ನವದೆಹಲಿ : 2023ರಲ್ಲಿ ನಡೆಯಲಿರುವ ಏಷ್ಯಾಕಪ್‌ಗೆ ಸಂಬಂಧಿಸಿದಂತೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರ ಹೇಳಿಕೆಗೆ ಪಾಕಿಸ್ಥಾನದ ಪ್ರತಿಕ್ರಿಯೆಗೆ ಸಂಬಂಧಿಸಿದಂತೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಗುರುವಾರ ತಿರುಗೇಟು ನೀಡಿದ್ದು, ”ಪಾಕಿಸ್ಥಾನದಲ್ಲಿ ಭದ್ರತಾ ಸಮಸ್ಯೆಗಳಿದ್ದು, ಮುಂದಿನ ವರ್ಷ ಭಾರತ ಪ್ರವಾಸ ಕೈಗೊಳ್ಳುವ ಬಗ್ಗೆ ಗೃಹ ಸಚಿವಾಲಯ ನಿರ್ಧರಿಸಲಿದೆ” ಎಂದು ಹೇಳಿದ್ದಾರೆ.
”ನೀವು ಯಾವುದೇ ಕ್ರೀಡೆಯಲ್ಲಿ ಭಾರತವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಭಾರತ ಕ್ರೀಡೆಗೆ ಅದರಲ್ಲೂ ಕ್ರಿಕೆಟ್‌ಗೆ ಸಾಕಷ್ಟು ಕೊಡುಗೆ ನೀಡಿದೆ. ಆದ್ದರಿಂದ, ಮುಂದಿನ ವರ್ಷ ವಿಶ್ವಕಪ್ ಆಯೋಜಿಸುತ್ತಿರುವುದು ಭವ್ಯವಾದ ಮತ್ತು ಐತಿಹಾಸಿಕ ಘಟನೆಯಾಗಿದೆ. ಪಾಕಿಸ್ಥಾನದಲ್ಲಿ ಭದ್ರತಾ ಸಮಸ್ಯೆಗಳಿರುವುದರಿಂದ ಗೃಹ ಸಚಿವಾಲಯ ನಿರ್ಧಾರ ಕೈಗೊಳ್ಳಲಿದೆ. ಇದು ಕೇವಲ ಕ್ರಿಕೆಟ್ ಅಲ್ಲ. ಭಾರತ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿಲ್ಲ” ಎಂದು ಪಿಸಿಬಿಗೆ ತಿರುಗೇಟು ನೀಡಿದ್ದಾರೆ.
”ಇದು ಬಿಸಿಸಿಐನ ವಿಷಯವಾಗಿದ್ದು, ಅವರು ಈ ಬಗ್ಗೆ ಪ್ರತಿಕ್ರಿಯಿಸುತ್ತಾರೆ. ಭಾರತವು ಕ್ರೀಡಾ ಶಕ್ತಿಯಾಗಿದೆ, ಅಲ್ಲಿ ಅನೇಕ ವಿಶ್ವಕಪ್‌ಗಳನ್ನು ಆಯೋಜಿಸಲಾಗಿದೆ. 2023ರಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ಕೂಡ ನಡೆಯಲಿದೆ ಮತ್ತು ಪ್ರಪಂಚದಾದ್ಯಂತದ ಎಲ್ಲಾ ದೊಡ್ಡ ತಂಡಗಳು ಇದರಲ್ಲಿ ಭಾಗವಹಿಸಲಿವೆ ಎಂದು ಖೇಲೋ ಇಂಡಿಯಾ ಯೂತ್ ಗೇಮ್ಸ್ ಘೋಷಣೆಯ ಸಂದರ್ಭದಲ್ಲಿ ಠಾಕೂರ್ ಹೇಳಿಕೆ ನೀಡಿದ್ದಾರೆ.
ಮುಂದಿನ ವರ್ಷದ ಏಷ್ಯಾ ಕಪ್‌ಗಾಗಿ ಭಾರತ ತಂಡವು ಪಾಕಿಸ್ಥಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿಕೆಯ ಹಿನ್ನೆಲೆಯಲ್ಲಿ ಪಾಕಿಸ್ಥಾನ ಕ್ರಿಕೆಟ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ತುರ್ತು ಸಭೆಯನ್ನು ಕರೆಯಲು ವಿನಂತಿಸಿದ ಒಂದು ದಿನದ ನಂತರ ಸಚಿವರಿಂದ ಈ ಪ್ರತಿಕ್ರಿಯೆ ಬಂದಿದೆ.
ಭಾರತವು ಪಂದ್ಯಾವಳಿಗಾಗಿ ಪಾಕಿಸ್ಥಾನಕ್ಕೆ ಬರದಿದ್ದರೆ ಅಂತಹ ಕ್ರಮವು ಏಕದಿನ ವಿಶ್ವಕಪ್‌ನಲ್ಲಿ ನಮ್ಮ ಭಾಗವಹಿಸುವಿಕೆಗೆ ಧಕ್ಕೆ ತರಬಹುದು ಎಂದು ಪಿಸಿಬಿ ಹೇಳಿ ತುರ್ತು ಸಭೆ ಕರೆಯಲು ಕರೆ ನೀಡಿತ್ತು.