Advertisement
ಸದ್ಯ ಮಳೆಗಾಲ ಆರಂಭವಾಗಿದ್ದು ಸಾಂಕ್ರಾಮಿಕ ರೋಗಗಳ ಇನ್ನೂ ಜಾಸ್ತಿಯಾಗುವ ಆತಂಕ ಮನೆಮಾಡಿದೆ. ಕಳೆದ ವರ್ಷ 2019ರಲ್ಲಿ 250 ಜನರಲ್ಲಿ ಡೆಂಘೀ, 121 ಜನರಲ್ಲಿ ಚಿಕೂನ್‌ಗುನ್ಯಾ ದೃಢಪಟ್ಟು ಜನರು ಸಾಕಷ್ಟು ತೊಂದರೆ ಅನುಭವಿಸುವಂತಾಗಿತ್ತು. ಈ ವರ್ಷ ಜನವರಿಯಿಂದ ಮೇವರೆಗೆ ಈ ಐದು ತಿಂಗಳಲ್ಲಿ 18 ಜನರಲ್ಲಿ ಡೆಂಘೀ, 9 ಜನರಲ್ಲಿ ಚಿಕೂನ್‌ಗುನ್ಯಾ ಖಚಿತವಾಗಿದೆ.4 ಜನರಲ್ಲಿ ಮಲೇರಿಯಾ ಕಂಡು ಬಂದಿದೆ. ಮಿದುಳು ಜ್ವರ ಖಚಿತವಾಗಿಲ್ಲ. ತಣ್ಣಗಾದ ಡೆಂಘೀ: 2015ರಲ್ಲಿ 46, 2016ರಲ್ಲಿ 97, 2017ರಲ್ಲಿ 172, 2018ರಲ್ಲಿ 112, 2019ರಲ್ಲಿ 250 ಜನರಲ್ಲಿ ಡೆಂಘೀ ರೋಗ ದೃಢಪಟ್ಟಿತ್ತು. ಈ ವರ್ಷದ ಜನವರಿಯಿಂದ ಮೇ ಅಂತ್ಯದವರೆಗೆ 192 ಜನರನ್ನು ಪರೀಕ್ಷೆಗೊಳಪಡಿಸಿದಾಗ 18 ಜನರಲ್ಲಿ ಡೆಂಘೀ ದೃಢಪಟ್ಟಿದೆ. ಈ ಪೈಕಿ ಹುಬ್ಬಳ್ಳಿ ಗ್ರಾಮೀಣ-1, ಕಲಘಟಗಿ-1, ಕುಂದಗೋಳ- 2, ನವಲಗುಂದ-4, ಧಾರವಾಡದ ಶಹರ1, ಹುಬ್ಬಳ್ಳಿಯ ಶಹರದ 9 ಜನರಲ್ಲಿ ಡೆಂಘೀ ಖಚಿತವಾಗಿದೆ. ಈ ಪೈಕಿ ಮೇ ತಿಂಗಳಲ್ಲಿಯೇ ರೋಗ ಲಕ್ಷಣ ಕಂಡು ಬಂದ 26 ಜನರನ್ನು ತಪಾಸಣೆಗೊಳಪಡಿಸಿದಾಗ ಅವರಲ್ಲಿ ಐದು ಜನರಿಗೆ ರೋಗ ದೃಢಪಟ್ಟಿದೆ. ಇದರಲ್ಲಿ ಹುಬ್ಬಳ್ಳಿ ಗ್ರಾಮೀಣ, ಕುಂದಗೋಳ, ನವಲಗುಂದ ತಲಾ 1ಪ್ರಕರಣವಿದ್ದರೆ, ಹುಬ್ಬಳ್ಳಿ ಶಹರದಲ್ಲಿಯೇ 2 ಪ್ರಕರಣಗಳಿವೆ.
