಕಾಲ ಕ್ವಾರಂಟೈನ್‌ದಲ್ಲಿ ಇರಿಸಬೇಕಾಗಿದೆ. ಆದರೆ ನಗರದ ಕಿಮ್ಸ್‌ ಆಸ್ಪತ್ರೆಯ ಐಸೋಲೇಷನ್‌ ವಾರ್ಡ್‌ ಹಾಗೂ ವಿವಿಧ ಕ್ವಾರಂಟೈನ್‌ ಗಳಲ್ಲಿ ಕೆಲಸ ಮಾಡುವ ಆರೋಗ್ಯ ಸಿಬ್ಬಂದಿಗೆ ಕಳೆದ 25ದಿನಗಳಿಂದ ಅಂದರೆ ಲಾಕ್‌ಡೌನ್‌ ಆದಾಗಿನಿಂದಲೂ ಇದುವರೆಗೂ ಕ್ವಾರಂಟೈನ್‌ ಮಾಡಿಲ್ಲ ಎಂದು ಹೇಳಲಾಗುತ್ತಿದೆ.

ಐಸೋಲೇಷನ್‌ ವಾರ್ಡ್‌ ಮತ್ತು ಕ್ವಾರಂಟೈನ್‌ಗಳಲ್ಲಿ ಕೆಲಸ ಮಾಡುವ ಆರೋಗ್ಯ ಸಿಬ್ಬಂದಿಗೆ ಅವರು ಕೆಲಸ ಮಾಡುತ್ತಿರುವ ಸ್ಥಳದ ಹತ್ತಿರದಲ್ಲೇ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಬೇಕು. ಆದರೆ ಈ ಸ್ಥಳಗಳಲ್ಲಿ ಕೆಲಸ ಮಾಡುವ ಸ್ಟಾಪ್‌ನರ್ಸ್‌ ಸಿಬ್ಬಂದಿ ತಮ್ಮ ಕೆಲಸದ ಅವಧಿ ಮುಗಿದ ಮೇಲೆ ತಮ್ಮ ತಮ್ಮ ಮನೆಗೆ ಹೋಗಬೇಕಾಗಿದೆ. ಅವರ ಮನೆಯಲ್ಲಿ ವೃದ್ಧ ತಂದೆ-ತಾಯಿ ಹಾಗೂ ಮಕ್ಕಳು ಇರುವುದರಿಂದ ಒಂದು ರೀತಿಯ ಆತಂಕ ಆವರಿಸುವಂತೆ ಮಾಡಿದೆ.

ಆರೋಗ್ಯ ಸಿಬ್ಬಂದಿಗೆ ಅವರು ಕಾರ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿ ಇಲ್ಲವೆ ಪ್ರತ್ಯೇಕವಾದ ಬೇರೆ ಖಾಸಗಿ ಹೊಟೇಲ್‌ದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದರೆ ಅವರ ಆರೋಗ್ಯ ಕಾಯ್ದುಕೊಳ್ಳಬಹುದು ಹಾಗೂ ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆಯೂ ಗಮನಹರಿಸಬಹುದಾಗಿದೆ. ಆರೋಗ್ಯ ಸೇವೆ ಮಾಡಲು ನಾವು ಸಿದ್ಧರಿದ್ದೇವೆ. ಆದರೆ ನಮ್ಮ ಆರೋಗ್ಯ ಮತ್ತು ನಮ್ಮ ಕುಟುಂಬದವರ ಆರೋಗ್ಯ ಮುಖ್ಯ. ಆ ನಿಟ್ಟಿನಲ್ಲಿ ಕೊರೊನಾ ವೈರಸ್‌ ನಮಗೂ ಮತ್ತು ನಮ್ಮ ಕುಟುಂಬದವರಿಗೆ ಹರಡದಂತೆ ಸುರಕ್ಷಿತವಾಗಿರಲು ಬಯಸುತ್ತೇವೆ. ಒಂದು ವೇಳೆ ನಮಗೆ ಮತ್ತು ನಮ್ಮ ಕುಟುಂಬದವರಿಗೆ ಸೋಂಕು ತಗುಲಿದರೆ ಅದಕ್ಕೆ ಯಾರು ಜವಾಬ್ದಾರಿ. ಆದ್ದರಿಂದ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟವರು ನಮ್ಮ ಮತ್ತು ನಮ್ಮ ಕುಟುಂಬದವರ ಸುರಕ್ಷತೆ, ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕು ಎಂಬ ಆತಂಕ ಕೆಲ ಆರೋಗ್ಯ ಸಿಬ್ಬಂದಿ ಅನಿಸಿಕೆಯಾಗಿದೆ.

ಪಿಪಿಇ ಕಿಟ್‌ ಕೇಳಿದಾಗ ಕೊಟ್ರಾ: ಐಸೋಲೇಷನ್‌ ವಾರ್ಡ್‌ದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸ್ಟಾರ್ಪ್‌ ನರ್ಸ್‌ಗಳು 15 ದಿನಗಳ ಹಿಂದೆ ಎಚ್‌ಐವಿ ಕಿಟ್‌ ಬಳಸುತ್ತಿದ್ದರು. ಆದರೆ ಇತ್ತೀಚೆಗೆ ತಮಗೂ ವೈಯಕ್ತಿಕ ಸುರಕ್ಷಾ ಉಪಕರಣ (ಪಿಪಿಇ)ದ ಕಿಟ್‌ಗಳು ಬೇಕೆಂದು ಒತ್ತಾಯಿಸಿದಾಗಲೇ ಪಿಪಿಇ ಕಿಟ್‌ಗಳನ್ನು ಕೊಟ್ಟಿದ್ದಾರೆಂದು ಹೇಳಲಾಗುತ್ತಿದೆ. ಅಲ್ಲದೆ ಜಿಲ್ಲೆಯ ಯಾವುದೇ ಪ್ರದೇಶದಲ್ಲೂ ಕೋವಿಡ್-19 ಸೋಂಕಿತರು ಮತ್ತು ಶಂಕಿತರು ಕಂಡು ಬಂದರೆ ಅವರನ್ನು ಕಿಮ್ಸ್‌ ಆಸ್ಪತ್ರೆಗೆ ಕರೆತರಲಾಗುತ್ತದೆ. ಆದರೆ ಇರುವ ಸಿಬ್ಬಂದಿಯಲ್ಲೇ ಕಾರ್ಯ ನಿರ್ವಹಿಸಬೇಕಿದೆ.

Advertisement

ಸರಕಾರ ಪ್ರತಿ ಜಿಲ್ಲೆಯಲ್ಲಿ ತಾತ್ಕಾಲಿಕವಾಗಿ 20 ಸ್ಟಾಪ್‌ ನರ್ಸ್‌ ನೇಮಕ ಮಾಡಿಕೊಳ್ಳಬೇಕೆಂದು ಸೂಚಿಸಿದೆ. ಆದರೆ ಧಾರವಾಡ ಜಿಲ್ಲೆಯಲ್ಲಿ ಐಸೋಲೇಷನ್‌ ವಾರ್ಡ್‌ ಇರುವುದೇ ಕಿಮ್ಸ್‌ ಆಸ್ಪತ್ರೆಯಲ್ಲಿ. ಇಲ್ಲಿಗೆ ಸರಕಾರದ ಮಾರ್ಗಸೂಚಿ ಅನುಸಾರ ಹೆಚ್ಚಿನ ಸ್ಪಾಪ್‌ ನರ್ಸ್‌ಗಳನ್ನು ನಿಯೋಜಿಸಿದ್ದಾರೋ? ಇಲ್ಲವೋ? ಸರಕಾರದ ಆದೇಶ ಜಿಲ್ಲೆಯಲ್ಲಿ ಕಾರ್ಯಗತವಾಗಿದೆಯೋ? ಇಲ್ಲವೋ? ಎಂಬುದು ಗೊತ್ತಾಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕೋವಿಡ್‌-19 ಐಸೋಲೇಷನ್‌ ವಾರ್ಡ್‌ ಇಲ್ಲವೆ ಕ್ವಾರಂಟೈನ್‌ದಲ್ಲಿ ಕೆಲಸ ಮಾಡುತ್ತಿರುವ ಸ್ಟಾಪ್‌ನರ್ಸ್‌, ಆರೋಗ್ಯ ಸಿಬ್ಬಂದಿಗೆ ಪಿಪಿಇ ನೀಡಲಾಗುತ್ತಿದೆ. ಅವರು ಬಯಸಿದರೆ ಅವರ ಕುಟುಂಬದವರ ಆರೋಗ್ಯ, ಸುರಕ್ಷತೆ ದೃಷ್ಟಿಯಿಂದ ಮನೆಗೆ ಹೋಗುವಾಗಲೂ ಪಿಪಿಇ ಕೊಡಲಾಗುವುದು ಹಾಗೂ ಅವರು ತಮ್ಮ ಕುಟುಂಬದವರ ಹಿತಕ್ಕಾಗಿ ಮನೆಗೆ ಹೋಗಲು ಇಷ್ಟ ಪಡದಿದ್ದರೆ ಅವರಿಗೆ ಪ್ರತ್ಯೇಕವಾಗಿ ಖಾಸಗಿ ಹೊಟೇಲ್‌ನಲ್ಲಿ ಇರಲು ವ್ಯವಸ್ಥೆ ಮಾಡಲಾಗುವುದು.  ದೀಪಾ ಚೋಳನ್‌, ಜಿಲ್ಲಾಧಿಕಾರಿ.

 

-ಶಿವಶಂಕರ ಕಂಠಿ

Advertisement

Udayavani is now on Telegram. Click here to join our channel and stay updated with the latest news.

Next