ಹರಪನಹಳ್ಳಿ: ಜಮೀನಿನಲ್ಲಿ ಬಾಲಕಾರ್ಮಿಕರನ್ನು ದುಡಿಯಲು ಇಟ್ಟುಕೊಂಡರೆ ಬೀಜೋತ್ಪಾದನೆ ಮಾಡಲು ಬೀಜಗಳನ್ನು ಕೊಡುವುದಿಲ್ಲ ಎಂದು ಸಿಂಜೆಂಟಾ ಇಂಡಿಯಾ ಕಂಪನಿಯ ಹಾಗೂ ರೈತ ಮುಖಂಡ ಅರಸಿಕೇರಿ ಎನ್ .ಕೊಟ್ರೇಶ ಬೀಜೋತ್ಪಾದನಾ ರೈತರಿಗೆ ತಿಳಿಸಿದ್ದಾರೆ.
ತಾಲೂಕಿನ ಅರಸಿಕೇರಿ ಗ್ರಾಮದ ಕೋಲಶಾಂತೇಶ್ವರ ಮಠದ ಸಮುದಾಯ ಭವನದಲ್ಲಿ ಸೋಮವಾರ ವಿವಿಧ ಸೀಡ್ಸ್ ಕಂಪನಿಗಳು ಆಯೋಜಿಸಿದ್ದ ವಿಶ್ವ ಬಾಲ ಕಾರ್ಮಿಕರ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬೀಜೊತ್ಪಾದನೆ ಈ ಭಾಗದಲ್ಲಿ ಸಣ್ಣ ಮಟ್ಟದಲ್ಲಿ ಆರಂಭವಾಗಿ ಈಗ ದೊಡ್ಡ ಮಟ್ಟದಲ್ಲಿ ಬೆಳೆದಿದೆ.
ಮಲ್ಟಿನ್ಯಾಷನಲ್ ಕಂಪನಿಯವರು ಬಾಲಕಾರ್ಮಿಕರನ್ನು ಜಮೀನಿನಲ್ಲಿ ದುಡಿಯಲಿಕ್ಕೆ ಇಟ್ಟುಕೊಳ್ಳುವಂತಿಲ್ಲ ಎಂದು ಅಮೆಂಡಮೆಂಟ್ ಮಾಡಿದ್ದಾರೆ ಎಂದು ಹೇಳಿದರು. ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥ ಸಂಜೀವಯ್ಯ ಮಾತನಾಡಿ, ಸಮೀಕ್ಷೆ ಪ್ರಕಾರ ದೇಶದಲ್ಲಿ 1 ಕೋಟಿ ಬಾಲ ಕಾರ್ಮಿಕರಿದ್ದಾರೆ.
ಕರ್ನಾಟದಲ್ಲಿ 12 ಸಾವಿರ ಮಕ್ಕಳು ಇದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ 1200 ಮಕ್ಕಳು ಇದ್ದಾರೆ. ಬಾಲಕಾರ್ಮಿಕರ ಪರವಾಗಿ 224 ಕಾನೂನುಗಳಿವೆ ಎಂದು ಹೇಳಿದರು. 32 ಅಪಾಯಕರ ಕ್ಷೇತ್ರಗಳನ್ನು ಗುರುತಿಸಲಾಗಿದ್ದು, ಇಂತಹ ಕ್ಷೇತ್ರಗಳಲ್ಲಿ ಬಾಲಕಾರ್ಮಿಕರು ದುಡಿಯಬಾರದು.
ಅಕಸ್ಮಾತ್ ಬಾಲಕಾರ್ಮಿಕರನ್ನು ದುಡಿಸಿಕೊಂಡ ಮಾಲಕರಿಗೆ 20 ಸಾವಿರ ರೂ.ದಂಡ ಹಾಗೂ 1 ವರ್ಷ ಜೈಲು ಶಿಕ್ಷೆವಿದೆ ಎಂದು ಮಾಹಿತಿ ನೀಡಿದರು. ಸಿಂಜೆಂಟಾ ಕಂಪನಿಯ ಮಲ್ಲಿನಾಥ ವಿಭೂತಿ, ಜೆ.ಎಸ್ .ನಾಗರಾಜ, ರಾಜು ಮಾತನಾಡಿದರು. ಸಂತೋಷ, ನಟರಾಜ, ಕೃಷ್ಣೆಗೌಡ, ರವಿರಾಜ್ ಪ್ರಾಚಾರ್ಯ, ನಾರನಗೌಡರು, ಜಗದೀಶ ಮತ್ತಿತರರಿದ್ದರು.