Advertisement

ನೀರಿನ ರಭಸಕ್ಕೆ ಕೊಚ್ಚಿ ಹೋಗುವ ಭೀತಿಯಲ್ಲಿ ಕಾಲು ಸಂಕ: ಅಣುವಳ್ಳಿ ಗ್ರಾಮಸ್ಥರ ಆಕ್ರೋಶ

12:52 PM Jul 04, 2022 | Suhan S |

ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಅಣುವಳ್ಳಿಯಿಂದ ಮೇಗರವಳ್ಳಿಗೆ ಹೋಗಬೇಕೆಂದರೆ ಅಲ್ಲಿರುವ ಹಳ್ಳವನ್ನು ದಾಟಿಕೊಂಡು ಹೋಗಬೇಕು.

Advertisement

ನಾಲ್ಕು ವರ್ಷಗಳ ಹಿಂದೆ ಈ ಕಾಲು ಸಂಕ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದು ನಂತರ ಸಂಪರ್ಕ ಪೂರ್ಣ ಕಡಿತವಾಗಿದ್ದು ಈ ಹಳ್ಳಕ್ಕೆ ಅಲ್ಲಿನ ಗ್ರಾಮಸ್ಥರೆ ಎಲ್ಲಾ ಸೇರಿ ಗ್ರಾಮಪಂಚಾಯಿತಿ ಅನುದಾನ ದಿಂದ ಸತತ ನಾಲ್ಕು ವರ್ಷಗಳಿಂದ  ತಾತ್ಕಾಲಿಕವಾಗಿ ಅಡಿಕೆ ಮರದ ಸೇತುವೆ ( ಕಾಲು ಸಂಕ ) ಮಾಡಿಕೊಂಡಿದ್ದು ಅದರಲ್ಲಿ ನೆಡೆದುಕೊಂಡು ಹೋಗುತ್ತಿದ್ದರು ಆದರೆ ಈಗ ಈ ಕಾಲುಸಂಕದಲ್ಲಿ ನಡೆದುಕೊಂಡು ಹೋಗುವುದು  ಕಷ್ಟ ಸಾಧ್ಯವಾಗಿದೆ.

ಈ ಹಿಂದೆ ಹೊನ್ನೇತಾಳು ಗ್ರಾಮಪಂಚಾಯಿತಿ ವ್ಯಾಪ್ತಿಯ ಕೆಂದಾಳಬೈಲು ಸಮೀಪ ಕಾಲು ಸಂಕದಲ್ಲಿ  ಹಳ್ಳ ದಾಟುತ್ತಿರುವಾಗ ಶಾಲಾ ಬಾಲಕಿಯೊಬ್ಬಳು ನೀರಿನಲ್ಲಿ ಕೊಚ್ಚಿ ತೇಲಿ ಹೋದ ನಿದರ್ಶನ ಕೂಡ ನಮ್ಮ ಮುಂದಿದ್ದು ಈ ವಿಷಯ ಕೂಡ ರಾಜ್ಯ ಮಟ್ಟದಲ್ಲಿ ಸಂಚಲನ ಮೂಡಿಸಿತ್ತು. ತದನಂತರದಲ್ಲಿ ರಾಜ್ಯಾದ್ಯಂತ  ಕಾಲು ಸಂಕಗಳಿಗೆ ವಿಶೇಷ ಹಣವನ್ನಿಟ್ಟು ಎಲ್ಲಾ ಕಾಲು ಸಂಕಗಳು ನಿರ್ಮಾಣ ಮಾಡುವತ್ತ ಸರ್ಕಾರ ಮುಂದಾಗಿತ್ತು .

ಆದರೆ ಕೆಂದಾಳಬೈಲಿನ ಪಕ್ಕದ ಕೆಲವೇ ಕಿಲೋ ಮೀಟರ್ ದೂರದ ಊರಾದ  ಅಣುವಳ್ಳಿಯಲ್ಲಿ ಅರ್ಧ ಬರ್ಧ ( ಅರ್ಧ ಕಲ್ಲು ಚಪ್ಪಡಿ, ಅರ್ಧ ಅಡಿಕೆ ಮರ ) ಕಾಲು ಸಂಕ ಇರುವುದು ದುರಂತವೇ ಸರಿ.  ಅಣುವಳ್ಳಿ ಕಾಲು ಸಂಕದಲ್ಲಿ  ಪ್ರತಿನಿತ್ಯ ಶಾಲೆಗೆ ಹೋಗುವ ಮಕ್ಕಳು, ಕೆಲಸಕ್ಕೆ ಹೋಗುವವರು, ವಯೋ ವೃದ್ದರು ಎಲ್ಲರು ಕೂಡ ಇದರಲ್ಲಿಯೇ ನೆಡೆದುಕೊಂಡು ಹೋಗಬೇಕಾಗಿದೆ.

ಹಾಗೆಯೇ ಈ ಭಾಗದಲ್ಲಿ ವೀರಭದ್ರೇಶ್ವರ ದೇವಸ್ಥಾನವಿದ್ದು ಈ ದೇವಸ್ಥಾನಕ್ಕೆ ಹೋಗಬೇಕಾದರೆ ಅನೇಕ ಭಕ್ತಾದಿಗಳು ಇದೆ ಕಾಲು ಸಂಕವನ್ನು ಅವಲಂಬಿಸಬೇಕು. ಮಲೆನಾಡಿನ ಮಳೆ ಅಬ್ಬರ ಜೋರಾಗಿರುವುದರಿಂದ ತಾತ್ಕಾಲಿಕವಾಗಿ ನಿರ್ಮಾಣ ಮಾಡಿರುವ ಈ ಕಾಲು ಸಂಕ ನೀರಿನಲ್ಲಿ ಕೊಚ್ಚಿ ಹೋಗುವ ಸಾಧ್ಯತೆ ಇದ್ದು ಅಪಾಯ ಮುನ್ಸೂಚನೆ ನೀಡುತ್ತಿದೆ.  ಯಾವುದಾದರೂ ದುರಂತವಾಗುವ ಮುಂಚೆ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿ ಸೇತುವೆ ನಿರ್ಮಾಣ ಮಾಡಿಕೊಡಬೇಕೆಂದು ಅಲ್ಲಿನ ಗ್ರಾಮಸ್ಥರು ತಿಳಿಸಿದ್ದಾರೆ.

Advertisement

-ಶ್ರೀಕಾಂತ್ ವಿ ನಾಯಕ್ , ತೀರ್ಥಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next