Advertisement

ಉಕ್ರೇನ್‌ ಸುತ್ತ “ನ್ಯಾಟೋ’ಕವಚ

09:09 PM Jan 24, 2022 | Team Udayavani |

ವಾಷಿಂಗ್ಟನ್‌: ತಾನು ಗಡಿ ವಿವಾದ ಹೊಂದಿರುವ ಉಕ್ರೇನ್‌ನ ಗಡಿಯಲ್ಲಿ ರಷ್ಯಾ ಸರ್ಕಾರ, ಹೇರಳವಾಗಿ ಸೇನೆ ಜಮಾವಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ಹಾಗೂ ಮಿತ್ರ ರಾಷ್ಟ್ರಗಳು ತಮ್ಮ ಸೇನಾ ಒಕ್ಕೂಟವಾದ ನ್ಯಾಟೋ ಪಡೆಯನ್ನು ಉಕ್ರೇನ್‌ನತ್ತ ರವಾನಿಸಿವೆ.

Advertisement

ಈ ಕುರಿತಂತೆ ಅಧಿಕೃತ ಪ್ರಕಟಣೆ ನೀಡಿರುವ ನ್ಯಾಟೋ, ಬಾಲ್ಟಿಕ್‌ ಸಾಗರ ಪ್ರಾಂತ್ಯದಲ್ಲಿ ಕದನ ಏರ್ಪಡುವ ಆತಂಕ ಕವಿದಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ಸದ್ಯದ ಮಟ್ಟಿಗೆ ಉಕ್ರೇನ್‌ನ ಸುತ್ತಲಿನ ರಾಷ್ಟ್ರಗಳಲ್ಲಿ ಅಗತ್ಯ ಮಟ್ಟದಲ್ಲಿ ಪಡೆಗಳನ್ನು ನಿಯೋಜಿಸಿ, ಸೂಕ್ತ ಸಂದರ್ಭದಲ್ಲಿ ಅವನ್ನು ಬಳಸಲಾಗುತ್ತದೆ ಎಂದು ನ್ಯಾಟೋ ತಿಳಿಸಿದೆ.

“ಸಮರ ದೇಣಿಗೆ’
ನ್ಯಾಟೋದ 30 ದೇಶಗಳು ಬಾಲ್ಟಿಕ್‌ ಸಾಗರದಲ್ಲಿ ತಮ್ಮ ಪಡೆಗಳು, ಯುದ್ಧ ವಿಮಾನಗಳು ಅಥವಾ ಶಸ್ತ್ರಾಸ್ತ್ರಗಳನ್ನು ರವಾನಿಸುತ್ತಿವೆ. ಡೆನ್ಮಾರ್ಕ್‌ ಸರ್ಕಾರ, ಉಕ್ರೇನ್‌ನ ಪಕ್ಕದ ರಾಷ್ಟ್ರವಾದ ಲಿಥುಯೇನಿಯಾಕ್ಕೆ ತನ್ನ ಎಫ್-16 ಯುದ್ಧ ವಿಮಾನಗಳನ್ನು ರವಾನಿಸಿದೆ. ಸ್ಪೇನ್‌ ದೇಶವು ಯುದ್ಧ ನೌಕೆಗಳು, ನೌಕಾಪಡೆಯ ಸಿಬ್ಬಂದಿಯನ್ನು, ಫೈಟರ್‌ ಜೆಟ್‌ಗಳನ್ನು ಬಲ್ಗೇರಿಯಾಕ್ಕೆ ರವಾನಿಸಲು ಒಪ್ಪಿದೆ. ಫ್ರಾನ್ಸ್‌ ತನ್ನ ಭೂಸೇನೆಯನ್ನು ಬಲ್ಗೇರಿಯಾಕ್ಕೆ ರವಾನಿಸಲು ಸಜ್ಜಾಗಿದೆ.

ರಾಜತಂತ್ರಜ್ಞರ ತೆರವು
ರಷ್ಯಾವು, ಉಕ್ರೇನ್‌ನ ಗಡಿಯ ಬಳಿ ತನ್ನ ಸೇನಾ ಜಮಾವಣೆಯನ್ನು ಹೆಚ್ಚುಗೊಳಿಸುತ್ತಿರುವ ಮಧ್ಯೆಯೇ ಅಮೆರಿಕ ಸರ್ಕಾರ, ಉಕ್ರೇನ್‌ನಲ್ಲಿರುವ ತನ್ನ ರಾಜತಂತ್ರಜ್ಞರ ಕುಟುಂಬಸ್ಥರು ಕೂಡಲೇ ಆ ದೇಶವನ್ನು ಬಿಡಬೇಕೆಂದು ಸೂಚಿಸಿದೆ. ಇದರ ಜೊತೆಗೆ, ರಾಜತಾಂತ್ರಿಕ ಕಚೇರಿಯಲ್ಲಿನ ಸಹಾಯಕ ಸಿಬ್ಬಂದಿಯೂ ದೇಶ ತೊರೆಯಬೇಕು. ಇವರೆಲ್ಲರ ಪ್ರಯಾಣದ ಖರ್ಚನ್ನು ಅಮೆರಿಕ ಸರ್ಕಾರವೇ ಭರಿಸಲಿದೆ ಎಂದು ವೈಟ್‌ಹೌಸ್‌ ಸೂಚನೆ ನೀಡಿದೆ. ಮತ್ತೂಂದೆಡೆ, ಬ್ರಿಟನ್‌ ಕೂಡ ಉಕ್ರೇನ್‌ನಲ್ಲಿರುವ ತನ್ನ ರಾಜತಾಂತ್ರಿಕ ಸಿಬ್ಬಂದಿ ಹಾಗೂ ಕುಟುಂಬ ಸದಸ್ಯರನ್ನು ಹಿಂದಕ್ಕೆ ಕರೆಯಿಸಿಕೊಳ್ಳುವುದಾಗಿ ತಿಳಿಸಿದೆ.

ಐರ್ಲೆಂಡ್‌ ಕೆಂಗಣ್ಣು
ಉಕ್ರೇನ್‌ನ ವಿರುದ್ಧ ಯುದ್ಧ ನಡೆಸಲು ಸನ್ನದ್ಧವಾಗಿರುವ ರಷ್ಯಾದ ನಡೆ ಖಂಡನಾರ್ಹ. ಇಂಥ ಪ್ರಕ್ಷುಬ್ದ ಸಂದರ್ಭದಲ್ಲಿ ಐರೋಪ್ಯ ಒಕ್ಕೂಟದ ಎಲ್ಲಾ ರಾಷ್ಟ್ರಗಳೂ ಹಿಂದೆಂದೂ ಕಾಣದಂಥ ಒಗ್ಗಟನ್ನು ಪ್ರದರ್ಶಿಸಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ರವರ ಆಟಾಟೋಪಗಳನ್ನು ನಂದಿಸುತ್ತೇವೆ ಎಂದು ಐರ್ಲೆಂಡ್‌ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next