Related Articles
Advertisement
ರೋಗಗಳ ತಡೆಗೆ ಬೇಕು ಮುನ್ನೆಚ್ಚರಿಕೆ : ಡೆಂಘೀ, ಚಿಕೂನ್‌ಗುನ್ಯಾ ಸೊಳ್ಳೆಗಳಿಂದ ಬರುವ ಕಾರಣ ಸೊಳ್ಳೆಯ ಕಡಿವಾಣಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲೇಬೇಕು. ಅದಕ್ಕಾಗಿ ನೀರಿನ ತೊಟ್ಟಿಗಳು, ಡ್ರಮ್, ಬ್ಯಾರಲ್, ಟ್ಯಾಂಕ್‌ಗಳನ್ನು ಭದ್ರವಾಗಿ ಮುಚ್ಚಬೇಕು. ಮನೆ ಮೇಲೆ ಸುತ್ತಮುತ್ತಲಿನ ಮಳೆ ನೀರು ಸಂಗ್ರಹವಾಗುವಂಥ ಪ್ಲಾಸ್ಟಿಕ್ ವಸ್ತುಗಳು, ಟೈಯರ್‌ಗಳು, ಒಡೆದ ತೆಂಗಿನ ಚಿಪ್ಪುಗಳನ್ನು ವಿಲೇವಾರಿ ಮಾಡಬೇಕು. ಏರ್‌ಕೂಲರ್, ಹೂವಿನಕುಂಡ, ಫೈರ್ ಬಕೆಟ್ ಇತ್ಯಾದಿಗಳ ನೀರನ್ನು ಪ್ರತಿ ವಾರ ಖಾಲಿ ಮಾಡಿ, ಒಣಗಿಸಿ ಮತ್ತೆ ಭರ್ತಿ ಮಾಡಬೇಕು. ಹಗಲಿನಲ್ಲಿ ನಿದ್ದೆ ಮಾಡುವ ಅಥವಾ ವಿಶ್ರಾಂತಿ ಪಡೆಯುವವರು ಸೊಳ್ಳೆ ನಿರೋಧಕ ಹಾಗೂ ಸೊಳ್ಳೆ ಪರದೆಯನ್ನು ತಪ್ಪದೇ ಬಳಸಬೇಕು. ಈಗ ಹೆಚ್ಚು ಭಯ ಹುಟ್ಟಿಸಿರುವ ಕೊರೊನಾದಿಂದ ಪಾರಾಗಲು ಸಾಧ್ಯವಾದಷ್ಟು ಮನೆಯಲ್ಲೇ ಸುರಕ್ಷಿತವಾಗಿರುವುದೇ ಒಳ್ಳೆಯದು.
ಬೇಸಿಗೆಯಲ್ಲಿ ಈ ಸಲ ಸಾಂಕ್ರಾಮಿಕ ಹಾವಳಿ ಕಮ್ಮಿಯಾಗಿದ್ದರೂ ಸಹ ಮಳೆಗಾಲದಲ್ಲಿ ಉಲ್ಬಣಗೊಳ್ಳುವ ಸಾಧ್ಯತೆ ಜಾಸ್ತಿ ಇದೆ. ಹೀಗಾಗಿ ಅದಕ್ಕಾಗಿ ಅಗತ್ಯ ಔಷಧೋಪಚಾರ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಸಾರ್ವಜನಿಕರು ಆರೋಗ್ಯ ಕಡೆ ಹೆಚ್ಚು ಗಮನ ನೀಡಬೇಕು. ಮಳೆಗಾಲದಲ್ಲಿ ಕಲುಷಿತ ನೀರಿನ ಸೇವನೆಯಿಂದ ಹೆಚ್ಚಾಗಿ ಅನಾರೋಗ್ಯಕ್ಕೊಳಗಾಗುವ ಪ್ರಮಾಣವೇ ಜಾಸ್ತಿ ಆಗುವ ಕಾರಣ ಅಗತ್ಯ ಸುರಕ್ಷತಾ ಕ್ರಮಗಳನ್ನು ಸಾರ್ವಜನಿಕರು ರೂಢಿಸಿಕೊಳ್ಳುವುದು ಒಳಿತು. –ಡಾ|ಯಶವಂತ ಮದೀನಕರ, ಜಿಲ್ಲಾ ಆರೋಗ್ಯಾಧಿಕಾರಿ, ಧಾರವಾಡ
-ಶಶಿಧರ್ ಬುದ್ನಿ