Advertisement

ಚಿನ್ನದ ಮಳಿಗೆಗಳಲ್ಲಿ ಅಕ್ಷಯ ಸಂಭ್ರಮ

12:04 PM Apr 29, 2017 | |

ಬೆಂಗಳೂರು: ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಶುಕ್ರವಾರ ನಗರದಲ್ಲಿ ಜನ ಅಕ್ಷರಶಃ ಚಿನ್ನದ ಅಂಗಡಿಗಳಿಗೆ ಮುಗಿಬಿದ್ದರು. ಬಿಸಿಲ ಬೇಗೆಯ ನಡುವೆಯೂ ಜನ ಅತ್ಯಂತ ಉತ್ಸಾಹದಿಂದ ಚಿನ್ನಾಭರಣಗಳನ್ನು ಖರೀದಿಸಿದರು.  

Advertisement

ಹಳೆ ತೆರಿಗೆ ಪದ್ಧತಿಗೆ ಕೊನೆಯ ಅಕ್ಷಯ ತೃತೀಯ ಇದಾಗಿತ್ತು. ಅಂದರೆ, ಈವರೆಗೆ ಚಿನ್ನ ಖರೀದಿಸಿದರೆ ಶೇ. 1ರಷ್ಟು ವ್ಯಾಟ್‌ ನೀಡಬೇಕಿತ್ತು. ಆದರೆ ಕೇಂದ್ರ ಸರಕಾರ ಇದನ್ನು ರದ್ದುಪಡಿಸಿ ಜುಲೈ 1ರಿಂದ ಜಿಎಸ್‌ಟಿ ಜಾರಿಗೆ ತರುತ್ತಿದ್ದು, ಚಿನ್ನ ಖರೀದಿದಾರರಿಗೆ ಶೇ. 3-5ರಷ್ಟು ತೆರಿಗೆ ಹೊರೆಬೀಳುವ ಸಾಧ್ಯತೆಯಿದೆ ಎಂಬುದು ಲೆಕ್ಕಾಚಾರ. ಆದ್ದರಿಂದ ಖರೀದಿ ಭರಾಟೆ ಜೋರಾಗಿತ್ತು. 

ಈ ಮಧ್ಯೆ ಅಕ್ಷಯ ತೃತೀಯ ಈ ಸಲ ಎರಡು ದಿನಗಳು ಬಂದಿದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚು ಚಿನ್ನ ಮತ್ತು ಚಿನ್ನ ಬೆಳ್ಳಿ ಖರೀದಿಗೆ ಜನ ಆಸಕ್ತಿ ಹೊಂದಿದ್ದು, ಶೇ. 20ರಷ್ಟು ಹೆಚ್ಚು ಖರೀದಿ ಆಗಿರುವ ಸಾಧ್ಯತೆ ಇದೆ. ಶನಿವಾರ ಕೂಡ ಚಿನ್ನದ ಖರೀದಿ ಭರಾಟೆ ಜೋರು ಇರಲಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. 

ತಂಪು ಪಾನೀಯ; ಪೂಜಾ ವ್ಯವಸ್ಥೆ: ಚಿನ್ನಾಭರಣ ಮಳಿಗೆಗಳು ತಳಿರು-ತೋರಣಗಳಿಂದ ಸಿಂಗಾರಗೊಂಡಿದ್ದವು. ಇನ್ನೂ ಕೆಲವು ಮಳಿಗೆಗಳಲ್ಲಿ ಗ್ರಾಹಕರನ್ನು ಸೆಳೆಯಲು ಉಡುಗೊರೆಗಳನ್ನು ನೀಡಲಾಗುತ್ತಿತ್ತು. ಬಂಗಾರ ಖರೀದಿಗಾಗಿ ಬಿಸಿಲಲ್ಲಿ ದಣಿದು ಬರುವ ಗ್ರಾಹಕರಿಗೆ ಹೊರ ಭಾಗದಲ್ಲೇ ಮಜ್ಜಿಗೆ ಮತ್ತಿತರ ತಂಪು ಪಾನೀಯ ಕೊಟ್ಟು ತೃಪ್ತಿಪಡಿಸುತ್ತಿರುವುದೂ ಕಂಡುಬಂತು. 

ಜಾಯ್‌ ಅಲುಕ್ಕಾಸ್‌ ಮತ್ತಿತರ ಆಭರಣ ಮಳಿಗೆಗಳಲ್ಲಿ ಪೂಜೆಗೆ ವ್ಯವಸ್ಥೆ ಮಾಡಲಾಗಿತ್ತು. ಮಳಿಗೆಗಳಲ್ಲಿ ಪುರೋಹಿತರನ್ನು ನಿಯೋಜಿಸಲಾಗಿತ್ತು. ಆಭರಣ ಖರೀದಿಸುವ ಗ್ರಾಹಕರು, ಮನೆಗೊಯ್ಯುವ ಮುನ್ನ ಮಳಿಗೆಗಳಲ್ಲೇ ಶಾಸ್ತ್ರಬದ್ಧವಾಗಿ ಅವುಗಳನ್ನು ಪೂಜಿಸಿದ್ದು ವಿಶೇಷವಾಗಿತ್ತು. 

