Advertisement

ಜಿಲ್ಲೆಯಲ್ಲಿ ಆನೆಕಾಲು ರೋಗದ ಆತಂಕ

12:45 PM Aug 02, 2019 | Suhan S |

ರಾಮನಗರ: ಸೊಳ್ಳೆಯಿಂದ ಡೆಂಘೀ, ಚಿಕೂನ್‌ಗುನ್ಯಾ, ಮಲೇರಿಯಾ ರೋಗಗಳು ಹರಡುತ್ತಿರುವ ಆತಂಕದ ನಡುವೆ ಜಿಲ್ಲೆಗೆ ವಲಸೆ ಬಂದಿರುವ ಕಾರ್ಮಿಕರ ಪೈಕಿ ಕೆಲವರಲ್ಲಿ ಆನೆಕಾಲು (ಫಿಲೇರಿಯಾಸಿಸ್‌ ಅಥವಾ ಎಲಿಫೆಂಟಿಯಾಸಿಸ್‌) ರೋಗದ ಪ್ರಕರಣಗಳು ಕಂಡು ಬಂದಿದೆ. ರೋಗ ಹರಡದಂತೆ ಜಿಲ್ಲಾ ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸಿದೆ.

Advertisement

ರಾಮನಗರ ಜಿಲ್ಲೆಯಲ್ಲಿ ಆನೆಕಾಲು ರೋಗಕ್ಕೆ ಕಾರಣವಾಗುವ ಪೂರಕ ವಾತಾವರಣ ಮತ್ತು ಪರಿಸರ ಇಲ್ಲ. ಆದರೆ, ವಲಸೆ ಬಂದಿರುವ ವ್ಯಕ್ತಿಗಳಲ್ಲಿ ಈ ರೋಗವಿದ್ದು, ಅವರನ್ನು ಕಚ್ಚಿದ ಸೊಳ್ಳೆಗಳು ರೋಗವನ್ನು ಹರಡುವ ಆತಂಕವನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

2019ರ ಜನವರಿ ತಿಂಗಳಿಂದ ಜುಲೈ ಅಂತ್ಯದವರೆಗೆ ಜಿಲ್ಲೆಯಲ್ಲಿ 20 ಪ್ರಕರಣಗಳು ಪತ್ತೆಯಾಗಿವೆ. ಆರೋಗ್ಯ ಇಲಾಖೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಉತ್ತರ ಭಾರತದ ಕೆಲ ರಾಜ್ಯಗಳು ಮತ್ತು ರಾಜ್ಯದ ಉತ್ತರ ಭಾಗದ ಜಿಲ್ಲೆಗಳಲ್ಲಿ ಆನೆಕಾಲು ರೋಗ ಪೀಡಿತರು ಹೆಚ್ಚಾಗಿದ್ದಾರೆ. ಹೀಗಾಗಿ ಆ ಭಾಗಗಳಿಂದ ಜಿಲ್ಲೆಗೆ ವಲಸೆ ಬಂದಿರುವವರಲ್ಲಿ ಆನೆಕಾಲು ರೋಗಕ್ಕೆ ಕಾರಣವಾಗುವ ಲಾರ್ವ ಪತ್ತೆ ಹಚ್ಚಲು ಆರೋಗ್ಯ ಇಲಾಖೆ ಮುಂದಾಗಿದೆ.

2018ರಲ್ಲಿ 67 ಪ್ರಕರಣಗಳು ಪತ್ತೆ: ಕಳೆದ ವರ್ಷ ಜಿಲ್ಲೆಯಲ್ಲಿ 67 ಪ್ರಕರಣಗಳು ಪತ್ತೆಯಾಗಿದ್ದವು. ರಾಮನಗರ ತಾಲೂಕಿನಲ್ಲಿ 32, ಚನ್ನಪಟ್ಟಣದಲ್ಲಿ 13, ಕನಕಪುರದಲ್ಲಿ 8 ಮತ್ತು ಮಾಗಡಿ ತಾಲೂಕಿನಲ್ಲಿ 14 ಪ್ರಕರಣಗಳು ಪತ್ತೆಯಾಗಿದ್ದವು. ರೋಗ ಪತ್ತೆಯಾಗಿದ್ದ ಎಲ್ಲಾ 67 ಮಂದಿಗೂ ಚಿಕಿತ್ಸೆ ಆರಂಭಿಸಲಾಗಿದೆ. ಈ ಪೈಕಿ 6 ಮಂದಿ ರಾಮನಗರ ಜಿಲ್ಲೆಯಿಂದ ಹೊರ ಹೋಗಿದ್ದು, ಉಳಿದವರಿಗೆ ಚಿಕಿತ್ಸೆ ಪ್ರಗತಿಯಲ್ಲಿದೆ.

