Advertisement
ಮಲೆನಾಡು ತಾಲೂಕುಗಳಾದ ಮೂಡಿಗೆರೆ, ನ.ರಾ.ಪುರ, ಕೊಪ್ಪ, ಶೃಂಗೇರಿ ಭಾಗದಲ್ಲಿ 3-4 ದಿನ ಸತತವಾಗಿ ಮಳೆಯಾದ ಹಿನ್ನೆಲೆಯಲ್ಲಿ ಅಲ್ಲಿನ ಕೆರೆಕಟ್ಟುಗಳು ಭರ್ತಿಯಾಗಿವೆ. ಹಳ್ಳಕೊಳ್ಳಗಳು, ತುಂಗಾ, ಭದ್ರಾ, ಹೇಮಾವತಿ ನದಿಗಳು ಕೂಡ ಒಂದೆರಡು ದಿನ ಉಕ್ಕಿ ಹರಿದವು. ಈಗ ಮಳೆ ಸಂಪೂರ್ಣ ಕಡಿಮೆಯಾಗಿದೆ. ಅಲ್ಲಿಲ್ಲಿ ಉದುರು ಮಳೆಯಾಗುತ್ತಿದ್ದು ಬಯಲು ಭಾಗದ ಕಡೂರು, ತರೀಕೆರೆ, ಚಿಕ್ಕಮಗಳೂರು ತಾಲೂಕುಗಳ ಮೇಲೆ ಬರದ ಬರೆ ಮಾಸುವ ಮುನ್ನವೇ ಮತ್ತೆ ಅದರ ಕರಿನೆರಳು ಕಾಣಲಾರಂಭಿಸಿದೆ.
ಮದಗದ ಕೆರೆ ತುಂಬುತ್ತದೆ. ಈ ವರ್ಷವೂ ಕೂಡ ಕೆರೆಯಲ್ಲಿ ಸಾಕಷ್ಟು ನೀರು ತುಂಬಿದೆ. ಸಖರಾಯ ಪಟ್ಟಣದ ಅಯ್ಯನ ಕೆರೆ ಕೂಡ ಇತ್ತೀಚೆನ ಮಳೆಯಿಂದ ಮೈದುಂಬಿಕೊಂಡಿದೆ. ಆದರೆ, ಉಳಿದ ಬಹುತೇಕ ಕೆರೆಗಳು ಈ ಬಾರಿ ತುಂಬುವ ಲಕ್ಷಣಗಳು ಕಾಣುತ್ತಿಲ್ಲ. ಚಿಕ್ಕಮಗಳೂರು ತಾಲೂಕಿನ ಹಲವು ಕೆರೆಗಳಲ್ಲಿ ಗೇಣುದ್ದ ನೀರು ನಿಂತಿರುವುದನ್ನು ಕಾಣಬಹುದು. ಆಗದ ಬಿತ್ತನೆ: ಕಡೂರು ತಾಲೂಕಿನ ಯಗಟಿ, ಸಿಂಗಟಗೆರೆ, ಪಂಚನಹಳ್ಳಿ, ಗಿರಿಯಾಪುರ, ಬೀರೂರು ಭಾಗದಲ್ಲಿ
ಉದುರು ಮಳೆಯಾಗಿದ್ದು ಬರದ ಛಾಯೆ ಇನ್ನೂ ಅಲ್ಲಿ ಮರೆಯಾಗಿಲ್ಲ. ಕೆಲ ರೈತರು ಭೂಮಿ ಹದ ಮಾಡಿಕೊಂಡು ಬಿತ್ತನೆಗಾಗಿ ಕಾದಿದ್ದಾರೆ. ಬೋರ್ ಇದ್ದವರು ಬೆಳೆ ಬಿತ್ತನೆ ಮಾಡಿದ್ದಾರೆ. ಕಳೆದ ಬಾರಿ ಕಡೂರು ಮತ್ತು ತರೀಕೆರೆ ತಾಲೂಕಿನ 4 ಹೋಬಳಿಗಳಲ್ಲಿ ಈರುಳ್ಳಿ ಬೆಳೆಯನ್ನು ಹೆಚ್ಚಾಗಿ ಬೆಳೆದಿದ್ದರು. ಆದರೆ, ಹವಾಮಾನ ವೈಪ್ಯರಿತ್ಯದಿಂದ ಬೆಳೆ
