Advertisement
ತುರ್ತು ಪರಿಸ್ಥಿತಿ ವಿರೋಧಿ ದಿನದ ಅಂಗವಾಗಿ ಗಾಂಧಿಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾಹಿತಿ-ಗಣ್ಯರು ತುರ್ತು ಪರಿಸ್ಥಿತಿ ಕುರಿತು ಹಾಗೂ ಪ್ರಸ್ತುತ ಪರಿಸ್ಥಿತಿ ಕುರಿತು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸಿದರು.
Related Articles
Advertisement
ಆಹಾರ ವಿಚಾರದಲ್ಲಿ ದಬ್ಟಾಳಿಕೆ: ಸಾಹಿತಿ ಚಂದ್ರಶೇಖರ್ ಪಾಟೀಲ್ ಮಾತನಾಡಿ, “ಪ್ರಜಾಪ್ರಭುತ್ವದ ಮೂಲಕ ಅಧಿಕಾರಕ್ಕೆ ಬಂದವರೂ ಸಹ ಸರ್ವಾಧಿಕಾರಿ ದಾರಿ ಹಿಡಿಯುತ್ತಿರುವುದನ್ನು ಖಂಡಿಸಬೇಕು. ತುರ್ತು ಪರಿಸ್ಥಿತಿ ಕೇವಲ ಇತಿಹಾಸವಲ್ಲ. ಇಂದಿಗೂ ನಮ್ಮನ್ನು ಭೂತದಂತೆ ಕಾಡುತ್ತಿದೆ. ಇಂದು ಆಹಾರದ ಮೇಲೂ ಕೆಲ ಸಂಘಟನೆಗಳು ದಬ್ಟಾಳಿಕೆ ನಡೆಸುತ್ತಿವೆ. ಕೆಲ ಪ್ರದೇಶಗಳ ಆಹಾರ ಪದ್ದತಿಯನ್ನು ನಿಷೇಧಿಸಬೇಕು ಎಂದು ಒತ್ತಡ ಹೇರುತ್ತಿರುವುದು ಸರಿಯಲ್ಲ. ಲಿಂಗಾಯತ ನಾಯಕರು ದಲಿತರ ಮನೆಗೆ ಹೋಗಿ ಬಾಹ್ಮಣರ ಊಟ ತಿನ್ನುತ್ತಾರೆ ಎಂದು ವ್ಯಂಗ್ಯವಾಡಿದರು.
ತುರ್ತು ಪರಿಸ್ಥಿತಿ ಬಾರದು… ಏಕೆಂದರೆ?: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, “ಅಂದು ತಮ್ಮ ಸ್ಥಾನ ಉಳಿಸಿಕೊಳ್ಳಲು ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದರು. ಅಂದು ಪೊಲೀಸ್ ಶಕ್ತಿಯ ಮೂಲಕ ಜಯಪ್ರಕಾಶ್ ನಾರಾಯಣ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದರು. ಆದರೆ, ಇಂದು ಕೇಂದ್ರ ಸರ್ಕಾರ ಕಾರ್ಪೊರೇಟ್ ಕೈಯಲ್ಲಿದ್ದು, ತುರ್ತು ಪರಿಸ್ಥಿತಿ ಬರುವುದಿಲ್ಲ,’ ಎಂದು ಅಭಿಪ್ರಾಯಪಟ್ಟರು.
“ಎರಡು ರಾಷ್ಟ್ರೀಯ ಪಕ್ಷಗಳು ತಮ್ಮ ಬಲ ಹೆಚ್ಚಿಸಿಕೊಳ್ಳಲು ಮತ್ತು ಸಂಘಟನೆಗಾಗಿ ಅನೈತಿಕ ರಾಜಕಾರಣ ಮಾಡಲು ಹಿಂದೇಟು ಹಾಕಲ್ಲ. ಈ ವಿಚಾರವನ್ನು ನಾನು ಎಳೆ ಎಳೆಯಾಗಿ ಬಿಚ್ಚಿಡಲು ಹೆದರಲ್ಲ. ಸ್ವಾರ್ಥಕ್ಕಾಗಿ ನಾನೆಂದು ರಾಜಕಾರಣ ಮಾಡಿಲ್ಲ. ಎಂತಹ ಪರಿಸ್ಥಿತಿ ಬಂದರೂ ಹಿಂದೆ ತಿರುಗಿ ನೋಡದೆ ಮುಂದೆ ಹೆಜ್ಜೆ ಇಡುತ್ತೇನೆ. ವೈಯಕ್ತಿಕ ಸ್ವಾರ್ಥ ಬಿಟ್ಟು ರಾಜ್ಯದ ಹಿತ ಕಾಪಾಡಬೇಕಿದೆ,’ ಎಂದು ಹೇಳಿದರು.
ಮನೆಗೇ ಬಂದು ಬೆಂಬಲ ಕೇಳಿದರು: ಕಾಂಗ್ರೆಸ್ ರಾಷ್ಟ್ರಪತಿ ಅಭ್ಯರ್ಥಿಗೆ ಬೆಂಬಲ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು, ಮನೆ ಬಾಗಿಲಿಗೆ ಕಾಂಗ್ರೆಸ್ ನಾಯಕರೇ ಬಂದು ಮನವಿ ಮಾಡಿದರು. ಜತೆಗೆ ದಲಿತ ವಿರೋಧಿ ಎಂದು ಬಿಂಬಿಸಿಕೊಳ್ಳಬಾರದು ಅಂತ ಬೆಂಬಲ ನೀಡಿದ್ದೇನೆ ಎಂದು ಸ್ಪಷ್ಟನೆ ನೀಡಿದರು.