Advertisement

ಸುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡಿ

05:30 PM Aug 05, 2018 | Team Udayavani |

ಗದಗ: ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಶ್ರಿತ ರೋಗವಾಹಕ ನಿಯಂತ್ರಣಾ ಅಧಿಕಾರಿಗಳ ಕಚೇರಿ, ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಹಯೋಗದಲ್ಲಿ ಶನಿವಾರ ತಾಲೂಕಿನ ಅಡವಿಸೋಮಾಪುರ ಗ್ರಾಮದಲ್ಲಿ ಡೆಂಘೀ ವಿರೋಧಿ ಮಾಸಾಚರಣೆ ಅಂಗವಾಗಿ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಂದ ಜಾಗೃತಿ ಜಾಥಾ ನಡೆಯಿತು.

Advertisement

ಬಳಿಕ ಗೋಣಿಬಸವೇಶ್ವರ ದೇವಸ್ಥಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಡಾ| ಎಸ್‌.ಎಂ. ಓಣಿ, ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಸೊಳ್ಳೆಗಳಿಂದ ಬರುತ್ತದೆ. ಶತಮಾನದಿಂದಲೂ ಸೊಳ್ಳೆಗಳು ಮನುಕುಲಕ್ಕೆ ಮಾರಿಯಾಗಿ ಪರಿಣಮಿಸಿವೆ. ಜೂನ್‌, ಜುಲೈ ಹಾಗೂ ಆಗಸ್ಟ್‌ ತಿಂಗಳ ಮಳೆಗಾಲದಲ್ಲಿ ಸೊಳ್ಳೆಗಳು ಹೆಚ್ಚಾಗಿ ಉತ್ಪತ್ತಿಯಾಗುತ್ತವೆ. ಶುದ್ಧ ನೀರಿನಲ್ಲಿ ಈಡೀಸ್‌ ಈಜೀಪ್ಟ್ಯೆ ಸೊಳ್ಳೆಗಳು ಮೊಟ್ಟೆಯಿಟ್ಟು ತನ್ನ ವಂಶಾಭಿವೃದ್ಧಿ ಮಾಡುತ್ತವೆ. ಅಂತಹ ಸೊಳ್ಳೆಗಳು ಕಚ್ಚುವುದರಿಂದ ಮಾನವನ ದೇಹದಲ್ಲಿ ಬಿಳಿರಕ್ತ ಕಣಗಳು ನಾಶವಾಗಿ ಡೆಂಘೀ, ಚಿಕೂನ್‌ಗುನ್ಯಾ ಹರಡುತ್ತವೆ. ಕೆಲವೊಮ್ಮೆ ಜನರ ಸಾವಿಗೂ ಅವು ಕಾರಣವಾಗುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.

ಡೆಂಘೀ, ಚಿಕೂನ್‌ಗುನ್ಯಾ ರೋಗಗಳಿಂದ ಜನರು ಭಯಭೀತರಾಗುವುದಕ್ಕಿಂತ ಮನೆಯ ನೀರಿನ ಪರಿಕರಗಳಲ್ಲಿ ಈಡೀಸ್‌ ಈಜೀಪ್ಟ್ಯೆಸೊಳ್ಳೆಗಳು ಉತ್ಪತ್ತಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಮಲೇರಿಯಾದಂತ ರೋಗಗಳಿಂದ ಮುಕ್ತರಾಗಬೇಕು. ಯಾವುದೇ ಸಮಯದಲ್ಲಿ ಸ್ವಲ್ಪ ಜ್ವರ ಕಾಣಿಸಿಕೊಂಡರೂ ವೈದ್ಯರಲ್ಲಿ ಚಿಕಿತ್ಸೆ ಪಡೆಯಬೇಕು. ಪ್ರಥಮ ಉಪಚಾರವಾಗಿ ಜ್ವರದ ಮಾತ್ರೆಗಳು, ಪಪ್ಪಾಯಿ ಎಲೆಯ ರಸವನ್ನು ರೋಗಿಗಳಿಗೆ ನೀಡುವುದು ಉತ್ತಮವೆಂದು ಸಲಹೆ ನೀಡಿದರು.

ಆರೋಗ್ಯ ಸಹಾಯಕ ಮತ್ತು ಮೇಲ್ವಿಚಾರಕರ ಸಂಘದ ಜಿಲ್ಲಾಧ್ಯಕ್ಷ ಸಿದ್ದಪ್ಪ ಎನ್‌. ಲಿಂಗದಾಳ, ಪ್ರಾಥಮಿಕ ಶಾಲಾ ಶಿಕ್ಷಕರಾದ ಬಿ.ಕೆ. ಕಲ್ಲೊಳ್ಳಿ, ಮಂಜುನಾಥ ದೊಡ್ಡಮನಿ, ಆರೋಗ್ಯ ಸಹಾಯಕರಾದ ಎಸ್‌.ಬಿ. ಗಡಾದ, ಬಿ.ಸಿ. ಹಿರೇಹಾಳ, ಮಹಿಳಾ ಆರೋಗ್ಯ ಸಹಾಯಕಿ ಎಂ.ಎನ್‌. ದಂಡೀನ್‌, ಆಶಾ ಕಾರ್ಯಕರ್ತೆಯರಾದ ಮಾಲಾ ಮೇವುಂಡಿ, ಮೀನಾಕ್ಷಿ ವಡ್ಡರ, ರೇಣುಕಾ ಪುರದ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next