ರಾಮನಗರ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ನಗರದ ಅಂಚೆ ಕಚೇರಿಯ ಮುಂಭಾಗ ಧರಣಿ ಕುಳಿತ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಪೆಟ್ರೋಲ್ ಮತ್ತು ಡೀಸೆಲ್ ಏರಿಕೆ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಮಾತಿನ ಚಾಟಿ ಬೀಸಿದರು.
ಈ ವೇಳೆ ಮಾತನಾಡಿದ ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್, ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ತೊಲ ಗುವವರೆಗೂ ಈ ದೇಶ ಉದ್ಧಾರವಾಗೊಲ್ಲ ಎಂದು ಹರಿಹಾಯ್ದರು. ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿರುವುದು ಅಗತ್ಯ ವಸ್ತು ಗಳ ಮೇಲೂ ಪರಿಣಾಮ ಬೀರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನೋಟು ಅಮಾನ್ಯ, ಜಿಎಸ್‌ಟಿ ತೆರಿಗೆ ಪದ್ಧತಿ ಹೇರಿಕೆ ವಿಚಾರದಲ್ಲಿ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಬಗ್ಗೆ ತಮ್ಮ ಪಕ್ಷ ಎಚ್ಚರಿಸಿತ್ತು.
ಆದರೆ ಮೋದಿ ಸರ್ಕಾರ ಅದನ್ನು ಕಡೆಗಣಿಸಿದೆ. ಕಪ್ಪು ಣ ತರ್ತೀವಿ ಅಂತ ಸುಳ್ಳು ಹೇಳಿ ಜನರಲ್ಲಿ ಆಸೆ ಹುಟ್ಟಿಸಿ ಜನಧನ್ ಖಾತೆ ಮಾಡಿಸಿದ್ದಾರೆ. ಬ್ಯಾಂಕ್ ಖಾತೆಗೆ ನಯಾ ಪೈಸೆ ಬರಲಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತಿವಿ ಎಂದಿದ್ದು ಸಹ ಸುಳ್ಳಾಗಿದೆ ಎಂದರು. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಭೂ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಇವೆಲ್ಲ ರೈತ ವಿರೋಧಿ, ಜನಸಮಾನ್ಯ ವಿರೋಧಿ ನೀತಿಗಳು ಎಂದು ಟೀಕಾ ಪ್ರಹಾರ ನಡೆಸಿದರು.
ಬೆಲೆ ಏರಿಕೆಗೆ ಸಮರ್ಥನೆ ಏನು?: ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಮಾತನಾಡಿ, ಕಳೆದ ಕೆಲವು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರ ಏರುತ್ತಿದೆ. ಕಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ ಬೆಳೆ ಏರಿಕೆ ಏಕೆ ಎಂಬುದು ಅರ್ಥವಾಗುತ್ತಿಲ್ಲ. ಬೆಲೆ ಏರಿಕೆ ಏಕೆ ಎಂಬ ಸಮರ್ಥನೆಯನ್ನು ಕೇಂದ್ರ ಸರ್ಕಾರ ಕೊಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
2014ರಲ್ಲಿ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಪೆಟ್ರೋಲ್ ಮೇಲಿನ ಎಕ್ಸೈಸ್ ಡ್ಯೂಟಿ 9.20 ರೂ. ಇತ್ತು. ಡೀಸೆಲ್ ಮೇಲಿನ ಎಕ್ಸೈಸ್ ಡ್ಯೂಟಿ 3.46 ರೂ. ಇತ್ತು. ಕಳೆದ ಆರು ವರ್ಷದಲ್ಲಿ ಪೆಟ್ರೋಲ್ ಮೇಲಿನ ಎಕ್ಸೈಸ್ ಡ್ಯೂಟಿ 23.78 ರೂ. ಮತ್ತು ಡೀಸಲ್ ಮೇಲಿನ ಎಕ್ಸೈಸ್ ಡ್ಯೂಟಿ 28.37 ರೂ.ಗೆ ಏರಿಕೆಯಾಗಿದೆ. ತೆರಿಗೆ ಏರಿಸಿ ಜನರ ಜೀವನವ ನ್ನು ಮೋದಿ ಸರ್ಕಾರ ಸಂಕಷ್ಟಕ್ಕೆ ದೂಡಿದೆ ಎಂದು ದೂರಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್, ಕೆಪಿಸಿಸಿ ಕಾರ್ಯದರ್ಶಿ ಸೈಯದ್ ಜಿಯಾವುಲ್ಲಾ, ಪ್ರಮುಖರಾದ ಕೆ. ಶೇಷಾದ್ರಿ, ವಿ.ಎಚ್.ರಾಜು, ಪಾರ್ವತಮ್ಮ, ರಾಂಪುರ ನಾಗೇಶ್, ಸಿಎನ್‌ಆರ್ ವೆಂಕಟೇಶ್, ಲೋಹಿತ್ ಬಾಬು, ಜಯಮ್ಮ, ಸಮದ್, ನರಸಿಂಹ ಮೂರ್ತಿ ಇದ್ದರು. ರಾಷ್ಟ್ರಪತಿಗಳಿಗೆ ಮಾಡಿಕೊಂಡಿರುವ ಮನವಿ ಯನ್ನು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರಿಗೆ ಸಲ್ಲಿಸಿದರು.