ನಿರ್ದೇಶಕ ಶ್ರೀನಿವಾಸರಾಜು ಕಂಚಿ ಶ್ರೀಗಳ ಕುರಿತು “ಆಚಾರ್ಯ ಅರೆಸ್ಟ್’ ಎಂಬ ಸಿನಿಮಾ ಮಾಡುತ್ತಾರೆಂಬ ಸುದ್ದಿ ಎಲ್ಲರಿಗೂ ಗೊತ್ತು. ತೆರೆಯ ಮೇಲೆ ಕಂಚಿ ಶ್ರೀಗಳಾಗಿ ನಟ ಕಮಲ್ ಹಾಸನ್ ಅಥವಾ ಬಾಲಿವುಡ್ ನಟ ಅನುಪಮ್ ಖೇರ್ ನಟಿಸುವ ಸಾಧ್ಯತೆ ಇದೆ. ಆದರೆ, ಇನ್ನೂ ಪಕ್ಕಾ ಆಗಿಲ್ಲ. ಇಷ್ಟರಲ್ಲೇ ಕಂಚಿ ಶ್ರೀ ಪಾತ್ರವನ್ನು ಯಾರು ಮಾಡುತ್ತಾರೆ ಎಂದು ಹೇಳುವುದಾಗಿ ತಿಳಿಸಿದ್ದರು ನಿರ್ದೇಶಕ ಶ್ರೀನಿವಾಸರಾಜು. ಈಗ ಅದಕ್ಕೆ ಉತ್ತರ ಕೊಟ್ಟಿದ್ದಾರೆ ಅವರು. ಕಂಚಿ ಶ್ರೀ ಪಾತ್ರಕ್ಕೆ ಅನುಪಮ್ ಖೇರ್ ಫಿಕ್ಸ್ ಆಗಿದ್ದಾರೆ.
ಇದನ್ನು ಸ್ವತಃ ಶ್ರೀನಿವಾಸರಾಜು ಅವರೇ ಸ್ಪಷ್ಟಪಡಿಸಿದ್ದಾರೆ. “ಕಮಲ್ ಹಾಸನ್ ಸದ್ಯಕ್ಕೆ ಬಿಜಿಯಾಗಿದ್ದು, ಅವರು ಈ ಚಿತ್ರದಲ್ಲಿ ನಟಿಸುತ್ತಿಲ್ಲ. ಅನುಪಮ್ ಖೇರ್ ಅವರ ಜತೆ ಕಥೆ ಮತ್ತು ಪಾತ್ರ ಕುರಿತು ಚರ್ಚೆ ನಡೆಸಿದ್ದು, ಅವರು ಪಾತ್ರ ನಿರ್ವಹಿಸಲು ಒಪ್ಪಿದ್ದಾರೆ. ಸದ್ಯದಲ್ಲೇ ಅಗ್ರೀಮೆಂಟ್ ಸಹ ಆಗಲಿದೆ. ಉಳಿದಂತೆ ಚಿತ್ರಕ್ಕೆ ರೆಹಮಾನ್ ಸಂಗೀತ ನೀಡುವ ಸಾಧ್ಯತೆ ಇದೆ. ಅವರೀಗ ಭಾರತದಲ್ಲಿ ಇಲ್ಲ. ಅವರು ವಿದೇಶದಲ್ಲಿರುವುದರಿಂದ ಮಾತುಕತೆ ತಡವಾಗುತ್ತಿದೆ.
ಒಂದು ವೇಳೆ ಅವರು ಈ ಚಿತ್ರಕ್ಕೆ ಸಂಗೀತ ನೀಡಲು ಸಾಧ್ಯವಾಗದಿದ್ದರೆ, ಇಳೆಯರಾಜ ಅವರೇ ಸಂಗೀತ ನೀಡಲಿದ್ದಾರೆ’ ಎಂದು ಹೇಳುವ ಶ್ರೀನಿವಾಸರಾಜು, “ಇದು ಕಂಚಿಶ್ರೀ ಅವರ ಬಂಧನದ ಹಿಂದೆ ಇರುವಂತಹ ಷಡ್ಯಂತ್ರ, ಅದರ ಹಿಂದೆ ಯಾರ್ಯಾರ ಕೈವಾಡವಿದೆ ಎಂಬುದನ್ನು ಹೇಳಲು ಹೊರಟಿದ್ದೇನೆ. ದೊಡ್ಡ ಮಟ್ಟದ ವ್ಯಕ್ತಿಗಳ ಷಡ್ಯಂತ್ರ ಎಂಥದ್ದು ಎಂಬುದು ಸಿನಿಮಾದಲ್ಲೇ ಗೊತ್ತಾಗಲಿದೆ. ಇಲ್ಲಿ ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳ ಕೈವಾಡವೂ ಇದೆ. ಅದನ್ನೆಲ್ಲಾ ಸೇರಿಸಿ, ಸಿನಿಮಾದಲ್ಲಿ ಹೇಳಲು ಹೊರಟಿದ್ದೇನೆ’ ಎನ್ನುತ್ತಾರೆ ಅವರು.
“ಈ ಚಿತ್ರವನ್ನು ಕನ್ನಡ ಸೇರಿದಂತೆ ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಯಲ್ಲಿ ತಯಾರಾಗಲಿದೆ. ಎಲ್ಲದಕ್ಕಿಂತ ದೊಡ್ಡ ಪ್ರಾಜೆಕ್ಟ್ ಇದಾಗಲಿದ್ದು, ಇದಕ್ಕಾಗಿ ಕಳೆದ ಎರಡು ವರ್ಷಗಳಿಂದಲೂ ಹಲವು ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ, ಒಂದಷ್ಟು ಮಾಹಿತಿ ಸಂಗ್ರಹಿಸಿದ್ದೇನೆ. ಈ ಚಿತ್ರವನ್ನು ಎನ್ಆರ್ಐ ಗೆಳೆಯರೊಬ್ಬರು ನಿರ್ಮಾಣ ಮಾಡುತ್ತಿದ್ದಾರೆ. ಸೆಪ್ಟೆಂಬರ್ ಹೊತ್ತಿಗೆ “ಆಚಾರ್ಯ ಅರೆಸ್ಟ್’ ಚಿತ್ರದ ಕೆಲಸಕ್ಕೆ ಚಾಲನೆ ಕೊಡುವುದಾಗಿ’ ಹೇಳುತ್ತಾರೆ ಅವರು.