Advertisement

Anwar M*rder Case: 6 ವರ್ಷ ಹಿಂದಿನ ಪ್ರಕರಣದ ತನಿಖೆಗೆ ಇಳಿದ ಎಡಿಜಿಪಿ ಬಿ.ಕೆ.ಸಿಂಗ್

05:33 PM Oct 26, 2024 | Team Udayavani |

ಚಿಕ್ಕಮಗಳೂರು: ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಅನ್ವರ್ ಕೊಲೆಯಾಗಿ ಆರು ವರ್ಷ ಕಳೆದಿದ್ದು ಇದುವರೆಗೂ ಕೊಲೆಗಾರರ ಪತ್ತೆಯಾಗಿಲ್ಲ, ಈ ಹಿನ್ನೆಲೆಯಲ್ಲಿ ಎಡಿಜಿಪಿ ಬಿ.ಕೆ. ಸಿಂಗ್ ಪ್ರಕರಣದ ತನಿಖೆಗೆ ಇಳಿದಿದ್ದು ಶನಿವಾರ ನಗರಕ್ಕೆ ಆಗಮಿಸಿದ ಅವರು ಮಾಹಿತಿ ಕಲೆ ಹಾಕಿದ್ದಾರೆ.

Advertisement

ಬಿಜೆಪಿ ಮುಖಂಡ ಅನ್ವರ್ ಅವರನ್ನು 2018 ಜೂ.22 ರಂದು ಗೌರಿ ಕಾಲುವೆ ಬಡಾವಣೆಯಲ್ಲಿನ ಅವರ ಮನೆ ಸಮೀಪದಲ್ಲಿ ಕೊಲೆ ಮಾಡಲಾಗಿತ್ತು. ಈ ಕೊಲೆ ಪ್ರಕರಣ ಇಡೀ ಚಿಕ್ಕಮಗಳೂರು ನಗರವನ್ನು ಬೆಚ್ಚಿ ಬೀಳಿಸಿತ್ತು. ಈ ಪ್ರಕರಣವನ್ನು 2019ರಲ್ಲಿ ಅಂದಿನ ಬಿಜೆಪಿ ಸರ್ಕಾರ ಸಿಐಡಿಗೆ ವಹಿಸಿತ್ತು. ಆದರೂ ಅನ್ವರ್ ಕೊಲೆ ಪ್ರಕರಣದ ಆರೋಪಿಗಳ ಪತ್ತೆ ಸಾಧ್ಯವಾಗಿಲ್ಲ.

ಅನ್ವರ್ ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕೆಂದು ಅನ್ವರ್ ಕುಟುಂಬದವರು ಚಿಕ್ಕಮಗಳೂರು ನಗರದಲ್ಲಿ ಅನೇಕ ಬಾರಿ ಪ್ರತಿಭಟನೆ ನಡೆಸಿ ಸರ್ಕಾರವನ್ನು ಆಗ್ರಹಿಸಿದ್ದರು. ಜತೆಗೆ ಕೊಲೆ ಆರೋಪಿಗಳನ್ನು ಶೀಘ್ರವೇ ಬಂಧಿಸಿ ಇಲ್ಲವೇ ದಯಾಮರಣಕ್ಕೆ ಅನುಮತಿ ನೀಡುವಂತೆ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದ ಘಟನೆ ನಡೆದಿತ್ತು.

ಕುಟುಂಬಸ್ಥರು ಪೊಲೀಸ್ ಇಲಾಖೆ, ರಾಜ್ಯ ಸರ್ಕಾರದ ಮೇಲೆ ಎಷ್ಟೇ ಒತ್ತಡ ತಂದರೂ ಕೊಲೆ ಆರೋಪಿಗಳ ಸುಳಿವಿಲ್ಲ. ಪ್ರಕರಣ ನಡೆದು ಆರು ವರ್ಷಗಳು ಕಳೆದಿದ್ದು, ನ್ಯಾಯಕ್ಕಾಗಿ ಮೊರೆ ಇಟ್ಟಿದ್ದ ಕುಟುಂಬ ಕೈಚೆಲ್ಲಿ ಕುಳಿತಿದೆ.

Advertisement

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಡಿಜಿಪಿ ಬಿ.ಕೆ.ಸಿಂಗ್ ಅವರು ಖುದ್ದು ತನಿಖೆಗೆ ಇಳಿದಿದ್ದಾರೆ. ಶನಿವಾರ ನಗರಕ್ಕೆ ಆಗಮಿಸಿದ ಅವರು, ಅನ್ವರ್ ಕೊಲೆ ನಡೆದ ಜಾಗ, ಅಲ್ಲಿನ ಮಾರ್ಗಗಳು‌ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪ್ರಕರಣದ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.

ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದ್ದರು.

ಎಡಿಜಿಪಿ ಬಿ.ಕೆ.ಸಿಂಗ್ ಅವರು ಈ ಹಿಂದೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಸದ್ಯ ಅನ್ವರ್ ಕೊಲೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದು, ನ್ಯಾಯಕ್ಕಾಗಿ ಹಂಬಲಿಸುತ್ತಿದ್ದ ಅನ್ವರ್ ಕುಟುಂಬದಲ್ಲಿ ಆಶಾ ಭಾವನೆ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next