Advertisement

ಕಳೆದ ವರ್ಷ 640 ಕೋಟಿ ವಹಿವಾಟು!: ಚಿನ್ನ ಖರೀದಿಗೆ ಬಂದವರಲ್ಲಿ ಕೆಲವರು ಮುಂಗಡವಾಗಿ ಕಾಯ್ದಿರಿಸಿದ್ದರೆ, ಇನ್ನು ಕೆಲವರು ವರ್ಷದಿಂದ ಈ ಶುಭದಿನದಂದು ಆಭರಣ ಖರೀದಿಗಾಗಿ ಮಾಸಿಕ ಕಂತಿನಲ್ಲಿ ಹಣ ಕೂಡಿಟ್ಟವರು ಇದ್ದರು. 2016ರ ಅಕ್ಷಯ ತೃತೀಯದಂದು ರಾಜ್ಯಾದ್ಯಂತ 2,200 ಕೆಜಿ ಚಿನ್ನ ಹಾಗೂ 1,500 ಕೆಜಿ ಬೆಳ್ಳಿ ಆಭರಣಗಳ ಖರೀದಿ ನಡೆದಿದ್ದು, 640 ಕೋಟಿ ರೂ. ವಹಿವಾಟು ನಡೆದಿತ್ತು.

ಈ ಬಾರಿ ಶೇ.20ರಷ್ಟು ಅಕ ಚಿನ್ನ-ಬೆಳ್ಳಿ ಖರೀದಿ ನಡೆಯಲಿದೆ ಎಂದು ಚಿನ್ನದ ವ್ಯಾಪಾರಿಗಳು ಅಂದಾಜಿಸಿದ್ದಾರೆ. ಚಿನ್ನದ ಖರೀದಿ ಭರಾಟೆ ಜೋರಾಗಿದ್ದ ಹಿನ್ನೆಲೆಯಲ್ಲಿ ಬೆಳಗ್ಗೆ 8ರಿಂದಲೇ ಬಹುತೇಕ ಆಭರಣ ಮಳಿಗೆಗಳು ತೆರೆದಿದ್ದವು. ರಾತ್ರಿ 10ರ ನಂತರವೂ ವ್ಯಾಪಾರ-ವಹಿವಾಟು ಜೋರಾಗಿತ್ತು. ಶನಿವಾರವೂ ಅಕ್ಷಯ ತೃತೀಯವಿದ್ದು, ಮಾರಾಟ ಪ್ರಕ್ರಿಯೆ ಬೆಳಗ್ಗೆಯಿಂದಲೇ ಆರಂಭವಾಗಲಿದೆ.

ಪ್ರತಿ ಬಾರಿಯಂತೆ ಈ ಬಾರಿಯೂ ಹಲವು ಮಳಿಗೆಗಳಲ್ಲಿ ಅಕ್ಷಯ ತೃತೀಯಕ್ಕೆಂದೇ ವಿಶೇಷವಾಗಿ ಒಂದು ಗ್ರಾಂನ ಚಿನ್ನದ ನಾಣ್ಯಗಳನ್ನು ಮಾರಾಟ ಮಾಡಲಾಯಿತು. ಹೂಡಿಕೆ ಮಾಡುವವರು 10-20 ಗ್ರಾಂ ಹೀಗೆ ಕಚ್ಚಾ ಚಿನ್ನ (ಬುಲಿಯನ್‌) ಖರೀದಿಸಿದರು. ಮದುವೆ ಮತ್ತಿತರ ಸಮಾರಂಭಗಳ ಹಿನ್ನೆಲೆಯಲ್ಲಿ ಓಲೆ, ನೆಕ್ಲೆಸ್‌, ಲಾಂಗ್‌ ಸರ, ಕಾಸಿನ ಸರ, ಬಳೆ ಹೀಗೆ ಸಾಂಪ್ರದಾಯಿಕ ಆಭರಣಗಳಿಗೆ ಹೆಚ್ಚು ಬೇಡಿಕೆ ಇತ್ತು. 