ಕೈಕೊಟ್ಟ ಪರಿಣಾಮ ಬೆಳೆ ನಷ್ಟ ಅನುಭವಿಸಿದ್ದು ಈ ಬಾರಿ ತುಂತುರು ಮಳೆ ನೆಚ್ಚಿಕೊಂಡು ಈರುಳ್ಳಿ ಬಿತ್ತನೆ ಮಾಡುವ ಸಾಹಸಕ್ಕೆ ಕೈಹಾಕಿಲ್ಲ. ಚಿಕ್ಕಮಗಳೂರು ತಾಲೂಕಿನ ಅಂಬಳೆ, ಲಕ್ಯಾ, ಕಸಬಾ ಹೋಬಳಿಗಳಲ್ಲಿ ಕೆಲವರು ಆಲೂಗೆಡ್ಡೆ ಬಿತ್ತನೆ ಮಾಡಿದ್ದು ಸಾಧಾರಣವಾಗಿ ಬಿದ್ದ ಮಳೆ ಆಲೂಗಡ್ಡೆಗೆ ಪೂರಕ ವಾತಾವರಣ ಸೃಷ್ಟಿಸಿದೆ. ಕೆಲವರ
ಬೆಳೆ ನೀರಿಲ್ಲದೆ ಹೂ ಬಿಡಲು ಮೀನ ಮೇಷ ಎಣಿಸುತ್ತಿದೆ. ಕಳಸಾಪುರ ಭಾಗದಲ್ಲಿ ಕಳೆದ ವರ್ಷದ ಬರಗಾಲಕ್ಕೂ ಈಗಿನ ಸ್ಥಿತಿಗೂ ಯಾವುದೇ ವ್ಯತ್ಯಾಸವಿಲ್ಲ. ಒಣಗಿದ ಅಡಕೆ ಮತ್ತು ತೆಂಗಿನ ತೋಟಗಳು, ಹಾಳುಬಿಟ್ಟಿರುವ ಹೊಲಗದ್ದೆಗಳು, ಬೆಳೆ ನಷ್ಟ ಹೊಂದಿ ಮನೆಗೆ ಬೀಗ ಹಾಕಿ ಊರು ತೊರೆದಿರುವ ರೈತರ ಮನೆಗಳು, ಒಣಗಿ ಬಿರುಕುಬಿಟ್ಟಿರುವ ಕೆರೆಯಂಗಳ, ಮೇವು ನೀರಿಗಾಗಿ ಹಪಹಪಿಸುತ್ತಿರುವ ಬಡಕಲು ಜಾನುವಾರುಗಳನ್ನು ಇಂದಿಗೂ ಕಾಣಬಹುದಾಗಿದೆ. ಅಲ್ಲಿ ಮಳೆಯ ದರ್ಶನವೇ ಆಗಿಲ್ಲ. ಆಗಿದ್ದರೂ ತುಂತುರು ಮಾತ್ರ. ಕಳಸಾಪುರ, ಮಾಗಡಿ, ದೊಡ್ಡಕೆರೆಗಳು ಒಣಗಿ ಆಟದ ಮೈದಾನಗಳಾಗಿದ್ದು ಬರದ ಭೀಕರತೆಯನ್ನು ಹೇಳುತ್ತಿವೆ.
Related Articles
Advertisement
ಎಸ್.ಕೆ.ಲಕ್ಷ್ಮೀಪ್ರಸಾದ್