Advertisement

ಆಂಗ್ಲರ ದಾಸ್ಯದ ಭಾಷೆಯಿಂದಲೇ ಕನ್ನಡತನಕ್ಕೆ ಆತಂಕ: ಡಾ| ಶಿಶಿಲ

12:16 AM Mar 25, 2024 | Team Udayavani |

ಮಂಗಳೂರು: ಆಂಗ್ಲರ ದಾಸ್ಯಕ್ಕೆ ಒಳಗಾಗಿರುವುದು ಮತ್ತು ಆಂಗ್ಲ ಭಾಷೆಯ ಮೇಲಿನ ವ್ಯಾಮೋಹದಿಂದಲೇ ಇಂದು ಕನ್ನಡ ಭಾಷೆ ಕಲಿಯುವ, ಮಾತನಾಡುವವರ ಪ್ರಮಾಣ ಕಡಿಮೆಯಾಗುತ್ತಿದೆ. ಕನ್ನಡದ ಮೇಲಿನ ಆಕರ್ಷಣೆಯ ಶಕ್ತಿಯೇ ಕಡಿಮೆಯಾಗುತ್ತಿದೆ ಎಂದು ಹಿರಿಯ ಸಾಹಿತಿ ಡಾ| ಪ್ರಭಾಕರ ಶಿಶಿಲ ಹೇಳಿದರು.

Advertisement

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ನಗರದ ಕುದ್ಮಲ್ ರಂಗರಾವ್‌ ಪುರಭವನದಲ್ಲಿ ಎರಡು ದಿನಗಳ ಕಾಲ ನಡೆದ ಜಿಲ್ಲಾ 26ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರವಿವಾರ ಅವರು ಸಮಾರೋಪ ಭಾಷಣ ಮಾಡಿದರು. ಹತ್ತನೇ ತರಗತಿ ವರೆಗೆ ಏಕರೂಪದ ಶಿಕ್ಷಣದ ಮೂಲಕ ಕನ್ನಡದಲ್ಲೇ ಬೋಧಿಸುವ ವ್ಯವಸ್ಥೆಯಾಗಬೇಕು ಎಂದು ಆಗ್ರಹಿಸಿದರು.

ಭಾಷೆ ಬಡವಾಗದಿರಲು
ಸಮ್ಮೇಳನ ಅಗತ್ಯ
ಸಮ್ಮೇಳನಾಧ್ಯಕ್ಷತೆ ವಹಿಸಿದ್ದ ಭುವನೇಶ್ವರಿ ಹೆಗಡೆ ಮಾತನಾಡಿ, ಇಂತಹ ಸಮ್ಮೇಳನ ಬೇಕೇ? ಇಲ್ಲಿ ವ್ಯಯಿಸುವ ಹಣವನ್ನು ಬಡವರಿಗೆ ನೀಡಬಹುದಲ್ಲಾ ಎನ್ನುವ ಮಾತುಗಳು ಕೇಳಿಬರುತ್ತಿವೆ. “ಬಡತನ’ ನಿವಾರಣೆಗೆ ಹಲವಾರು ಯೋಜನೆಗಳಿವೆ. ಆದರೆ “ಭಾಷೆ ಬಡವಾಗದಿರಲು’ ಇಂತಹ ಸಮ್ಮೇಳನಗಳು ಅಗತ್ಯ. ಕನ್ನಡವೆಂದರೆ ಬರಿ ನುಡಿಯಲ್ಲ, ಅದರ ಅರ್ಥ ಹಿರಿದಾಗಿದೆ ಎಂದು ತೋರಿಸಲು ಜಿಲ್ಲಾ, ತಾಲೂಕು ಸಮ್ಮೇಳನಗಳು ಅತ್ಯವಶ್ಯ. ಕನ್ನಡಿಗರಾದ ನಾವು ಭಾಷೆಯನ್ನು ಪ್ರೀತಿಸುವ ಜತೆಗೆ ಗೌರವಿಸುವುದನ್ನೂ ಅನುಷ್ಠಾನಕ್ಕೆ ತಂದರೆ ಅಕ್ಷರದ ಅಕ್ಕರೆ ಬಂದು ಭಾಷೆ ಬೆಳೆಯುತ್ತದೆ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಡಾ| ಎಂ.ಪಿ. ಶ್ರೀನಾಥ್‌ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ಕಮಲಾದೇವಿಪ್ರಸಾದ ಆಸ್ರಣ್ಣ, ಮಂಗಳೂರು ವಿ.ವಿ. ಎಸ್‌ವಿಪಿ ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ| ಸೋಮಣ್ಣ, ವಿಶ್ವ ದೇವಾಡಿಗರ ಮಹಾಮಂಡಲ ಅಧ್ಯಕ್ಷ ಧರ್ಮಪಾಲ ದೇವಾಡಿಗ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಸಪಾ ಬೆಂಗಳೂರು ಗೌರವ ಕೋಶಾಧ್ಯಕ್ಷ ಬಿ.ಎಂ. ಪಟೇಲ್‌ ಪಾಂಡು. ಕೇಂದ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಡಾ| ಮಾಧವ ಎಂ.ಕೆ., ಮಾರ್ಗದರ್ಶಕ ಸಮಿತಿ ಸದಸ್ಯ ಡಾ| ಮುರಲೀ ಮೋಹನ ಚೂಂತಾರು, ಜಿಲ್ಲಾ ಗೌರವ ಕಾರ್ಯದರ್ಶಿ ವಿನಯ ಆಚಾರ್ಯ, ಮಂಗಳೂರು ತಾಲೂಕು ಅಧ್ಯಕ್ಷ ಮಂಜುನಾಥ ಎಸ್‌. ರೇವಣರ್‌ ಉಪಸ್ಥಿತರಿದ್ದರು.

