Advertisement

ಅಂತ್ಯಾರಂಭ ಕೊಂಕಣಿ ಚಲನಚಿತ್ರ ಶೀಘ್ರ ಬಿಡುಗಡೆ: ಡಾ| ಕೆ. ರಮೇಶ್‌ ಕಾಮತ್‌ ನಿರ್ದೇಶನ

03:55 PM Oct 04, 2024 | Team Udayavani |

ಉದಯವಾಣಿ ಸಮಾಚಾರ
ಹೊನ್ನಾವರ: ತಮ್ಮ ಅಪ್ಸರಧಾರ ಕೊಂಕಣಿ ಮತ್ತು ಕನ್ನಡ ಚಲನಚಿತ್ರವನ್ನು ಉತ್ತರ ಕನ್ನಡದಲ್ಲಿ ಚಿತ್ರೀಕರಣ ಮಾಡಿ, ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ನೀಡಿದ್ದ ರಮೇಶ ಕಾಮತ್‌ ತಮ್ಮ ಇಳಿವಯಸ್ಸಿನಲ್ಲಿ ಅನಾರೋಗ್ಯದ ನಡುವೆಯೂ ಇನ್ನೊಂದು ಕೊಂಕಣಿ ಚಲನಚಿತ್ರವನ್ನು ಸಿದ್ಧಪಡಿಸಿದ್ದಾರೆ. ಅದು ನವೆಂಬರ್‌ ಮೊದಲ ವಾರದಲ್ಲಿ ತೆರೆಕಾಣಲಿದೆ.

Advertisement

ಪುಣೆ ಫಿಲಂ ಇನ್ಸಟಿಟ್ಯೂಟ್‌ ಪದವೀಧರ ಹಾಗೂ ಕೊಂಕಣಿ ಸಾಹಿತ್ಯ ಅಕೆಡಮಿ ಪ್ರಶಸ್ತಿ ವಿಜೇತ ಡಾ| ಕೆ. ರಮೇಶ್‌ ಕಾಮತ್‌ ಹೊಸ ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ದ ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಮಡಿಕೇರಿಯಲ್ಲಿ ಚಿತ್ರೀಕರಣ ಸಂಪೂರ್ಣಗೊಂಡಿದೆ. ಚಲನಚಿತ್ರವೂ ಆದಿತ್ಯ ಸಿನಿ ಕ್ರಿಯೇಷನ್ಸ್‌ ಬ್ಯಾನರ್‌ನಲ್ಲಿ ಕಿರಣ್ಮಯಿ ಕಾಮತ್‌ ನಿರ್ಮಿಸುತ್ತಿದ್ದಾರೆ.

ಅಲ್ಪ ಸಂಖ್ಯಾತರ ಭಾಷೆ ಕೊಂಕಣಿಯಲ್ಲಿ, ಸಾರಸ್ವತ ಕೊಂಕಣಿಯಲ್ಲಿ ಇದುವರೆಗೆ ತಯಾರಾದ ಚಿತ್ರಗಳೇ ಕೇವಲ ಎಂಟು. ಅದರಲ್ಲಿ ಮೂರು ಚಲನಚಿತ್ರಗಳನ್ನು ಡಾ| ರಮೇಶ್‌ ಕಾಮತ್‌ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಕೇವಲ ಭಾಷಾ ಅಭಿಮಾನದಿಂದ, ತಮ್ಮ 72ನೇ ವಯಸ್ಸಿನಲ್ಲಿ ಈಗ ನಾಲ್ಕನೇ ಕೊಂಕಣಿ ಚಲನಚಿತ್ರ ನಿರ್ದೇಶಿಸುತ್ತಿದ್ದಾರೆ. ಅಂತ್ಯಾರಂಭ ಸಾಧಾರಣ ಮನರಂಜನಾತ್ಮಕ ಚಿತ್ರವಾಗದೇ, ಒಂದು ತತ್ವಾಧಾರಿತ ಕಲಾತ್ಮಕ ಚಿತ್ರವಾಗಲಿದೆ.

ಜೀವನದ ವಿವಿಧ ಹಂತದಲ್ಲಿ ಮಾನವನಿಗೆ ಹಲವಾರು ಕಷ್ಟ – ಸಂಕಷ್ಟ ಎದುರಾಗುತ್ತೇವೆ. ಆ ಕಷ್ಟಕ್ಕೆ ಮಾನವ ಹೆದರಿ ಅದೇ ಜೀವನದ ಅಂತ್ಯ ಎಂದು ಭಾವಿಸುತ್ತಾನೆ. ಆದರೆ ಡಾ| ಕಾಮತ್‌ರು, ಸಿನಿಮಾ ಕಥೆಯ ಮೂಲಕ ಜೀವನ ಪಯಣದಲ್ಲಿ ಅಂತ್ಯ ಎಂಬುದೇ ಇಲ್ಲ, ಅದು ಹೊಸ ಆರಂಭಕ್ಕೆ ನಾಂದಿ ಹಾಡುತ್ತದೆ ಎಂಬ ಗಹನ ತತ್ವ ತಿಳಿಸುತ್ತಾರೆ.