ಉತ್ತರ ಭಾರತ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಕಟ್ಟಡ ನಿರ್ಮಾಣ, ರಸ್ತೆ ನಿರ್ಮಾಣ ಇತ್ಯಾದಿ ಕಾಮಗಾರಿಗೆ ಆಗಮಿಸಿರುವ ಕೂಲಿ ಕಾರ್ಮಿಕರಲ್ಲೇ ಈ ರೋಗ ಕಂಡು ಬಂದಿದೆ. ಬೆಂಗಳೂರು – ಮೈಸೂರು ಹೆದ್ದಾರಿ ಬೈಪಾಸ್‌, ರಸ್ತೆ ವಿಸ್ತೀರ್ಣ ಕಾಮಗಾರಿಗೆ ವಲಸೆ ಬಂದಿರುವ ಕಾರ್ಮಿಕರು, ದೊಡ್ಡ ಕಟ್ಟಡಗಳ ನಿರ್ಮಾಣ ಕಾರ್ಮಿಕರಲ್ಲಿ ಆನೇಕಾಲು ರೋಗ ಪತ್ತೆಯಾಗಿದೆ.

Advertisement

ರಾತ್ರಿ ವೇಳೆ ರಕ್ತ ಪರೀಕ್ಷೆ ಏಕೆ?: ಮಾನವನ ದೇಹವನ್ನು ಸೇರಿದ ಫಿಲೇರಿಯಾ ಲಾರ್ವ ದಿನದ ಎಲ್ಲಾ ಸಮಯದಲ್ಲೂ ರಕ್ತದಲ್ಲಿ ಪತ್ತೆಯಾಗುವುದಿಲ್ಲ ಎಂಬುದು ವಿಶೇಷ ಅಂಶ. ದಿನ ಪೂರ್ತಿ ಅಡಗಿ ಕುಳಿತುಕೊಳ್ಳುವ ಅವು ರಾತ್ರಿ 8.30ರಿಂದ 12 ಗಂಟೆ ಸಮಯದಲ್ಲಿ ರಕ್ತದಲ್ಲಿ ಕಾಣಿಸಿಕೊಳ್ಳುತ್ತವೆ. ಹೀಗಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ನಿದ್ದೆಗೆಟ್ಟು ನಿರ್ಮಾಣ ಕಾಮಗಾರಿ ಸ್ಥಳಗಳಿಗೆ ತೆರಳಿ ಅಲ್ಲಿ ವಿಶ್ರಾಂತಿ ಪಡೆಯುವ ಕಾರ್ಮಿಕರಿಂದ ರಕ್ತಲೇಪನ (ಸ್ಮಿಯರ್‌) ಸಂಗ್ರಹಿಸುವ ಶ್ರಮಪಡಬೇಕಾಗಿದೆ. ರೋಗದ ಬಗ್ಗೆ ಅವರಿಗೆ ತಿಳುವಳಿಕೆ ಕೊಟ್ಟು, ಅವರಿಂದ ರಕ್ತ ಪಡೆಯುವುದು ದೊಡ್ಡ ಸಾಹಸ ಎಂದು ಗುರುತಿಸಿಕೊಳ್ಳಲು ಇಚ್ಚಿಸದ ಆರೋಗ್ಯ ಇಲಾಖೆಯ ಅಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ.

