ಸಿರುಗುಪ್ಪ/ಹರಪನಹಳ್ಳಿ/ಕೂಡ್ಲಿಗಿ: ಕಾಂಗ್ರೆಸ್ ಎಂದರೆ ಭ್ರಷ್ಟಾಚಾರಿ, ಕೋಮುವಾದಿ, ಕ್ರಿಮಿನಲ್‌ಗಳ ಅಡ್ಡೆಯಾಗಿದೆ. ಕಾಂಗ್ರೆಸ್‌ನ ಅತೀ ಹೆಚ್ಚು ಮಂದಿ ಬೇಲ್ ಪಡೆದು ಹೊರಗೆ ತಿರುಗಾಡುತ್ತಿದ್ದಾರೆ. ಇವರೆಲ್ಲ ಬಿಜೆಪಿ ಸರಕಾರದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದರು.
ಬಳ್ಳಾರಿ ಜಿಲ್ಲೆಯ ಸಿರಗುಪ್ಪ, ವಿಜಯನಗರ ಜಿಲ್ಲೆಯ ಹರಪನಹಳ್ಳಿ ಹಾಗೂ ಕೂಡ್ಲಿಗಿಯಲ್ಲಿ ರವಿವಾರ ಬಿಜೆಪಿ ಪರ ರೋಡ್ ಶೋ ಪ್ರಚಾರ ನಡೆಸಿ ಮಾತನಾಡಿದ ಅವರು, ಭ್ರಷ್ಟಾಚಾರದ ಪ್ರಕರಣಗಳಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೆಲ್ಲ ಬೇಲ್ ಪಡೆದು ಹೊರಗೆ ತಿರುಗಾಡುತ್ತಿದ್ದಾರೆ. ಇವರೆಲ್ಲ ಕರ್ನಾಟಕದಲ್ಲಿರೋದು ಶೇ. 40 ಕಮಿಷನ್ ಸರಕಾರ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಇವರ ಬಾಯಲ್ಲಿ ಭ್ರಷ್ಟಾಚಾರ ವಿರೋಧಿ ಮಾತು ಬರುತ್ತಿರುವುದೇ ಹಾಸ್ಯಾಸ್ಪದ. ಇವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ ಎಂದರು.
ಭ್ರಷ್ಟಾಚಾರದ ಗೂಬೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಸರಕಾರವನ್ನು ಭ್ರಷ್ಟ ಸರ್ಕಾರ ಎಂದು ದೂರುತ್ತಿದ್ದಾರೆ. ಇವರ ಅಧಿಕಾರದ ಅವಧಿಯಲ್ಲಿ ಪೊಲೀಸ್, ಶಿಕ್ಷಕರ ನೇಮಕಾತಿ, ಸ್ಟೀಲ್ ಬ್ರಿಡ್ಜ್, ಅರ್ಕಾವತಿ, ಬಿಬಿಎಂಪಿ, ಬೋರ್‌ವೆಲ್ ಹಗರಣ ಹೀಗೆ ಸಾಲು ಸಾಲು ಹಗರಣಗಳಾಗಿವೆ. ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರ ಮುಚ್ಚಿಹಾಕಲು ಸಿದ್ದರಾಮಯ್ಯ ಬಿಜೆಪಿ ಸರಕಾರದ ಮೇಲೆ ಭ್ರಷ್ಟಾಚಾರದ ಗೂಬೆ ಕೂರಿಸುತ್ತಿರುವುದು ಸರಿಯಲ್ಲ ಎಂದರು. ಭ್ರಷ್ಟಾಚಾರವನ್ನು ಪೋಷಿಸುತ್ತಿರುವ ಕಾಂಗ್ರೆಸ್ ಬೇಕೋ ಅಥವಾ ಅಭಿವೃದ್ಧಿಪರವಾಗಿರುವ ಬಿಜೆಪಿ ಬೇಕೋ ಎನ್ನುವುದನ್ನು ಮತದಾರರು ನಿರ್ಣಯಿಸುವ ಕಾಲ ಬಂದಿದ್ದು, ಉತ್ತಮ ಭವಿಷ್ಯಕ್ಕಾಗಿ ಬಿಜೆಪಿ ಬೆಂಬಲಿಸಿ ಎಂದು ಕರೆ ನೀಡಿದರು.
ಡಬಲ್ ಎಂಜಿನ್ ಸರಕಾರ ಎಸ್‌ಸಿ-ಎಸ್‌ಟಿ ಹಾಗೂ ಹಿಂದುಳಿದ ಬಡವರ ಪರವಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದೆ. ರಾಜ್ಯದ ಎಲ್ಲ ವರ್ಗದ ಜನರಿಗೆ ಮೀಸಲಾತಿ ಹೆಚ್ಚಳ ಮಾಡಲು ಬಿಜೆಪಿ ಸರಕಾರ ಬದ್ದವಾಗಿದೆ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೊಟ್ಟ ಮೀಸಲಾತಿ ರದ್ದುಪಡಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಅವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಬಿಜೆಪಿ ಸರಕಾರದಿಂದ ಮಾತ್ರ ಪ್ರಗತಿ ಸಾಧ್ಯ ಎಂದರು.
ಕಾಂಗ್ರೆಸ್‌ಗೆ ನಡ್ಡಾ ಸವಾಲು
ಬಿಜೆಪಿ ಈ ಹಿಂದೆ ಪಿಎಫ್ಐ ಸಂಘಟನೆಯನ್ನು ನಿಷೇಧಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿತ್ತು. ಹಾಗೆಯೇ ನಡೆದುಕೊಂಡಿದೆ. ಈಗ ಬಜರಂಗ ದಳ ನಿಷೇಧಿಸುವುದಾಗಿ ಪ್ರಣಾಳಿಕೆಯಲ್ಲಿ ಪ್ರಸ್ತಾವಿಸಿರುವ ಕಾಂಗ್ರೆಸ್, ತಾಕತ್ತಿದ್ದರೆ ಮಾಡಿ ತೋರಿಸಲಿ ಎಂದು ನಡ್ಡಾ ಸವಾಲು ಹಾಕಿದರು.