Advertisement

ಸಿನಿಮಾದ ಪ್ರಮುಖ ಪಾತ್ರದಲ್ಲಿ ಹಿರಿಯ ವೃದ್ಧ ನಾಯಕನ ಪಾತ್ರದಲ್ಲಿ ಡಾ| ರಮೇಶ್‌ ಕಾಮತ್‌, ಯುವ ನಾಯಕನಾಗಿ ದಾಮೋದರ್‌ ನಾಯಕ್‌, ಯುವ ನಾಯಕಿಯಾಗಿ ಪ್ರಖ್ಯಾತ ರೂಪದರ್ಶಿ ಪ್ರತೀಕ್ಷಾ ಕಾಮತ್‌, ವಿಠೋಭ ಭಂಡಾರ್ಕರ್‌, ಸ್ಟಾನಿ ಆಲ್ವಾರೀಸ್‌, ಪ್ರಖ್ಯಾತ ಯಕ್ಷಿಣಿಗಾರ ಉದಯ್‌ ಜಾದೂಗಾರ್‌, ಶೀಲಾ ನಾಯಕ್‌, ವಸುಧಾ ಪ್ರಭು, ಅನಂತ್‌ ನಾಯಕ್‌ ಸಗ್ರಿ, ನರಸಿಂಹ ನಾಯಕ್‌, ಮಾಸ್ಟರ್‌ ಆದಿತ್ಯ ನಾಯಕ್‌, ಮಾಸ್ಟರ್‌ ಯತಾರ್ಥ, ಸಂದೀಪ್‌ ಮಲಾನಿ, ಪ್ರಕಾಶ್‌ ಕಿಣಿ, ಉಮೇಶ್‌ ಶೆಣೈ, ಕೃಷ್ಠಾ ನಾಯಕ್‌, ಆನಂದ ನಗರ್ಕರ್‌, ವಿನುತಾ ಕಿರಣ್‌, ಗೋವಿಂದರಾಯ್‌ ಶಾನಭೋಗ್‌, ಮತ್ತಿತರರು ಅಭಿನಯಿಸಿದ್ದಾರೆ.

ತಾಂತ್ರಿಕ ವರ್ಗದಲ್ಲಿ ಛಾಯಾಗ್ರಾಹಕರಾಗಿ ಪಿವಿಆರ್‌ ಸ್ವಾಮಿ, ಸಂಕಲನಕಾರರಾಗಿ ನಾಗೇಶ್‌, ಸಂಗೀತ ನಿರ್ದೇಶಕರಾಗಿ ಸುರೇಶ್‌, ಗಾಯಕರಾಗಿ ಶಂಕರ್‌ ಶಾನುಭೋಗ್‌ ಮತ್ತು ಸಂಭಾಷಣೆಯನ್ನು ಪ್ರಶಸ್ತಿ ವಿಜೇತ ಶಾ.ಮಂ. ಕೃಷ್ಣಾರಾಯರು ಬರೆದಿದ್ದಾರೆ.

ನಿರ್ಮಾಪಕಿ: ಕಿರಣ್ಮಯಿ ಕಾಮತ್‌ ಕಥೆ- ಚಿತ್ರಕಥೆ- ಗೀತೆ ರಚನೆ ಮತ್ತು ನಿರ್ದೇಶನ : ಡಾ| ಕೆ. ರಮೇಶ್‌ ಕಾಮತ್‌. ದಕ್ಷಿಣೋತ್ತರ ಕರಾವಳಿ ಜಿಲ್ಲೆಗಳಲ್ಲಿ ಕೊಂಕಣಿ ಭಾಷಿಕರು ಬಹುಸಂಖ್ಯೆಯಲ್ಲಿದ್ದು ತಮ್ಮ ಹಿಂದಿನ ಚಲನಚಿತ್ರಗಳಿಗೆ ನೀಡಿದಂತೆ ಪ್ರೋತ್ಸಾಹ
ನೀಡಬೇಕು ಎಂದು ಡಾ| ರಮೇಶ ಕಾಮತ್‌ವಿನಂತಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next