Advertisement

ವಕ್ಫ್ ನಲ್ಲಿ ಘಟಾನುಘಟಿಗಳ ಹೆಸರು

11:44 PM Sep 22, 2022 | Team Udayavani |

ಬೆಂಗಳೂರು: ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಮಾಜಿ ಸಚಿವರಾದ ರೋಶನ್‌ಬೇಗ್‌,  ಇಕ್ಬಾಲ್‌ ಅನ್ಸಾರಿ ಸಹಿತ ಹಲವರ ವಿರುದ್ಧ ವಕ್ಫ್ ಜಮೀನು ಕಬಳಿಕೆ  ಹಾಗೂ ಕುಮ್ಮಕ್ಕು ಆರೋಪದ ಮೂಲಕ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಅನ್ವರ್‌ ಮಾಣಿಪ್ಪಾಡಿ ವರದಿ ಗುರುವಾರ ವಿಧಾನಪರಿಷತ್‌ನಲ್ಲಿ ಮಂಡಿಸಲಾಯಿತು.

Advertisement

ಕಲಬುರಗಿ ಜಿಲ್ಲೆಯ ಬಡೇಪುರದಲ್ಲಿ ಮಾಜಿ ಸಚಿವ ಖಮರುಲ್‌ ಇಸ್ಲಾಂ ಅವರು 8.34 ಎಕ್ರೆ, ವಕ್ಕಲಗೇರ ದರ್ಗಾದಲ್ಲಿ 2 ಎಕ್ರೆ ಅತಿಕ್ರಮಿಸಿದ್ದು, ಇದರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಕೈವಾಡವಿದೆ ಎನ್ನಲಾಗಿದೆ.

ಮಾಜಿ ಸಚಿವ ಹಿಂಡಸಗೇರಿ ಅವರು ಬೆಂಗಳೂರಿನ ಅಣ್ಣೇಪುರದಲ್ಲಿ 2.3 ಎಕ್ರೆ ಅತಿಕ್ರಮಿಸಿದ್ದಾರೆನ್ನಲಾಗಿದೆ. ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಅವರು ಕುಂಬಾರಪೇಟೆ ಯಲ್ಲಿರುವ ಸರ್ವೆ ನಂ.10ರಲ್ಲಿ ಜಾಗ ಅತಿಕ್ರಮಿಸಿದ್ದು, ಮಹ್ಮದ್‌ ಗೌಸ್‌ ಅವರು  ಮಕಾನ್‌ ರಸ್ತೆಯಲ್ಲಿ 7,329 ಚ.ಅ. ಅತಿಕ್ರಮಿಸಿದ್ದಾರೆ. ಇದೇ ರಸ್ತೆಯಲ್ಲಿ ಮಹಮದ್‌ ಗೌಡ್‌ ಎಂಬುವರು 7389 ಚ. ಅ. ಜಾಗ ಕಬಳಿಸಿದ್ದು , ತಹಾ ಎಜಕೇಶನ್‌ ಸೊಸೈಟಿ ಅಧ್ಯಕ್ಷರು ಆರ್ಮ್ಸ್ಟ್ರಾಂಗ್‌ ರಸ್ತೆಯಲ್ಲಿ 100-200 ನಿವೇಶನ ಕಬಳಿಸಿದ್ದಾರೆ. ಇದರ ಹಿಂದೆ ಮಾಜಿ ಸಚಿವ ರೋಶನ್‌ಬೇಗ್‌ ಅವರ ಕೈವಾಡ ಇದೆ ಎಂದು ಹೇಳಲಾಗಿದೆ.

ಎನ್‌.ಎ. ಹ್ಯಾರಿಸ್‌ ಬಡೇಪುರ ಗ್ರಾಮದಲ್ಲಿ 239.38 ಎಕ್ರೆ ಮತ್ತು ಅವರ ತಾಯಿ, ಹೆಂಡತಿ ಮತ್ತು ಆಪ್ತ ಸಹಾಯಕರ ಹೆಸರಿನಲ್ಲಿ 9.72 ಎಕ್ರೆಯನ್ನು ಗೆಜೆಟ್‌ ಅಧಿಸೂಚನೆ ಪ್ರಕಾರ ಮಾರಲಾಗಿದೆ.

ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ 2.09 ಎಕ್ರೆಯನ್ನು ಒತ್ತುವರಿ ಮಾಡಿರುವುದಾಗಿ ವರದಿಯಲ್ಲಿದೆ. ಮಾಜಿ ಸಂಸದ ನರಸಿಂಗ್‌ ರಾವ್‌ ಎಂಬವರು ಬೀದರ್‌ ತಾಲೂಕಿನ ಅಲಿಯಾಬಾದ್‌ ಗ್ರಾಮದಲ್ಲಿ 8.36 ಎಕ್ರೆಯನ್ನು ಅತಿಕ್ರಮಿಸಿದ್ದು, ಅದೇ ಗ್ರಾಮದಲ್ಲಿ ಮುತಾವಲಿಯ, ಸೈಯಿದಾಕಾತೂನ್‌ ಎಂಬವರು 31.37 ಎಕ್ರೆ ಅತಿಕ್ರಮಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Advertisement

410 ಲಕ್ಷ ಕೋಟಿ ರೂ. ಮೌಲ್ಯದ ವಕ್ಫ್ ಆಸ್ತಿಗಳ ಪೈಕಿ 2 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿಯನ್ನು  ಅತಿಕ್ರಮಿಸಿಕೊಳ್ಳಲಾಗಿದೆ. ಬಹಳಷ್ಟು ಅಲ್ಪಸಂಖ್ಯಾಕರ ಸಮುದಾಯದ ನೇತಾರರು ವಕ್ಫ್ ಆಸ್ತಿಗಳ ದುರುಪಯೋಗದಲ್ಲಿ ಭಾಗಿಯಾಗಿದ್ದಾರೆ. ವಕ್ಫ್ ಸಂಸ್ಥೆಗಳಿಗೆ ರಾಜ್ಯ ಸರಕಾರ ವಾರ್ಷಿಕ ನೂರಾರು ಕೋಟಿ ರೂ. ಅನುದಾನ ಒದಗಿಸಿದರೂ ಅದರ ವೆಚ್ಚದ ಬಗ್ಗೆ ಲೆಕ್ಕಪತ್ರ ಇಲ್ಲದಿರುವುದು ಹಗರಣ ನಡೆದಿರುವುದಕ್ಕೆ ಸಾಕ್ಷಿ ಎನ್ನಲಾಗಿದೆ.

ಪರಿಷತ್‌ನಲ್ಲಿ ರಾಜ್ಯ ಅಲ್ಪಸಂಖ್ಯಾಕರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್‌ ಮಾಣಿಪ್ಪಾಡಿಯವರ ವರದಿಯನ್ನು ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ವಿಪಕ್ಷಗಳ ಪ್ರತಿಭಟನೆ ನಡುವೆಯೂ ಮಂಡಿಸಿದರು.

ವರದಿ ಮಂಡನೆಯಾಗುತ್ತಿದ್ದಂತೆ ವಿಪಕ್ಷ ನಾಯಕ ಹರಿಪ್ರಸಾದ್‌ ಸಹಿತ ಹಲವು ಸದಸ್ಯರು ಚರ್ಚೆಗೆ ಅವಕಾಶ ಕೋರಿದರು. ಈ ವರದಿ ಮೂಲಕ ಹಲವು ನಾಯಕರ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡಲಾಗುತ್ತಿದೆ ಎಂದು  ಆರೋಪಿಸಿದರು. ಮಾಜಿ ಸಚಿವರಾದ ಸಿ.ಎಂ. ಇಬ್ರಾಹಿಂ, ಖಮರುಲ್‌ ಇಸ್ಲಾಂ ಮತ್ತಿತರ 12 ಮಂದಿ ವಕ್ಫ್ ಆಸ್ತಿಯನ್ನು ಕಬಳಿಸಿದ್ದಾರೆ ಎಂದು ಬಿಜೆಪಿ ಸದಸ್ಯ ಎನ್‌. ರವಿಕುಮಾರ್‌  ಹೇಳಿದರು. ಈ ವೇಳೆ ಕಾಂಗ್ರೆಸ್‌ ಸದಸ್ಯರು, ವರದಿ  ಇನ್ನೂ ಮಂಡನೆಯಾಗಿಲ್ಲ ಹೇಗೆ ಹೆಸರು ಹೇಳುತ್ತೀರಿ ಎಂದು ಪ್ರಶ್ನಿಸಿದರು. ಬಳಿಕ ವಾದ-ವಾಗ್ವಾದ ನಡೆದ ಪರಿಣಾಮ ಸಭಾಪತಿಗಳು ಸದನವನ್ನು ಶುಕ್ರವಾರಕ್ಕೆ ಮುಂದೂಡಿದರು.

Advertisement

Udayavani is now on Telegram. Click here to join our channel and stay updated with the latest news.

Next