ಬಾಗಲಕೋಟೆ: ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತರು ಆಡಳಿತದಲ್ಲಿ ದಲಿತ ವಿರೋಧ ನೀತಿ ಅನುಸರಿಸುತ್ತಿದ್ದು, ಅವರನ್ನೂ ಸೇವೆಯಿಂದ ವಜಾಗೊಳಿಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಸಾಗರ ಬಣ) ಜಿಲ್ಲಾ ಸಮಿತಿ ಒತ್ತಾಯಿಸಿದೆ. ಬುಧವಾರ ಜಿಲ್ಲೆಗೆ ಆಗಮಿಸಿದ್ದ ಶಿಕ್ಷಣ ಸಚಿವ ಸುರೇಶಕುಮಾರ ಅವರಿಗೆ ಮನವಿ ಸಲ್ಲಿಸಿದ ಸಮಿತಿ ಪದಾಧಿಕಾರಿಗಳು, ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರ ಕಾರ್ಯವೈಖರಿ ಕುರಿತು ಆಕ್ರೋಶ ವ್ಯಕ್ತಪಡಿಸಿದರು.
ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ದಲಿತ ವಿರೋಧಿ ಧೋರಣೆ ಅತಿಯಾಗಿದ್ದು, ಇಲಾಖೆಯಲ್ಲಿ ಕೆಲಸ ನಿರ್ವಹಿಸುವ
ದಲಿತ ಅಧಿಕಾರಿಗಳು ಜಾತಿ ಕಾರಣಕ್ಕಾಗಿ ಕಿರುಕುಳ ಅನುಭವಿಸುವಂತಾಗಿದೆ. ಇವರ ಅಧಿಕಾರವಧಿಯಲ್ಲಿ ಹಲವಾರು ಜನ ದಲಿತ ಅಧಿಕಾರಿಗಳು ಅಮಾನತಿಗೆ ಒಳಗಾಗಿದ್ದು, ಈಗ ಬೆಳಗಾವಿ ವಿಭಾಗ ನಿರ್ದೇಶಕ ಡಾ| ಬಿ.ಕೆ.ಎಸ್. ವರ್ಧನ ಅವರು ತೀವ್ರ ಕಿರುಕುಳ ಅನುಭವಿಸಿ ನೊಂದು ಸಾರ್ವಜನಿಕವಾಗಿ ಬೆಂಬಲ ನಿರೀಕ್ಷಿಸುವಂತಾಗಿದೆ ಎಂದು ಸಮಿತಿ ಜಿಲ್ಲಾ ಸಂಚಾಲಕ ಪರಶುರಾಮ ಕಾಂಬಳೆ ಆರೋಪಿಸಿದರು.
ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳಿಂದಲೆ ಈ ರೀತಿ ಜಾತಿ ದೌರ್ಜನ್ಯ ನಡೆಯುತ್ತಿರುವುದು ಅಮಾನವೀಯ. ಹಲವಾರು ಎಸ್‌ಸಿ-ಎಸ್‌ಟಿ ಮತ್ತು ಅಲ್ಪಸಂಖ್ಯಾತ ಆಡಳಿತ ಮಂಡಳಿಗಳು ಕೂಡ ದೌರ್ಜನ್ಯ ಅನುಭವಿಸುತ್ತಿದ್ದು, ಕೆಲವರಿಗೆ ಅಧಿಕಾರದಿಂದ ಅಮಾನತು ಕೂಡ ಮಾಡಿದ್ದಾರೆ ಎಂದು ತಿಳಿಸಿದರು. ತಕ್ಷಣವೇ ಇವರ ಮೇಲೆ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅವರನ್ನು ಕೆಲಸದಿಂದ ವಜಾಗೊಳಿಸಬೇಕು. ಇಲ್ಲದಿದ್ದರೆ, ದಲಿತ ಪ್ರಗತಿಪರ ಸಂಘಟನೆಗಳು ಸೇರಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ
ನೀಡಿದರು.
ಜಿಲ್ಲಾ ಸಂಘಟನಾ ಸಂಚಾಲಕ ಬಸವರಾಜ ಹಳ್ಳದಮನಿ, ರಮೇಶ ಅನಗವಾಡಿ, ಜಿಲ್ಲಾ ಸಂಚಾಲಕ ಅಲ್ಪಸಂಖ್ಯಾತರ ಘಟಕದ ಕಾಸೀಂಅಲಿ ಗೋಠೆ, ವಿಜಯಪುರ ಜಿಲ್ಲಾ ಸಂಘಟನಾ ಸಂಚಾಲಕ ವೈ.ಸಿ. ಮಯೂರ, ತಾಲೂಕು ಸಂಚಾಲಕ ಪ್ರಕಾಶ ಮ್ಯಾಗೇರಿ, ನಗರ ಸಂಚಾಲಕ ಶಿವಕುಮಾರ ಸಿಂಗೆ ಇದ್ದರು.