ಜಿಲ್ಲಾ ಸಂಘಟನ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ಸ್ವಾಗತಿಸಿದರು. ಮೂಡುಬಿದಿರೆ ತಾಲೂಕು ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಮತ್ತು ಕನ್ನಡ ಉಪನ್ಯಾಸಕಿ ಆಶಾಲತಾ ಕಾರ್ಯಕ್ರಮ ನಿರೂಪಿಸಿದರು. ಸಮ್ಮೇಳನ ಸಂಯೋಜನಾ ಸಮಿತಿ ಕಾರ್ಯದರ್ಶಿ ಪುಷ್ಪರಾಜ ಕೆ. ವಂದಿಸಿದರು.

Advertisement

ಸಾಧಕರಿಗೆ ಸಮ್ಮಾನ
ತೋನ್ಸೆ ಪುಷ್ಕಳ ಕುಮಾರ್‌ (ಸಾಂಸ್ಕೃತಿಕ ರಂಗ), ನೇಮು ಪೂಜಾರಿ ಇರಾ (ಸಾಹಿತ್ಯ -ಸಂಘಟನೆ), ನಾರಾಯಣ ಆಚಾರ್ಯ (ಶಿಲ್ಪಕಲೆ), ಕೃಷ್ಣ ಶೆಟ್ಟಿ ಕುಡುಮಲ್ಲಿಗೆ (ಸಾಹಿತ್ಯ), ವೆಂಕಪ್ಪ ನಲಿಕೆ (ದೈವಾರಾಧನೆ), ರಾಜಶ್ರೀ ಉಳ್ಳಾಲ (ಭರತನಾಟ್ಯ), ದಯಾನಂದ ಗುಜರನ್‌ (ಯಕ್ಷಗಾನ), ಡಾ| ಉಮ್ಮರ್‌ ಬೀಜದಕಟ್ಟೆ (ಸಮಾಜ ಸೇವೆ), ಕೆ.ಎಸ್‌. ರಾಧಾಕೃಷ್ಣ (ಶಿಕ್ಷಣ-ಆಡಳಿತ), ವಿವೇಕ್‌ ವಿನ್ಸೆಂಟ್‌ ಪಾಯಸ್‌ (ವ್ಯವಸಮುಕ್ತ ಸಮಾಜ ನಿರ್ಮಾಣ), ವಾಮನ ಕರ್ಕೇರ (ಪತ್ರಿಕೋದ್ಯಮ), ದೇವಿಪ್ರಸಾದ್‌ ಗೌಡ ಕಡಮ್ಮಾಜೆ (ಕೃಷಿ), ದರ್ಶನ್‌ ಗರ್ತಿಕೆರೆ (ಉನ್ನತ ಶಿಕ್ಷಣ ಜಾಗೃತಿ) ಅವರನ್ನು ಸಮ್ಮಾನಿಸಲಾಯಿತು. ಮಂಗಳೂರು ಕೋಡಿಕಲ್‌ನ ಸರಯೂ ಬಾಲ ಯಕ್ಷವೃಂದ ಸಂಸ್ಥೆಯನ್ನು ಗುರುತಿಸಲಾಯಿತು.

