Advertisement

ಇ-ಪಾಸ್‌ ವಿಳಂಬದಿಂದ ಮುಂಬಯಿ ಕರಾವಳಿಗರಲ್ಲಿ ಆತಂಕ

10:34 PM May 16, 2020 | Sriram |

ಮಂಗಳೂರು: “ಮುಂಬಯಿಯ ಹಲವೆಡೆ ಸಾವಿರಾರು ಮಂದಿ ಊರಿಗೆ ಬರಲು ಪಾಸ್‌ ಸಿಗದೆ ಸಂಕಷ್ಟದಲ್ಲಿದ್ದಾರೆ. ಕೆಲವರ ಕೈಯಲ್ಲಿ ಹಣ ಕೂಡ ಇಲ್ಲ. ಅವರಿಗೆ ನೆರವಾದವರಿಗೆ ಪುಣ್ಯ ಬರುತ್ತದೆ’.

Advertisement

-ಇದು ಮುಂಬಯಿಯಿಂದ ದಾನಿಯೋರ್ವರು ಮಾಡಿದ ಉಚಿತ ಬಸ್‌ ಸೇವೆಯಿಂದ ಮೇ 15ರಂದು ಸಂಜೆ ಮಂಗಳೂರಿಗೆ ಆಗಮಿಸಿದ ಯುವಕನ ಮನವಿ.

“ಇಬ್ಬರು ವಿದ್ಯಾರ್ಥಿನಿಯರ ಸಹಿತ 15 ಮಂದಿ ಬಂದಿದ್ದೇವೆ. ಅದರಲ್ಲಿ ಇಬ್ಬರು ದ.ಕ. ಜಿಲ್ಲೆಯವರಿದ್ದೆವು. ಉಳಿದವರು ಉಡುಪಿಯವರು. ನಾನು ಪಾಸ್‌ ಪಡೆದುಕೊಂಡು ಬರುವಾಗ ಒಂದು ಆಸನ ಮಾತ್ರ ಖಾಲಿಯಿರು ವುದು ಕಂಡು ಮರುಜನ್ಮ ಸಿಕ್ಕಂತಾಯ್ತು. ಕೈಯಲ್ಲಿದ್ದ ಹಣವೂ ಖಾಲಿಯಾಗಿತ್ತು. ಈಗ ಮಂಗಳೂರು ತಲುಪಿ ಕ್ವಾರಂಟೈನ್‌ನಲ್ಲಿದ್ದೇನೆ. ಆದರೆ ಸಾವಿರಾರು ಮಂದಿ ಪಾಸ್‌ಗಾಗಿ ಎದುರು ನೋಡುತ್ತಿದ್ದಾರೆ. ಯಾವಾಗ ಊರು ತಲುಪುತ್ತೇವೆ ಎಂಬ ಕಾತರ ಅವರಲ್ಲಿದೆ ಎಂದು ಆ ಯುವಕ ಮುಂಬಯಿಯಲ್ಲಿರುವ ಕರಾವಳಿಗರ ಸಂಕಟವನ್ನು ವಿವರಿಸುತ್ತಾನೆ.

ಊರೇ ಸೇಫ್
“ನಾನು ಹೊಟೇಲ್‌ನಲ್ಲಿ ದುಡಿ ಯುತ್ತಿದ್ದೆ. ಹೊಟೇಲ್‌ ಬಂದ್‌ ಆಗಿ 2 ತಿಂಗಳಾಯಿತು. ಮೇ 2ಕ್ಕೆ ಪಾಸ್‌ಗಾಗಿ ಸೇವಾ ಸಿಂಧುವಿನಲ್ಲಿ ನೋಂದಾಯಿಸಿದ್ದೆ. ಮೇ 13ಕ್ಕೆ ಪಾಸ್‌ ಸಿಕ್ಕಿತು. ಮರುದಿನವೇ ನನಗೆ ಬಸ್‌ ಸಿಕ್ಕಿತು. ನನ್ನ ಹಲವು ಗೆಳೆಯರು ನೋಂದಾಯಿಸಿದರು. ಅವರಿಗಿನ್ನೂ ಪಾಸ್‌ ಸಿಕ್ಕಿಲ್ಲ. ಕೋವಿಡ್-19 ಸೋಂಕು ಹೆಚ್ಚಾದರೆ ಮಾಡುವುದೇನು ಎಂಬ ಆತಂಕವೂ ಅವರನ್ನು ಕಾಡುತ್ತಿದೆ. ಒಮ್ಮೆ ಊರಿಗೆ ಬಂದರೆ ಸಾಕು.ಮುಂಬಯಿಗಿಂತ ಊರೇ ಸೇಫ್ ಎಂಬ ಭಾವನೆ ಅವರಲ್ಲಿದೆ. ತೊಂದರೆಗೆ ಸಿಲುಕಿಕೊಂಡಿರುವವರಲ್ಲಿ ಹೆಚ್ಚಿನವರು ಹೊಟೇಲ್‌ ಕಾರ್ಮಿಕರು. ಕೆಲವರು ಟಿಕೆಟ್‌ ಹಣವನ್ನು ಹೇಗಾದರೂ ಮಾಡಿ ಹೊಂದಿಸಿಕೊಳ್ಳಲು ತಯಾರಿದ್ದಾರೆ. ಆದರೆ ಪಾಸ್‌ ಸಿಗುತ್ತಿಲ್ಲ’ ಎನ್ನುತ್ತಾರೆ ಕ್ವಾರಂಟೈನ್‌ನಲ್ಲಿರುವ ಯುವಕ.