ಜಯನಗರ ಶಾಖೆಯಲ್ಲಿ ಕಳವು: ಆರ್‌.ಆರ್‌ ಗೋಲ್ಡ್‌ ಪ್ಯಾಲೇಸ್‌ನ ಜಯನಗರದ ಶಾಖೆಗೆ ಗ್ರಾಹಕರ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ಅಸಲಿ ಚಿನ್ನದ ಸರ ಕದ್ದು ನಕಲಿ ಸರ ಇಟ್ಟು ಪರಾರಿಯಾಗಿದ್ದಾನೆ. ಶುಕ್ರವಾರ ಬೆಳಗ್ಗೆ ಚಿನ್ನಾಭರಣ ಮಳಿಗೆಗೆ ಹೋಗಿದ್ದ ವ್ಯಕ್ತಿ 1.80 ಲಕ್ಷ ಮೌಲ್ಯದ 60 ಗ್ರಾಂ ತೂಕದ ಚಿನ್ನದ ಸರವನ್ನು ಕಳ್ಳತನ ಮಾಡಿ,  ಅದೇ ಮಾದರಿಯ ನಕಲಿ ಸರ ಇಟ್ಟು, ಯಾವುದೇ ಆಭರಣ ಖರೀದಿಸದೆ ನಾಪತ್ತೆಯಾಗಿದ್ದಾನೆ. ಸಂಜೆ ಎಲ್ಲ ಸರಗಳನ್ನು ಜೋಡಿಸುವಾಗ ಸರದಲ್ಲಿ ಬಾರ್‌ ಕೋಡ್‌ ಇಲ್ಲದಿರುವುದನ್ನು ಗಮನಿಸಿ ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಖರೀದಿ ಮಾತ್ರವಲ್ಲ ಕಳ್ಳತ‌ನವೂ ನಡೆದಿದೆ
ಬೆಂಗಳೂರು:
ಗ್ರಾಹಕರ ಸೋಗಿನಲ್ಲಿ ಚಿನ್ನದ ಸರ ಕಳವಿಗೆ ಯತ್ನಿಸಿದ ವ್ಯಕ್ತಿಯನ್ನು ಚಿನ್ನಾಭರಣ ಮಳಿಗೆ ಸಿಬ್ಬಂದಿಯೇ ಹಿಡಿದು ಥಳಿಸಿ ಪೊಲೀಸರಿಗೊಪ್ಪಿಸಿದ ಘಟನೆ ಶುಕ್ರವಾರ ಮಧ್ಯಾಹ್ನ ಮಲ್ಲೇಶ್ವರದ ಆರ್‌.ಆರ್‌.ಗೋಲ್ಡ್‌ ಪ್ಯಾಲೇಸ್‌ನಲ್ಲಿ ನಡೆದಿದೆ.

ಕಿಶೋರ್‌(30) ಬಂತ ಆರೋಪಿ. ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಆರ್‌.ಆರ್‌.ಗೋಲ್ಡ್‌ ಪ್ಯಾಲೇಸ್‌ಗೆ ಬಂದ ಆರೋಪಿ ಸರ ಖರೀದಿಸುವುದಾಗಿ ಹೇಳಿ, ಹತ್ತಾರು ಸರಗಳನ್ನು ನೋಡಿದ್ದಾನೆ. ಇದೇ ವೇಳೆ ಮಹಿಳಾ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಸುಮಾರು 80 ಸಾವಿರ ಮೌಲ್ಯದ 24 ಗ್ರಾಂ ತೂಕದ ಸರವನ್ನು ತನ್ನ ಕೈ ಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾನೆ.

ಬಳಿಕ ಕಾರು ಚಾಲಕನಿಗೆ ಕರೆ ಮಾಡುವಂತೆ ನಾಟಕವಾಡಿ, ಹಣ ಅಥವಾ ಕ್ರಿಡಿಟ್‌, ಡೆಬಿಟ್‌ ಕಾರ್ಡ್‌ ತರುವಂತೆ ಸೂಚಿಸುತ್ತಿರುವಂತೆ ಮಾತನಾಡಿದ್ದಾನೆ. ಈತನ ಗೊಂದಲದ ಮಾತುಗಳನ್ನು ಗಮನಿಸಿದ ಸಿಬ್ಬಂದಿಯೊಬ್ಬರು ಮಳಿಗೆಯ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದ್ದಾರೆ. ನಂತರ ಮುಷ್ಠಿಯಲ್ಲಿದ್ದ ಸರವನ್ನು ತನ್ನ ಬೇಬಿಗೆ ಇಳಿಸಿಕೊಂಡಿದ್ದಾನೆ.

ಇದನ್ನು ಸಿಸಿಟಿವಿಯಲ್ಲಿ ಸೂಕ್ಷ್ಮವಾಗಿ ಗಮನಿಸಿದಾಗ ಕಳ್ಳನ ಕೈ ಚಳಕು ಗೊತ್ತಾಗಿದೆ. ಆರೋಪಿ ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಮಳಿಗೆಯ ವ್ಯವಸ್ಥಾಪಕರು ಹಿಡಿದು ತಪಾಸಣೆ ನಡೆಸಿದಾಗ ಜೇಬಿನಲ್ಲಿ ಚಿನ್ನದ ಸರ ಪತ್ತೆಯಾಗಿದೆ. ಬಳಿಕ ಆತನನ್ನು ಥಳಿಸಿ ಮಲ್ಲೇಶ್ವರ ಠಾಣೆ ಪೊಲೀಸರಿಗೊಪ್ಪಿಸಿದ್ದಾರೆ. ಠಾಣೆಯಲ್ಲಿ ಆರೋಪಿಯ ವಿರುದ್ಧ ಕಳ್ಳತನ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next