ಸಾಹಿತ್ಯ ಸಮ್ಮೇಳನದ ನಿರ್ಣಯಗಳು
1. ಪದವಿಪೂರ್ವ ಶಿಕ್ಷಣದ ಕಲಾವಿಭಾಗದಲ್ಲಿ ಕನ್ನಡ ಐಚ್ಛಿಕವನ್ನು ಸೇರ್ಪಡೆಗೊಳಿಸಲು ಶಿಕ್ಷಣ ಇಲಾಖೆ ಪ್ರೋತ್ಸಾಹ ನೀಡಬೇಕು.
2. ಪದವಿ ಶಿಕ್ಷಣದಲ್ಲಿ ಕನ್ನಡ ಐಚ್ಛಿಕವನ್ನು ಆಯ್ಕೆ ಮಾಡುವ ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾರ್ಥಿವೇತನ ನೀಡಿ ಪ್ರೋತ್ಸಾಹಿಸಬೇಕು.
3. ಶಾಲಾ ಕಾಲೇಜುಗಳ ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ನೀಡಿ ನಿರ್ಭೀತಿಯಿಂದ ವ್ಯಾಸಂಗ ಮಾಡಲು ಅವಕಾಶ ಮಾಡಿಕೊಡುವಂತೆ ಸರಕಾರವನ್ನು ಈ ಸಮ್ಮೇಳನವು ಆಗ್ರಹಿಸುತ್ತದೆ.
4. ಶತಮಾನದ ಇತಿಹಾಸವುಳ್ಳ ಕನ್ನಡ ಶಾಲೆಗಳಿಗೆ ವಿಶೇಷ ಅನುದಾನ ನೀಡಿ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಸರಕಾರ ಗಮನಹರಿಸಬೇಕು.
5. ಈ ಹಿಂದಿನ ಸಮ್ಮೇಳನದಲ್ಲಿ ತೆಗೆದುಕೊಂಡ ಎಲ್ಲ ನಿರ್ಣಯಗಳನ್ನು ಗಂಭಿರವಾಗಿ ಪರಿಗಣಿಸಿ ಸೂಕ್ತ ಕ್ರಮ ಜರಗಿಸಬೇಕು.
6. ಕೇವಲ ಅನುದಾನವೊಂದೇ ಚರ್ಚೆಯ ಆದ್ಯತೆಯಾಗದೇ ಪುಸ್ತಕಗಳನ್ನು ಓದಿಗಾಗಿ ಜನರ ಬಳಿ ಒಯ್ಯುವ ಸಂಚಾರಿ ಗ್ರಂಥಾಲಯ ಯೋಜನೆ ಪುನರಾರಂಭವಾಗಬೇಕು.
7. ದ.ಕ. ಜಿಲ್ಲೆಯುದ್ದಕ್ಕೂ ಇದ್ದ ಖಾಸಗಿ ಗ್ರಂಥಾಲಯಗಳು ಸಾರ್ವಜನಿಕರಲ್ಲಿ ವಾಚನಾಭಿರುಚಿಯನ್ನು ಜೀವಂತವಾಗಿಟ್ಟಿದ್ದವು. ಮಂಗಳೂರಿನ ಕದ್ರಿಯಲ್ಲಿ ಶಾಸ್ತ್ರಿ ಗ್ರಂಥಾಲಯ ಇಂಥದೊಂದು ಅಪರೂಪದ ಸೇವೆ ಮಾಡುತ್ತಿದೆ. ಇಂಥ ಉಚಿತ ವಾಚನಾಲಯಗಳು ಊರೂರಲ್ಲಿ ನಾಗರಿಕ ಪ್ರಪಂಚದ ಸ್ವಾಸ್ಥ್ಯ ರಕ್ಷಕರಾಗಿ ಕೆಲಸ ಮಾಡುವಂತಾಗಬೇಕು.
8. ಮುದ್ರಣ ಮಾಧ್ಯಮದಲ್ಲಿ ತಪ್ಪುಗಳು ನುಸುಳಿದಾಗ ಮುದ್ರಾ ರಾಕ್ಷಸನ ಹಾವಳಿ ಎಂದು ಗೇಲಿ ಮಾಡಲಾಗುತ್ತಿತ್ತು. ಆದರೆ ಇಂದಿನ ಗೂಗಲ್‌ ಆಡಳಿತದಲ್ಲಿ ಭಾಷಾಪಭ್ರಂಶ ಎಗ್ಗಿಲ್ಲದೆ ಮೆರೆಯುತ್ತಿದೆ.
9. ಕನ್ನಡ ಮಾಧ್ಯಮ ಶಾಲೆಗಳ ಮೂಲಸೌಕರ್ಯಗಳನ್ನು ಉತ್ತಮಗೊಳಿಸಿ. ಗುಣಮಟ್ಟದ ಶಿಕ್ಷಣ ನೀಡುವ ಹಾಗೂ ಕನ್ನಡ ಶಾಲೆಗಳನ್ನು ಬಲಪಡಿಸುವ ಪ್ರಯತ್ನಗಳಾಗಬೇಕು.
10. ಏಳು ಕೋಟಿ ಜನಸಂಖ್ಯೆ ಇರುವ ರಾಜ್ಯದಲ್ಲಿ ಹೆಸರಾಂತ ಸಾಹಿತಿಗಳ ಪುಸ್ತಕಗಳು ಸಹ 1 ಸಾವಿರ ಪ್ರತಿ ಮಾರಾಟವಾಗುವುದು ಕಷ್ಟ. ವಿಶ್ವಾದ್ಯಂತ ಇರುವ ಕನ್ನಡಿಗರನ್ನು ತಲುಪುವಂತೆ ಪುಸ್ತಕ ಮಾರಾಟ ಇಲಾಖೆಯೊಂದನ್ನೇ ಆರಂಭಿಸುವುದು ಉತ್ತಮ.
11 ಮಕ್ಕಳಲ್ಲಿ ಕನ್ನಡ ಪ್ರೀತಿಯನ್ನು ಹುಟ್ಟು ಹಾಕಿ, ಮನೆಯಲ್ಲಿ ಕನ್ನಡ ವಾತಾವರಣವನ್ನು ನಿರ್ಮಿಸುವುದು.

Advertisement

Udayavani is now on Telegram. Click here to join our channel and stay updated with the latest news.

Next