“ಮತ್ತೆ ಮುಂಬಯಿಗೆ ಹೋಗುವೆ’
ಕೋವಿಡ್-19 ಸೋಂಕಿನಿಂದ ಮುಂಬಯಿ ಮುಕ್ತವಾಗುವ ವಿಶ್ವಾಸವಿದೆ. ಅನಂತರ ಮುಂಬಯಿಗೆ ತೆರಳಿ, ಬದುಕು ಕಟ್ಟಿಕೊಳ್ಳಲು ಸಿದ್ದರಿದ್ದೇವೆ. ಮುಂಬಯಿಯಿಂದ ಮಂಗಳೂರಿಗೆ ಬರುವಾಗ ಯಾವುದೇ ತೊಂದರೆಯಾಗಿಲ್ಲ.ಗರಿಷ್ಠ ಎಚ್ಚರಿಕೆಯಿಂದ ನಾವಿದ್ದೆವು. ಕ್ವಾರಂಟೈನ್‌ನಲ್ಲಿರುವುದ ರಿಂದಾಗಿ ಯಾರ ಭೇಟಿಗೂ ಮತ್ತು ಯಾರಿಗೂ ತೊಂದರೆ ಯಾಗುವುದಿಲ್ಲ ಎನ್ನುತ್ತಾರೆ ಯುವಕ.

Advertisement

ಪಾಸ್‌ ಇಲ್ಲದೆ ಹೊರಡದಿರಿ
ಮುಂಬಯಿನಲ್ಲಿ ಕೆಲವರು ಊರಿಗೆ ಪಾಸ್‌ ಇಲ್ಲದೆಯೂ ಹೋಗಬಹುದು ಎಂದು ಹೇಳುತ್ತಾರೆ. ಆದರೆ ಇದು ತಪ್ಪು ಮಾಹಿತಿ. ಪಾಸ್‌ ಇಲ್ಲದೆ ಬಂದರೆ ಚೆಕ್‌ಪೋಸ್ಟ್‌ಗಳಲ್ಲಿ ತುಂಬಾ ತೊಂದರೆಯಾಗುತ್ತದೆ.

ತುರ್ತು ಅಗತ್ಯ ಇರುವವರಿಗೆ ಆದ್ಯತೆ
ಇ-ಪಾಸ್‌ ಕಡ್ಡಾಯ. ಈಗ ತುರ್ತು ಅಗತ್ಯ ಇರುವವರಿಗೆ ಉಚಿತ ಬಸ್‌ ವ್ಯವಸ್ಥೆ ಮಾಡಲಾಗಿದೆ. ಸಂಸದ ಗೋಪಾಲ್‌ ಸಿ. ಶೆಟ್ಟಿ ಅವರ ನೆರವಿನಿಂದ ಈ ವ್ಯವಸ್ಥೆ ಮಾಡಲಾಗಿದೆ. ಈ ರೀತಿ ತೊಂದರೆಯಲ್ಲಿರುವವರಿಗೆ ಮತ್ತಷ್ಟು ಮಂದಿ ಕೈ ಜೋಡಿಸಬೇಕಾಗಿದೆ. ಮೇ 5ಕ್ಕೆ ಒಂದು ಉಚಿತ ಬಸ್‌ ಕುಂದಾಪುರಕ್ಕೆ ಕಳುಹಿಸಿಕೊಡಲಾಗಿತ್ತು. ಅನಂತರ ಮೇ 14ಕ್ಕೆ ಮಂಗಳೂರಿಗೆ ಕಳುಹಿಸಿಕೊಡಲಾಗಿದೆ.
-ಎರ್ಮಾಳು ಹರೀಶ್‌ ಶೆಟ್ಟಿ, ಸಮಾಜ ಸೇವಕರು, ಮುಂಬಯಿ

Advertisement

Udayavani is now on Telegram. Click here to join our channel and stay updated with the latest news.

Next