ರೋಗ ಲಕ್ಷಣವಿದ್ದರೆ ಆಸ್ಪತ್ರೆ ಸಂಪರ್ಕಿಸಿ: ಆನೆಕಾಲು ರೋಗದ ಲಕ್ಷಣಗಳೆಂದರೆ ಕೈಕಾಲು ಊದಿಕೊಳ್ಳುವುದು. ಗಂಡಸರಲ್ಲಿ ವೃಷಣಗಳು ಸಹ ಊದಿಕೊಳ್ಳುವುದು ರೋಗ ಲಕ್ಷಣ. ಒಮ್ಮೆ ಕೈ, ಕಾಲು, ವೃಷಣ ಊದಿಕೊಂಡರೆ ಜೀವನ ಪೂರ್ತಿ ಊತ ಕಡಿಮೆಯಾಗುವುದಿಲ್ಲ. ಹೀಗಾಗಿ ಈ ಲಕ್ಷಣಗಳು ಕಂಡು ಬಂದಾಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಯನ್ನು ಸಂಪರ್ಕಿಸುವುದು ಒಳಿತು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಲಾರ್ವ ಇದ್ದರೂ ಲಕ್ಷಣ ಗೋಚರಿಸಲ್ಲ:

ಆನೆಕಾಲು ರೋಗವನ್ನು ಕ್ಯುಲೆಕ್ಸ್‌ ಸೊಳ್ಳೆಗಳು ಹರಡುತ್ತವೆ. ಈ ರೋಗ ಇರುವ ವ್ಯಕ್ತಿಯ ರಕ್ತ ಹೀರಿಕೊಳ್ಳುವಾಗ ರಕ್ತದ ಜೊತೆಗೆ ರೋಗಕ್ಕೆ ಕಾರಣವಾಗುವ ಫಿಲೇರಿಯಾ ಲಾರ್ವ ಸೊಳ್ಳೆಯನ್ನು ಸೇರುತ್ತದೆ. ನಂತರ ಇದೇ ಸೊಳ್ಳೆಗಳು ಆರೋಗ್ಯವಂತ ವ್ಯಕ್ತಿಯನ್ನು ಕಚ್ಚಿದಾಗ ಫಿಲೇರಿಯಾ ಲಾರ್ವ ಆ ವ್ಯಕ್ತಿಯ ದೇಹದ ರಕ್ತವನ್ನು ಸೇರುತ್ತದೆ. ಹೀಗೆ ರಕ್ತ ಸೇರಿದ ಲಾರ್ವ ತತ್‌ಕ್ಷಣದಿಂದಲೇ ತಮ್ಮ ಪ್ರಭಾವ ಬೀರುವುದಿಲ್ಲ! ಕೆಲವೊಮ್ಮೆ ಹಲವಾರು ಹಲವಾರು ವರ್ಷಗಳ ಸರಿದರು ರೋಗ ಲಕ್ಷಣಗಳೇ ಕಾಣಿಸಿಕೊಳ್ಳುವುದಿಲ್ಲ.
ಕಳೆದ 7 ತಿಂಗಳಲ್ಲಿ 20 ಪ್ರಕರಣಗಳು ಪತ್ತೆ:

ರಾಮನಗರ ತಾಲೂಕಿನಲ್ಲಿ ಈ ಅವಧಿ ಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿ ಗಳು, ಸಿಬ್ಬಂದಿ 2215 ಮಂದಿಯಿಂದ ರಕ್ತಲೇಪನ (ಬ್ಲಿಡ್‌ ಸ್ಮಿಯರ್‌) ಪಡೆದುಕೊಂಡಿದ್ದರು. ಈ ಪೈಕಿ 16 ಮಂದಿಗೆ ಆನೇಕಾಲು ರೋಗ ಇರುವುದು ದೃಢಪಟ್ಟಿದೆ. ಚನ್ನಪಟ್ಟಣದಲ್ಲಿ 437 ರಕ್ತಲೇಪನಗಳ ಪೈಕಿ 2, ಕನಕಪುರದಲ್ಲಿ 254 ರಕ್ತಲೇಪನದ ಪೈಕಿ 2 ಮತ್ತು ಮಾಗಡಿ ತಾಲೂಕಿನಲ್ಲಿ 356 ರಕ್ತಲೇಪನಗಳ ಪೈಕಿ ಶೂನ್ಯ ಪ್ರಕರಣಗಳು ಪತ್ತೆಯಾಗಿವೆ.
● ಬಿ.ವಿ.ಸೂರ್ಯ ಪ್ರಕಾಶ್‌
Advertisement

Udayavani is now on Telegram. Click here to join our channel and stay updated with the latest news.

Next