ದಾವಣಗೆರೆ: ರಾಜ್ಯ, ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯಿಂದಾಗಿ ಕಾರ್ಮಿಕ ವರ್ಗ ಇಂದು ಸಂಕಷ್ಟಕ್ಕೆ ಸಿಲುಕಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ್ ಆರೋಪಿಸಿದ್ದಾರೆ. ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಕಟ್ಟ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್(ಸಿಐಟಿಯು)ನ ಜಿಲ್ಲಾ ಸಮಿತಿಯಿಂದ ಕಟ್ಟಡ ಕಾರ್ಮಿಕರ ಜಿಲ್ಲಾಮಟ್ಟದ ಸಮಾವೇಶ ಉದ್ಘಾಟಿಸಿ, ಮಾತನಾಡಿದರು.
ಸರ್ಕಾರದ ಆರ್ಥಿಕ ನೀತಿಗಳಿಂದಾಗಿ ಬಡ ಕಟ್ಟಡ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು. ಚಳಿ, ಬೇಸಿಗೆ ಕಾಲದಲ್ಲಿ ಕಟ್ಟಡ ಕಾರ್ಮಿಕರಿಗೆ ಸಾಕಷ್ಟು ಕಾಮಗಾರಿ ಸಿಗುತ್ತವೆ. ಆದರೆ, ಸರ್ಕಾರಗಳ ತಪ್ಪು ನೀತಿಯಿಂದಾಗಿ ಕಾರ್ಮಿಕರು ಕೆಲಸ ಇಲ್ಲದೆ ಕಾಲ ಕಳೆಯುವ ಸ್ಥಿತಿ ಬಂದಿದೆ. ಮರಳು ಸಿಗದೇ ಇರುವುದು, ನೋಟು ರದ್ದತಿ ಕ್ರಮದಿಂದ ಈ ಬಾರಿ ಸುಮಾರು 4.5 ಕೋಟಿ ಜನ ಬೀದಿಪಾಲಾಗಿದ್ದಾರೆ ಎಂದು ಹೇಳಿದರು.
ಕಟ್ಟಡ ನಿರ್ಮಾಣಕ್ಕೆ ಅಗತ್ಯವಾಗಿ ಬೇಕಾದ ಎಲ್ಲಾ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ಸಾಲದ್ದಕ್ಕೆ ಸರ್ಕಾರದ ಮರಳು ನೀತಿಯಿಂದ ಕಾಮಗಾರಿಗೆ ಮರಳು ಸಿಗದಂತಾಗಿದೆ. ಎಂ-ಸ್ಯಾಂಡ್ ಗುಣಮಟ್ಟಕ್ಕೆ ಖಾತ್ರಿ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಮರಳುಗಾರಿಕೆಗೆ ಸರ್ಕಾರ ಅವಕಾಶ ಕೊಡಬೇಕು. ಎಂ-ಸ್ಯಾಂಡ್ ಬಗೆಗಿನ ಗೊಂದಲಗಳನ್ನು ನಿವಾರಿಸುವ ಕೆಲಸವಾಗಬೇಕು ಎಂದು ಆಗ್ರಹಿಸಿದರು.
ಭ್ರಷ್ಟಾಚಾರ, ಕಪ್ಪುಹಣ, ಭಯೋತ್ಪಾದನೆ, ನಕಲು ನೋಟು ಹಾವಳಿ ತಡೆಗಟ್ಟುವ ಸಲುವಾಗಿ ನೋಟ್ ರದ್ಧತಿ ಮಾಡಿದ್ದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೊಂಡರು. ಆದರೆ, ಇದರಿಂದಾಗಿ ಈಗಲೂ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ. ಸಾಲ ಮರುಪಾವತಿಸದ ಉದ್ಯಮಿಗಳಿಂದ ದಿವಾಳಿ ಸ್ಥಿತಿಯಲ್ಲಿದ್ದ ಬ್ಯಾಂಕುಗಳನ್ನು ರಕ್ಷಿಸುವ ಸಲುವಾಗಿ ನೋಟ್ ಬ್ಯಾನ್ ಮಾಡಲಾಗಿದೆ ಎಂದು ಆರೋಪಿಸಿದರು.
ಬೆಲೆ ಏರಿಕೆಗೆ ತಕ್ಕಂತೆ ಕಟ್ಟಡ ಕಾರ್ಮಿಕರ ಕೂಲಿ ಹೆಚ್ಚಿಸಬೇಕು. ಕನಿಷ್ಟ 3 ಸಾವಿರ ರೂ. ಮಾಸಿಕ ಪಿಂಚಣಿ ನೀಡಬೇಕು. ಎಲ್ಲಾ ಕಾರ್ಮಿಕರಿಗೆ ವಸತಿ, ನಿವೇಶನ ಸೌಲಭ್ಯ ಕಲ್ಪಿಸಬೇಕು. ಮƒತ ಕಾರ್ಮಿಕರ ಕುಟುಂಬಕ್ಕೆ ನೀಡುವ ಪರಿಹಾರ ಮೊತ್ತವನ್ನು ಈಗಿರುವ 3 ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಳ ಮಾಡಬೇಕು. ಕಲ್ಯಾಣ ಮಂಡಳಿಯಲ್ಲಿ ಸೆಸ್ ರೂಪದಲ್ಲಿ ಸಂಗ್ರಹಗೊಂಡಿರುವ 5400 ಕೋಟಿ ಹಣವನ್ನು ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಬೇಕು ಎಂದು ಒತ್ತಾಯಿಸಿದರು.
ಫೆಡರೇಷನ್ ತಾಲೂಕು ಅಧ್ಯಕ್ಷ ತಿಮ್ಮಣ್ಣ ಹೊನ್ನೂರು ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ಜಿಲ್ಲಾ ಗೌರವಾಧ್ಯಕ್ಷ ಕೆ.ಲಕ್ಷ್ಮೀ ನಾರಾಯಣಭಟ್, ಸಂಚಾಲಕ ಜೆ. ಲೋಕೇಶ ನಾಯ್ಕ, ಇ.ಶ್ರೀನಿವಾಸ, ಎಂ.ಡಿ. ರμಕ್ ಮತ್ತಿತರರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.