ಹಾಸನ: ಜಿಲ್ಲೆಯಲ್ಲಿ ಇಬ್ಬರು ಕ್ಷೌರಿಕರು, ಮೂವರು ಶಿಕ್ಷಕರು, ಐವರು ಪೌರ ಕಾರ್ಮಿಕರು ಸೇರಿ 31 ಜನರಿಗೆ ಭಾನುವಾರ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಸಮುದಾಯಕ್ಕೆ ಹರಡಿರುವ ಆತಂಕ ಎದುರಾಗಿದೆ. ಮುಂಬೈನಿಂದ ಹಾಸನಕ್ಕೆ ಬಂದಿದ್ದ ಕೋವಿಡ್ 19 ಸೋಂಕಿತ 65 ವರ್ಷದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಕೋವಿಡ್ 19 ಆಸ್ಪತ್ರೆಯಲ್ಲಿ ಭಾನುವಾರ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಈಗ ಕೋವಿಡ್ 19ಗೆ ಬಲಿಯಾದವರ ಸಂಖ್ಯೆ 2ಕ್ಕೇರಿದೆ.
ಸೋಂಕಿತರ ಸಂಖ್ಯೆ 360ಕ್ಕೆ ಏರಿಕೆ: ಜಿಲ್ಲೆಯಲ್ಲಿ ಈಗ ಸೋಂಕಿತರ ಒಟ್ಟು ಸಂಖ್ಯೆ 360ಕ್ಕೇರಿದ್ದು, 238 ಮಂದಿ ಚಿಕಿತ್ಸೆ ಪಡೆದು ಗುಣಮುಖ ರಾಗಿದ್ದಾರೆ. ಆಸ್ಪತ್ರೆಯಲ್ಲಿ ಇನ್ನೂ 120 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಯಾಣದ ಹಿನ್ನೆಲೆ ಇಲ್ಲದವರಲ್ಲೂ ಕೋವಿಡ್ 19 ಸೋಂಕು ಪತ್ತೆಯಾಗುತ್ತಿದ್ದು, ಜಿಲ್ಲೆಯಲ್ಲಿ ಸಮು ದಾಯಕ್ಕೂ ವೈರಸ್ ಹರಡಿರಬಹುದೆಂಬ ಆತಂಕ ಸೃಷ್ಟಿಯಾಗಿದೆ.
ಕ್ಷೌರಿಕರು, ಪೌರ ಕಾರ್ಮಿಕರಿಗೂ ಸೋಂಕು: ಅರಸೀಕೆರೆಯ ಇಬ್ಬರು ಕ್ಷೌರಿಕರು, ಹೊಳೆ ನರಸೀಪುರದ ಐವರು ಪೌರ ಕಾರ್ಮಿಕರು ಹಾಗೂ ಅರಸೀಕೆರೆಯ ಕ್ವಾರಂಟೈನ್ ಕೇಂದ್ರದ ಬಳಿ ಕೆಲಸ ಮಾಡುತ್ತಿದ್ದ ಮೂವರು ಶಿಕ್ಷಕರು ಹಾಗೂ ಒಬ್ಬ ಭದ್ರತಾ ಸಿಬ್ಬಂದಿಗೂ ಕೋವಿಡ್ 19 ಸೋಂಕು ಕಾಣಿಸಿಕೊಂಡಿದೆ. ಜೂ.17ರಂದು ಮೂವರು ಗುಂಪಿನಲ್ಲಿ ಮುಂಬೈನಿಂದ ಬಂದಿದ್ದ ಹಾಸನದ ಉತ್ತರ ಬಡಾವಣೆಯ ಮೂಲದ 65ರ ಹರೆಯದ ವೃದ್ಧೆ ಜೂ.18 ರಂದು ತನ್ನ ಪರಿವಾರ ದವರೊಂದಿಗೆ ಹಾಸನದ ಕೋವಿಡ್ 19 ಆಸ್ಪತ್ರೆಗೆ ದಾಖಲಾಗುತ್ತಿದ್ದರು. ಅದಾಗಲೇ ಜ್ವರದಿಂದ ಬಳಲುತ್ತಿದ್ದ ಆಕೆಗೆ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮೃತಪಟ್ಟಿದ್ದಾರೆ. ಇನ್ನಿಬ್ಬರಿಗೆ ಚಿಕಿತ್ಸೆ ಮುಂದುವರಿದೆ.
ಸೋಂಕು ಹರಡುವ ಮೂಲ ಪತ್ತೆಗೆ ಕ್ರಮ: ಸೋಂಕು ದೃಢಪಟ್ಟಿರುವ ಹಾಸನ ತಾಲೂಕು ಮೂಲದ ಇಬ್ಬರಲ್ಲಿ ಒಬ್ಬರು ಅಂತಾ ರಾಷ್ಟ್ರೀಯ ಪ್ರಯಾಣಿಕನ ಸಂಪರ್ಕ ಹೊಂದಿದ್ದರೆ, ಮತ್ತೂಬ್ಬರು ಗುಜರಾತ್ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಒಬ್ಬರು ಆಂಧ್ರಪ್ರದೇಶ, ನಾಲ್ವರು ಬೆಂಗಳೂರು ಪ್ರಯಾಣದ ಹಿನ್ನೆಲೆ ಹೊಂದಿದ್ದರೆ ಇನ್ನುಳಿದವರು ಸೋಂಕಿತರ ಸಂಪರ್ಕದ ಮೂಲಕ ಕೋವಿಡ್ 19 ಸೋಂಕು ಆಂಟಿಸಿಕೊಂಡಿದ್ದಾರೆ. ಇನ್ನುಳಿದವರಿಗೆ ಯಾವ ಮೂಲದಿಂದ ಸೋಂಕು ಹರಡಿದೆ ಎಂದು ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್‌ಕುಮಾರ್ ತಿಳಿಸಿದ್ದಾರೆ.