ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ಮೂರೇ ತಿಂಗಳಲ್ಲಿ ಜನಾಕ್ರೋಶ ವ್ಯಕ್ತವಾಗಿದ್ದು, ಆಡಳಿತ ವಿರೋಧಿ ಅಲೆ ಎದುರಾಗಿದೆ. ಇಂತಹ ಸರಕಾರದ ವಿರುದ್ಧ ಸಂಘಟಿತ ಹೋರಾಟ ಆಗಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಶನಿವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣ ಸದಾಕಾಲ ಒಂದೇ ರೀತಿ ಇರುವುದಿಲ್ಲ. ಏನು ಸಾಧಿಸಿದ್ದಾರೆ ಎಂದು ಕಾಂಗ್ರೆಸಿಗರಿಗೆ ಮುಂದಿನ ದಿನಗಳಲ್ಲಿ ಜನರು ಸ್ಥಾನ ಕೊಡಬೇಕು? ಲೂಟಿ ಮಾಡಿದ ಹಣದಲ್ಲಿ ಜನರನ್ನು ಕೊಂಡುಕೊಳ್ಳಬಹುದು ಎಂದುಕೊಂಡಿದ್ದರೆ ಅದು ಸಾಧ್ಯವಿಲ್ಲ ಎಂದರು.
ಕರ್ನಾಟಕ ಸಂಕಷ್ಟದಲ್ಲಿದೆ. ತೀವ್ರ ಬರ-ನೆರೆ, ಅನಧಿಕೃತ ಲೋಡ್ ಶೆಡ್ಡಿಂಗ್, ಕಾವೇರಿ ಬಿಕ್ಕಟ್ಟಿನಿಂದ ತತ್ತರಿಸುತ್ತಿದೆ. ಅನ್ನ ಕೊಡುವ ರೈತರನ್ನು, ತೆರಿಗೆ ತೆರುವ ನಾಗರಿಕರನ್ನು ಕಸದಂತೆ ಕಡೆಗಣಿಸಲಾಗಿದೆ. ಈ ಸಂಕಷ್ಟದ ದಿನಗಳಲ್ಲಿ ನಾವು ಜನರ ಜತೆ ಬದ್ಧತೆಯಿಂದ ನಿಲ್ಲಬೇಕಾಗಿದೆ. ಜನಪರ ನಿಲುವು, ಹೋರಾಟ ನಮ್ಮೆಲ್ಲರ ಹೊಣೆ, ನೈತಿಕ ಜವಾಬ್ದಾರಿ ಎಂದರು.
ಸೋತಿದ್ದೇವೆ ನಿಜ. ಸೋಲೇ ಕೊನೆಯಲ್ಲ. ಈ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಬೆಂಗಳೂರು ಅರಮನೆ ಮೈದಾನದಲ್ಲಿ ಸೆ.10ರಂದು ಬೆಳಗ್ಗೆ 10.30ಕ್ಕೆ ಮಹತ್ವದ ಸಭೆ ಕರೆದಿದ್ದೇವೆ. ಪಕ್ಷದ ಉಳಿವು, ಗೆಲುವಿಗಾಗಿ ಅವಿರತವಾಗಿ ಶ್ರಮಿಸೋಣ ಎಂದು ಕರೆ ನೀಡಿದರು.
ಮುಂದಿನ ದಿನಗಳಲ್ಲಿ ಉತ್ತರ
ನಾಯಿ ಹಸಿದಿತ್ತು, ಅನ್ನ ಹಳಸಿತ್ತು ಎಂದು ಕಾಂಗ್ರೆಸ್‌ನ ಯಾರೋ ಒಬ್ಬರು ಹೇಳಿದ್ದಾರೆ. 2018ರಲ್ಲಿ ಯಾವ ಅನ್ನ ಹಳಸಿತ್ತು? ಯಾವ ನಾಯಿ ಹಸಿದಿತ್ತು ಎಂಬುದನ್ನು ಅವರು ಸ್ಪಷ್ಟಪಡಿಸಬೇಕಾಗಿದೆ. ಅಂದು ನಮ್ಮ ಮನೆ ಬಾಗಿಲಿಗೆ ಬಂದಿದ್ದವರು ಯಾರು ಎಂದು ಪ್ರಶ್ನಿಸಿದರಲ್ಲದೆ, ಜೆಡಿಎಸ್ ಅನ್ನು ಮುಗಿಸಿಬಿಟ್ಟಿದ್ದೇವೆ ಎನ್ನುವ ಅಮಲಿನಲ್ಲಿ ಕೆಲವರು ತೇಲುತ್ತಿದ್ದಾರೆ. ಎಲ್ಲದಕ್ಕೂ ಮುಂದಿನ ದಿನಗಳಲ್ಲೂ ಉತ್ತರ ಸಿಗಲಿದೆ ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದರು.